

ತಿ.ನರಸೀಪುರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾನುವಾರ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘ ಹಾಗೂ ಸೇವಾ ಸಂಸ್ಥೆಯ ವತಿಯಿಂದ ಅಂಬೇಡ್ಕರ್ ಜಯಂತಿ ಹಿನ್ನೆಲೆ ಕೆಪಿಎಸ್‌ಸಿ ಮತ್ತು ಕೆಇಎ ಮಾದರಿಯಲ್ಲಿ ಭಾರತ ಸಂವಿಧಾನ ಕುರಿತು ಸ್ಪರ್ಧಾತ್ಮಕ ಪರೀಕ್ಷೆ ಆಯೋಜಿಸಲಾಗಿತ್ತು.
ಭಾರತೀಯ ಸಂವಿಧಾನದ ಬಗ್ಗೆ ವಿದ್ಯಾವಂತ ಯುವ ಜನತೆಯಲ್ಲಿ ಜಾಗೃತಿ ಮೂಡಿಸಲು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಪೂರ್ವಪರ ಮಾಹಿತಿ ನೀಡಲು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1ಗಂಟೆವರೆಗೆ ನೂರು ಅಂಕಗಳಿಗೆ ಸೀಮಿತಗೊಳಿಸಿ ಬಹು ಆಯ್ಕೆಯ ಪ್ರಶ್ನೆಗಳಿಗೆ 18 ರಿಂದ 40ರೊಳಗಿನ ವಯೋಮಾನದ 122 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ಪರೀಕ್ಷೆಯ ಆಯೋಜಕ ಎವಿಎಸ್‌ಎಸ್ ಅಧ್ಯಕ್ಷ ತುಂಬಲ ರಾಮಣ್ಣ ಮಾತನಾಡಿ, ಯುವ ಜನತೆ ಉದ್ಯೋಗ ಆಧಾರಿತ ಪರೀಕ್ಷೆಯನ್ನು ಪಠ್ಯಪುಸ್ತಕಕ್ಕೆ ಸೀಮಿತಗೊಳಿಸಿಕೊಳ್ಳದೆ ಜ್ಞಾನವನ್ನು ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಬೇಕೆಂದರು.
ಕಾರ್ಯದರ್ಶಿ ಸೋಸಲೆ ಜಗದೀಶ್ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿ ಮೂವರು ವಿಜೇತರಿಗೆ ನಗದು ಬಹುಮಾನ, ಸಂವಿಧಾನದ ಪುಸ್ತಕ ಹಾಗೂ ಪ್ರಸಂಶನಾ ಪತ್ರಗಳನ್ನು ನೀಡುವುದಾಗಿ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ವಿ.ಉದಯ್ ಕುಮಾರ್, ಶಿಕ್ಷಕ ನಿಂಗರಾಜು, ವಿಜಯ್, ದಿವಾಕರ್, ಲೋಕೇಶ್, ಶಾಂತನಾಗರಾಜು, ಎವಿಎಸ್‌ಎಸ್ ಉಪಾಧ್ಯಕ್ಷ ಡಿ.ಆರ್. ಪುಟ್ಟಸ್ವಾಮಿ, ನಿರ್ದೇಶಕ ಸಂಪತ್ ಕುಮಾರ್, ಕಚೇರಿ ಸಹಾಯಕಿ ಶಿಲ್ಪಾ, ಶಿಕ್ಷಕ ಎನ್.ಸುನಿಲ್ ಕುಮಾರ್, ಡಿ.ಸಿದ್ದರಾಜು ಮುಖಂಡ ಕುಕ್ಕೂರು ಪ್ರಭು ಇತರರು ಇದ್ದರು.