

ಶಿಡ್ಲಘಟ್ಟ: ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಸೆ.5ರಂದು ನಿಗದಿಯಾಗಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳಾ ವರ್ಗಕ್ಕೆ ಮೀಸಲಾಗಿದೆ. ಎರಡೂ ಸ್ಥಾನಗಳಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ.
ಈಗಾಗಲೇ ಎರಡೂ ಪಕ್ಷಗಳ ಆಕಾಂಕ್ಷಿಗಳು ಸೇರಿ ಸದಸ್ಯರು, ಪಕ್ಷದ ಹಿರಿಯ ಮುಖಂಡರೊಂದಿಗೆ ಅಧ್ಯಕ್ಷ - ಉಪಾಧ್ಯಕ್ಷರು ಯಾರಾಗಬೇಕು ಎಂಬ ಬಗ್ಗೆ ಗೌಪ್ಯವಾಗಿ ಚರ್ಚೆ ನಡೆಸಿದ್ದಾರೆ. ಜತೆಗೆ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ಒಗ್ಗಟ್ಟಾಗಿದ್ದೇವೆ ಎಂಬುದನ್ನು ಸಾಬೀತುಪಡಿಸುವ ಯತ್ನ ನಡೆಸುತ್ತಿದ್ದಾರೆ.
ಒಟ್ಟು 31 ಸದಸ್ಯ ಬಲದ ನಗರಸಭೆಯಲ್ಲಿ 13 ಕಾಂಗ್ರೆಸ್, 10 ಜೆಡಿಎಸ್, 2 ಬಿಜೆಪಿ, 2 ಬಿಎಸ್‌ಪಿ ಹಾಗೂ 4 ಪಕ್ಷೇತರ ಸದಸ್ಯರಿದ್ದು, ಯಾರೇ ಅಧ್ಯಕ್ಷರಾಗಬೇಕಾದರೂ ಬಿಜೆಪಿ, ಬಿಎಸ್‌ಪಿ ಹಾಗೂ ಪಕ್ಷೇತರ ಸದಸ್ಯರೇ ನಿರ್ಣಾಯಕರಾಗಿದ್ದಾರೆ.
ಕುದುರೆ ವ್ಯಾಪಾರ ಹೊಸದೇನಲ್ಲ
ಕಳೆದ 2020ರ ಅಕ್ಟೋಬರ್‌ನಲ್ಲಿ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ 10 ಸದಸ್ಯ ಬಲ ಹೊಂದಿದ್ದ ಜೆಡಿಎಸ್ ಅಭ್ಯರ್ಥಿ ಪರ ಬಿಜೆಪಿ, ಬಿಎಸ್‌ಪಿಯ ತಲಾ ಎರಡು ಹಾಗೂ ಪಕ್ಷೇತರ ಮೂರು ಸದಸ್ಯರು ಬೆಂಬಲಿಸಿದ ಕಾರಣ ನಗರಸಭೆ ಅಧ್ಯಕ್ಷರಾಗಿ ಜೆಡಿಎಸ್‌ನ ಸುಮಿತ್ರಾ ರಮೇಶ್ ಆಯ್ಕೆಯಾಗಿದ್ದರು. 13 ಸದಸ್ಯರನ್ನು ಹೊಂದಿದ್ದ ಕಾಂಗ್ರೆಸ್ ಅಭ್ಯರ್ಥಿ ಪರ ಓರ್ವ ಪಕ್ಷೇತರ ಸದಸ್ಯ ಸೇರಿ ಅಂದಿನ ಬಿಜೆಪಿ ಸಂಸದ ಎಸ್. ಮುನಿಸ್ವಾಮಿ ಮತ ಚಲಾಯಿಸಿದರಾದರೂ ಕಾಂಗ್ರೆಸ್‌ಗೆ ಅಧಿಕಾರ ಹಿಡಿಯಲು ಆಗಲಿಲ್ಲ. ವಿಶೇಷವೆಂದರೆ ಅಂದಿನ ಸಮಯದಲ್ಲಿ ಶಾಸಕರಾಗಿದ್ದ ವಿ.ಮುನಿಯಪ್ಪ ಹಾಗೂ ಒಬ್ಬ ಕಾಂಗ್ರೆಸ್ ಸದಸ್ಯ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರಲಿಲ್ಲ. ಈಗ ನಡೆಯುವ ಚುನಾವಣೆಯಲ್ಲಿ ಸದಸ್ಯರ ಸಂಖ್ಯಾಬಲ ಹಿಂದಿನಂತೆ ಇದೆಯಾದರೂ ಕಳೆದ ಬಾರಿ ಜೆಡಿಎಸ್ ಬೆಂಬಲಿಸಿದ ಬಿಎಸ್‌ಪಿ ಹಾಗೂ ಪಕ್ಷೇತರರು ಈ ಬಾರಿ ಯಾರನ್ನು ಬೆಂಬಲಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಭಾರಿ ನಿರೀಕ್ಷೆ ಮೂಡಿಸಿರುವ ಚುನಾವಣೆ
ಈ ಬಾರಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾದಷ್ಟು ಆರ್ಥಿಕವಾಗಿ ಒಂದಿಷ್ಟು ಸಹಾಯವಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಉಳಿದವರಿದ್ದಾರೆ. ಒಟ್ಟಾರೆ ಈ ಬಾರಿಯ ಚುನಾವಣೆ ಆಕಾಂಕ್ಷಿಗಳಿಗಿಂತಲೂ ಆಯಾ ಪಕ್ಷದ ಮುಖಂಡರಿಗೆ ತಲೆನೋವಾಗಿ ಪರಿಣಮಿಸಿದೆ. ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವಿದೆ. ಹಾಗಾಗಿ ಕಾಂಗ್ರೆಸ್ ಸದಸ್ಯರೇ ಅಧ್ಯಕ್ಷರಾಗಬೇಕು ಎಂದು ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ ಕಾರ್ಯತಂತ್ರ ರೂಪಿಸಿದರೆ, ಕ್ಷೇತ್ರದಲ್ಲಿ ಜೆಡಿಎಸ್‌ನ ಶಾಸಕರಿದ್ದಾರೆ. ಹಾಗಾಗಿ ಜೆಡಿಎಸ್ ಸದಸ್ಯರೇ ಅಧ್ಯಕ್ಷರಾಗಬೇಕು ಎಂದು ಜೆಡಿಎಸ್ ಮುಖಂಡರು ತೆರೆಮರೆಯಲ್ಲಿ ತಂತ್ರ ರೂಪಿಸುತ್ತಿದ್ದಾರೆ.
ಚುನಾವಣೆ ಪ್ರಕ್ರಿಯೆ
* ಸೆ.5ರ ಗುರುವಾರ
* ನಾಮಪತ್ರ ಸ್ವೀಕಾರ: ಬೆಳಗ್ಗೆ 10 ಗಂಟೆಯಿಂದ 11 ಗಂಟೆವರೆಗೆ,
* ನಾಮಪತ್ರ ಪರಿಶೀಲನೆ: ಮಧ್ಯಾಹ್ನ 1 ಗಂಟೆಯಿಂದ 1.10ರವರೆಗೆ
* ನಾಮಪತ್ರ ವಾಪಸಾತಿ: 1.10 ಗಂಟೆಯಿಂದ 1.20ರವರೆಗೆ
* ಮತದಾನ - ಅವಶ್ಯವಿದ್ದಲ್ಲಿ ಮಧ್ಯಾಹ್ನ 1.20ರ ನಂತರ ಪ್ರಕ್ರಿಯೆ ಮುಗಿಯುವವರೆಗೂ.