ಮೆಕ್ಯಾನಿಕ್ ವೃತ್ತಿ ನಿಂದಿಸಿದ್ದಕ್ಕೆ ದೂರು

RemasterDirector_1a5c03258
RemasterDirector_1a5c03258
Published on

ಪಿರಿಯಾಪಟ್ಟಣ: ಕನ್ನಡ ಖಾಸಗಿ ವಾಹಿನಿಯ ರಿಯಾಲಿಟಿ ಶೋ ಒಂದರಲ್ಲಿ ಮೆಕ್ಯಾನಿಕ್ ವೃತ್ತಿಯ ಬಗ್ಗೆ ಕೀಳಾಗಿ ನಿಂದಿಸಿದ್ದು, ವಾಹಿನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದ್ವಿಚಕ್ರ ವಾಹನ ದುರಸ್ತಿಗಾರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಪೊಲೀಸ್ ಠಾಣೆಯಲ್ಲಿ ಗುರುವಾರ ದೂರು ದಾಖಲಿಸಿದ್ದಾರೆ.


ಸಂಘದ ಖಜಾಂಚಿ ರಾಕೇಶ್ ಎಂ.ರಾವ್ ಮಾತನಾಡಿ, ಖಾಸಗಿ ವಾಹಿನಿಯ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಮೆಕ್ಯಾನಿಕ್‌ಗಳನ್ನು ಕೀಳಾಗಿ ಬಿಂಬಿಸಿ ಅಪಮಾನಿಸಲಾಗಿದೆ. ಶ್ರಮಿಕ ವರ್ಗದವರನ್ನು ಗ್ರೀಸ್ ತಿಂದು ಬದುಕುವವರು ಎಂದು ನಿಂದಿಸಿರುವವರ ವಿರುದ್ಧ ಸೂಕ್ತ ಕ್ರಮವಹಿಸಬೇಕು ಎಂದು ಅಗ್ರಹಿಸಿದರು.


ಇದಕ್ಕೆ ಪ್ರೋತ್ಸಾಹಿಸಿದ ತೀರ್ಪುಗಾರರು, ನಿರೂಪಕರು ಹಾಗೂ ವಾಹಿನಿ ಮುಖ್ಯಸ್ಥರ ವಿರುದ್ಧ ಸೂಕ್ತ ಕ್ರಮ ವಹಿಸಬೇಕು. ಈಗಾಗಲೇ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕ್ಷಮೆಯಾಚಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಧ್ಯಕ್ಷ ನಸರುಲ್ಲಾ ಖಾನ್, ಉಪಾಧ್ಯಕ್ಷ ಬಿ.ಎನ್.ಗಿರೀಶ್, ಕಾರ್ಯದರ್ಶಿ ಶಮಿ ಅಹಮದ್, ಸಂಘದ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net