

ಹರಿಹರ: ಅರಿವಿನ ನಿಯಂತ್ರಣವಿರುವ ಎತ್ತುಗಳು ಸಮಭಾವದಿಂದ ಬಂಡಿ ಎಳೆಯುವಂತೆ, ದಾಂಪತ್ಯದ ಬಂಡಿಯನ್ನು ಸಾರ್ಥಕತೆಯ ಗುರಿಯೆಡೆಗೆ ನಡೆಸಲು ಸಹಮತದ ಹೊಂದಾಣಿಕೆ ಅನಿವಾರ್ಯ ಎಂದು ಶಿಕಾರಿಪುರ ತಾಲೂಕಿನ ಸಾಲೂರು ಗ್ರಾಮದ ಸ.ಪ.ಪೂ. ಕಾಲೇಜಿನ ಉಪನ್ಯಾಸಕ ಪ್ರಕಾಶ್ ಹೇಳಿದರು.
ನಗರದ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣದಲ್ಲಿ ಯೋಗಕ್ಷೇಮ ಯೋಗಕೇಂದ್ರ ಸೋಮವಾರ ಹಮ್ಮಿಕೊಂಡಿದ್ದ ದೀವಿಗೆ ಮಾಸಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದಾಂಪತ್ಯದ ಬಂಡಿ ಸಾಗುವ ಬದುಕಿನ ದಾರಿಯ ಇಕ್ಕೆಲಗಳಲ್ಲಿ ಆಮಿಷಗಳ ಅಡೆತಡೆಗಳು ಬಂದರೂ, ಸಂಸಾರದ ರಥವನ್ನು ಬದಲಾದ ಕಾಲಕ್ಕೆ ಅನುಗುಣವಾಗಿ ಸಪ್ತಪದಿಯ ಸೂತ್ರ ಅಳವಡಿಸಿಕೊಂಡು ಸಾಗಿ ದಾಂಪತ್ಯದಲ್ಲಿ ನೆಮ್ಮದಿ ಕಾಣಬೇಕು ಎಂದರು.
ಯೋಗ ಕೇಂದ್ರದ ಅಧ್ಯಕ್ಷ ಎಸ್.ಆರ್. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನ ಅಂಗಡಿ ಅವರನ್ನು ಸನ್ಮಾನಿಸಲಾಯಿತು.
ಶ್ರೀ ವೈಷ್ಣವಿ, ಸಂಗಮೇಶ ಔರಸಂಗ, ಯೋಗಗುರು ರವೀಂದ್ರ ಸಿಂಗ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಸ್.ಎಚ್. ಹೂಗಾರ್, ಶಿಕ್ಷಕ ರೇವಣಸಿದ್ದಪ್ಪ ಅಂಗಡಿ ಇದ್ದರು.