ಅಧಿಕಾರ ಹಿಡಿಯಲು ಕೈನಲ್ಲಿ ಪೈಪೋಟಿ

ramanagara nagarasabhe-cmc
Published on

* ರಾಮನಗರ, ಚನ್ನಪಟ್ಟಣ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಖಾಲಿ

*7 ತಿಂಗಳಾದರೂ ನಿಗದಿಯಾಗದ ಚುನಾವಣಾ ದಿನಾಂಕ

* ಆಡಳಿತ ಹಿಡಿಯಲು ಜೋರಾಯ್ತು ಕಸರತ್ತು

ಗಂಗಾಧರ್ ಬೈರಾಪಟ್ಟಣ ರಾಮನಗರ

ಚುನಾಯಿತ ಜನಪ್ರತಿನಿಧಿಗಳಿದ್ದರೂ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡಿದ್ದರೂ, ರಾಮನಗರ, ಚನ್ನಪಟ್ಟಣ ನಗರಸಭೆ ಸ್ಥಾನಗಳು ಕಳೆದ 7 ತಿಂಗಳಿಂದ ಖಾಲಿ ಉಳಿದಿವೆ.

ಹೌದು... ಮೇ 8ರಿಂದ ಈ ಎರಡೂ ನಗರಸಭೆಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳು ಖಾಲಿ ಉಳಿದಿದ್ದು, ಇವುಗಳ ಭರ್ತಿಗೆ ಇನ್ನೂ ಕಾಲ ಕೂಡಿ ಬಂದಿಲ್ಲ. ಇದರ ನಡುವೆ ಎರಡೂ ನಗರಸಭೆಗಳಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್‌ನಲ್ಲಿ ಪೈಪೋಟಿ ಹೆಚ್ಚಿದೆ.

ಮೇ 8ಕ್ಕೆ ಅಂತ್ಯ: ರಾಮನಗರ ಮತ್ತು ಚನ್ನಪಟ್ಟಣ ನಗರಸಭೆ ಮೊದಲ 30 ತಿಂಗಳ ಅವಧಿ ಮೇ 8ಕ್ಕೆ ಅಂತ್ಯಕಂಡಿದೆ. ಎರಡೂ ನಗರಸಭೆಗಳ ಅಧ್ಯಕ್ಷ ಉಪಾಧ್ಯಕ್ಷರು ಅಂದೇ ರಾಜೀನಾಮೆ ಸಲ್ಲಿಸಿದ್ದಾರೆ. 2ನೇ 30 ತಿಂಗಳ ಅವಧಿಗೆ ಮೀಸಲಾತಿಯನ್ನು ಸರ್ಕಾರ ಈಗಾಗಲೇ ಪ್ರಕಟಿಸಿದೆ. ಬಿಡದಿ, ಮಾಗಡಿ ಪುರಸಭೆಗಳು ಮತ್ತು ಕನಕಪುರ ನಗರಸಭೆಗಳ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನವನ್ನು ಚುನಾವಣೆ ಮೂಲಕ ಭರ್ತಿ ಮಾಡಲಾಗಿದೆ. ಆದರೆ ರಾಮನಗರ- ಚನ್ನಪಟ್ಟಣ ನಗರಸಭೆಗೆ ಮಾತ್ರ ಇಂದಿಗೆ 7 ತಿಂಗಳು ಮುಗಿದಿದ್ದರೂ ಚುನಾವಣಾ ದಿನಾಂಕವೇ ನಿಗದಿ ಆಗಿಲ್ಲ. ರಾಮನಗರ ನಗರಸಭೆ ಅಧ್ಯಕ್ಷ ಸ್ಥಾನವು ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಚನ್ನಪಟ್ಟಣ ನಗರಸಭೆ ಅಧ್ಯಕ್ಷ ಸ್ಥಾನ ಬಿಸಿಎಂ ಎ ವರ್ಗಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನ ಎಸ್‌ಸಿಗೆ ಮೀಸಲಾಗಿದೆ.

ಅವಧಿ ಖೋತಾ!

ನಗರಸಭೆ ಸದಸ್ಯರು ಚುನಾವಣೆಯಲ್ಲಿ ಆಯ್ಕೆಯಾದ ಬಳಿಕ ನಡೆಯುವ ಮೊದಲ ಸಭೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ. ಅಂದಿನಿಂದಲೇ ಅಧಿಕಾರಾವಧಿ ಶುರುವಾಗುತ್ತದೆ. ಮೊದಲ ಅವಧಿ 2024ರ ಮೇ 8ಕ್ಕೆ ಮುಕ್ತಾಯವಾಗಿದೆ. ಅಂದಿನಿಂದ ಇಂದಿನವರೆಗೆ 7 ತಿಂಗಳು ನಗರಸಭೆಯು ಆಡಳಿತಾಧಿಕಾರಿ ಹಿಡಿತದಲ್ಲಿದೆ. ಇದರಿಂದಾಗಿ ಜನಪ್ರತಿನಿಧಿಗಳ ಅಧಿಕಾರ ಖೋತಾ ಆಗಿದೆ.

ಜನರ ಕೆಲಸಕ್ಕೆ ತೊಂದರೆ

ಪ್ರಸ್ತುತ ಈ ಎರಡೂ ನಗರಸಭೆಗಳಿಗೆ ಜನಪ್ರತಿನಿಧಿಗಳು ಇದ್ದರೂ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಇಲ್ಲದ ಕಾರಣ ಅಧಿಕಾರಿಗಳ ಕೈಯಲ್ಲಿ ಆಡಳಿತ ಇದೆ. ಕೌನ್ಸಿಲರ್‌ಗಳ ಸಣ್ಣಪುಟ್ಟ ಕೆಲಸ ಆಗುತ್ತವೆಯಾದರೂ ಮಹತ್ವದ ನಿರ್ಧಾರ ಕೈಗೊಳ್ಳುವ ಅಧಿಕಾರ ಇಲ್ಲದ ಕಾರಣ, ಅಭಿವೃದ್ಧಿ ಕೆಲಸಗಳು ಅಧಿಕಾರಿಗಳ ಆಣತಿಯಂತೆ ನಡೆಯುತ್ತಿವೆ. ಜನಪ್ರತಿನಿಧಿಗಳಿದ್ದರೂ ಅಭಿವೃದ್ಧಿ ಕಾರ್ಯಗಳು ಸೇರಿ ನಗರವು ಎದುರಿಸುತ್ತಿರುವ ಸಮಸ್ಯೆ ಕುರಿತು ಯಾವುದೇ ತೀರ್ಮಾನ ಕೈಗೊಳ್ಳಲಾಗದ ಸ್ಥಿತಿ ನಗರಸಭೆಯಲ್ಲಿದೆ.

ನಡೆದಿದೆ ರಾಜಕೀಯ

ರಾಮನಗರ ನಗರಸಭೆಯಲ್ಲಿ ಕಾಂಗ್ರೆಸ್‌ಗೆ ಬಹುಮತವಿದ್ದರೂ ಯಾರಿಗೆ ಅಧಿಕಾರ ಕೊಡಬೇಕು ಎನ್ನುವ ವಿಚಾರದಲ್ಲಿ ಪಕ್ಷದ ಒಳಗೆ ತಿಕ್ಕಾಟ ನಡೆದಿದೆ. ಶಾಸಕ ಇಕ್ಬಾಲ್ ಹುಸೇನ್ ಮುಸ್ಲಿಂ ಸಮುದಾಯ ಸದಸ್ಯರೊಬ್ಬರಿಗೆ ಅಧಿಕಾರ ಕೊಡಿಸಬೇಕೆನ್ನುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಇದಕ್ಕೆ ಪಕ್ಷದಲ್ಲಿಯೇ ಬಾರಿ ವಿರೋಧ ವ್ಯಕ್ತವಾಗಿದ್ದು, ಸದಸ್ಯ ಕೆ.ಶೇಷಾದ್ರಿ ಅವರಿಗೆ ಅಧಿಕಾರ ಕೊಡಿಸಲೇಬೇಕೆನ್ನುವ ನಿರ್ಧಾರ ಮಾಡಿದೆ. ಇದು ಪಕ್ಷದೊಳಗಿನ ಆತಂಕರಿಕ ಬೇಗುದಿಗೂ ಕಾರಣವಾಗಿದೆ.

ಒತ್ತಡ ಹೇರುವ ತಂತ್ರ

ಚನ್ನಪಟ್ಟಣದಲ್ಲಿಯೂ ಅಧಿಕಾರಕ್ಕೆರಲು ಇನ್ನಿಲ್ಲದ ಕಸರತ್ತು ಆರಂ‘ಗೊಂಡಿದೆ. ಇಲ್ಲಿ ಮೂಲ ಮತ್ತು ವಲಸಿಗ ಕಾಂಗ್ರೆಸ್ ಸದಸ್ಯರ ನಡುವೆ ಅಧಿಕಾರಕ್ಕಾಗಿ ಮುಸುಕಿನ ಗುದ್ದಾಟ ನಡೆದಿದೆ. ಮುಸ್ಲಿಂ ಸಮುದಾಯದ ಕಾಂಗ್ರೆಸ್ ಸದಸ್ಯರು ತಮಗೇ ಅಧ್ಯಕ್ಷ ಸ್ಥಾನ ಕೊಡಬೇಕೆನ್ನುವ ಗಟ್ಟಿ ಬೇಡಿಕೆಯನ್ನು ಪಕ್ಷದ ನಾಯಕರ ಮುಂದೆ ಇಟ್ಟಿದ್ದಾರೆ. ಆದರೆ ಅಧಿಕಾರಕ್ಕಾಗಿಯೇ ಜೆಡಿಎಸ್ ನಿಂದ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿದ ಹಲವು ಸದಸ್ಯರು ಬಲವಾದ ಬೇಡಿಕೆಯನ್ನು ಡಿ.ಕೆ.ಸುರೇಶ್ ಮುಂದೆ ಇಟ್ಟಿದ್ದಾರೆ. ಜತೆಗೆ ಬಿಜೆಪಿ 6 ಸದಸ್ಯರು ಯೋಗೇಶ್ವರ್ ಹಿಂದೆ ಕಾಂಗ್ರೆಸ್ ಸೇರಿದ್ದಾರೆ. ಈಗ ಇಲ್ಲಿ ಯಾರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎನ್ನುವ ಗೊಂದಲ ಶಾಸಕ ಯೋಗೇಶ್ವರ್ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್ ಸೃಷ್ಟಿಯಾಗಿದೆ.

ಕೂಡಲೇ ಚುನಾವಣೆ ನಡೆಸಲಿ

ರಾಮನಗರ - ಚನ್ನಪಟ್ಟಣ ನಗರಸಭೆಗಳು ಕಸ ಸೇರಿ ಪ್ರಮುಖ ಸಮಸ್ಯೆಗಳನ್ನು ಎದುರಿಸುತ್ತಿವೆ. ಇವುಗಳ ಪರಿಹಾರಕ್ಕೆ ಜನಪ್ರತಿನಿಧಿಗಳಿಗೆ ಅಧಿಕಾರ ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಚುನಾವಣಾಧಿಕಾರಿಯು ಆಗಿರುವ ಉಪವಿಭಾಗಾಧಿಕಾರಿ ಕೂಡಲೇ ಈ ಸಂಬಂಧ ಕ್ರಮ ಕೈಗೊಳ್ಳಬೇಕಿದೆ. ಚನ್ನಪಟ್ಟಣ ಉಪಚುನಾವಣೆ ಸಂಬಂಧ ಇದ್ದ ನೀತಿ ಸಂಹಿತೆಯೂ ತೆರವುಗೊಂಡಿದೆ.

10 ದಿನಗಳ ಒಳಗಾಗಿ ಚುನಾವಣೆ ಪ್ರಕ್ರಿಕೆಯನ್ನು ಪೂರ್ಣಗೊಳಿಸಲಾಗುವುದು. ಉಪಚುನಾವಣೆ ಸೇರಿ ಇತರೆ ಕಚೇರಿ ಕಾರಣಗಳಿಂದ ಚುನಾವಣೆ ನಡೆಸಲು ಸಾ‘್ಯವಾಗಿರಲಿಲ್ಲ. ಬಿನೋಯ್, ಉಪವಿಭಾಗಾಧಿಕಾರಿ, ರಾಮನಗರ

ಬಲಾಬಲ ರಾಮನಗರ ನಗರಸಭೆ ಒಟ್ಟು ಸದಸ್ಯರು 31 ಕಾಂಗ್ರೆಸ್ 20 ಜೆಡಿಎಸ್ 11

====== ಚನ್ನಪಟ್ಟಣ ನಗರಸಭೆ ಒಟ್ಟು ಸದಸ್ಯರು - 31 ಕಾಂಗ್ರೆಸ್ 26 ಜೆಡಿಎಸ್ 04 ಬಿಜೆಪಿ 01

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net