ಗ್ರಾಮ ಪಂಚಾಯಿತಿ ಗದ್ದುಗೆ ಏರಲು ಪೈಪೋಟಿ

Gramayana Logo
Published on

ವಿಜಯವಾಣಿ ವಿಶೇಷ ಹಾವೇರಿ

ಜಿಲ್ಲೆಯ 209 ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿಗೊಳಿಸಿ ಆಯೋಗವು ಚುನಾವಣಾಧಿಕಾರಿಗಳನ್ನು ನೇಮಕ ಮಾಡಿದೆ. ಇದರಿಂದ ಹಳ್ಳಿಗಳಲ್ಲಿ ರಾಜಕೀಯ ರಂಗೇರಿದೆ. ಗ್ರಾಪಂ ಗದ್ದುಗೆ ಏರಲು ಪೈಪೋಟಿ ಜೋರಾಗಿದೆ.

ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಮುಹೂರ್ತ ನಿಗದಿಪಡಿಸುವುದು ಬಾಕಿ ಉಳಿದಿದೆ. ಮಾಸಾಂತ್ಯದಲ್ಲಿ ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ.

ಅಧಿಕಾರಕ್ಕಾಗಿ ನಾನಾ ಕಸರತ್ತು: ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕಾಗಿ ಸದಸ್ಯರು ಕಸರತ್ತು ನಡೆಸಿದ್ದಾರೆ. ಆಕಾಂಕ್ಷಿತರಯ ಆಯಾ ರಾಜಕೀಯ ಪಕ್ಷಗಳ ಮುಖಂಡರ ಮನೆ ಸುತ್ತುತ್ತಿದ್ದಾರೆ. ಮತ್ತೊಂದೆಡೆ ಪಕ್ಷ ಬೆಂಬಲಿತರು ಗುಂಪುವಾರು ಚುನಾವಣೆಯಲ್ಲಿ ಆಯ್ಕೆಯಾಗಿದ್ದು, ಅವರು ಅನ್ಯ ಪಕ್ಷದವರ ಆಮಿಷಕ್ಕೆ ಒಳಗಾಗದಂತೆ ತಡೆಯಲು ವರಿಷ್ಠರು ಹೆಣಗಾಡುತ್ತಿದ್ದಾರೆ. ಕೆಲ ಗ್ರಾಪಂಗಳಲ್ಲಿ ಮೀಸಲಾತಿಯಲ್ಲಿ ಪೈಪೋಟಿ ನೀಡುವ ಸದಸ್ಯರಿಲ್ಲದ ಕಾರಣ ಅಂತಹವರಿಗೆ ಅನಾಯಾಸವಾಗಿ ಅಧ್ಯಕ್ಷ ಗಾದಿ ಒಲಿದು ಬಂದಿದೆ.

ಸದಸ್ಯರಿಗೆ ಪ್ರವಾಸ ಭಾಗ್ಯ: ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಗ್ರಾಪಂಗಳಲ್ಲಿ ಚುನಾವಣೆ ಚುರುಕುಗೊಳ್ಳುವ ಸಾಧ್ಯತೆಯಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲು ಹವಣಿಸುತ್ತಿರುವ ಕೆಲವರು, ಇನ್ನುಳಿದ ಸದಸ್ಯರ ಬೆಂಬಲ ಕೋರಿ ಪ್ರವಾಸಕ್ಕೆ ಕರೆದೊಯ್ಯುತ್ತಿದ್ದಾರೆ. ಕೆಲ ಗ್ರಾಪಂಗಳಲ್ಲಿ ಚುನಾವಣೆ ಫಲಿತಾಂಶ ಪ್ರಕಟಗೊಂಡ ಮರುದಿನವೇ ಕೆಲವರು ಒಂದು ಸುತ್ತಿನ ಪ್ರವಾಸ ಮುಗಿಸಿದ್ದಾರೆ. ಇದೀಗ 2ನೇ ಸುತ್ತಿನ ಪ್ರವಾಸಕ್ಕೆ ಸದಸ್ಯರನ್ನು ಸಜ್ಜುಗೊಳಿಸುತ್ತಿದ್ದಾರೆ.

ಲಕ್ಷ ದಾಟಿದ ಆಮಿಷ: ಕೆಲ ದೊಡ್ಡ ಗ್ರಾಪಂಗಳಲ್ಲಿ ಬಹುಮತಕ್ಕೆ ಅಲ್ಪ ಸಂಖ್ಯೆಯ ಸದಸ್ಯರ ಕೊರತೆಯಿದ್ದು, ಅಂತಹ ಕಡೆಗಳಲ್ಲಿ ಮತ್ತೊಂದು ಪಕ್ಷ ಬೆಂಬಲಿತ ಸದಸ್ಯರನ್ನು ಸೆಳೆಯುವ ಕಾರ್ಯವೂ ನಡೆದಿದೆ. ಲಭ್ಯ ಮಾಹಿತಿ ಪ್ರಕಾರ ಜಿಲ್ಲೆಯ ನಾಲ್ಕೈದು ಗ್ರಾಪಂಗಳಲ್ಲಿ ಒಬ್ಬ ಸದಸ್ಯರಿಗೆ 1ಲಕ್ಷ ರೂ.ವರೆಗೆ ಆಮಿಷವೊಡ್ಡಿರುವುದು ತಿಳಿದುಬಂದಿದೆ.

ಜಿಲ್ಲೆಯಲ್ಲಿ 223 ಗ್ರಾಪಂ: ಜಿಲ್ಲೆಯ 223 ಗ್ರಾಪಂಗಳಲ್ಲಿ 114 ಸ್ಥಾನಗಳು ಮಹಿಳೆಯರಿಗೆ, 109ಸ್ಥಾನಗಳು ಸಾಮಾನ್ಯಕ್ಕೆ ಮೀಸಲಾಗಿವೆ. 29 ಪಂಚಾಯಿತಿಗಳು ಎಸ್​ಸಿಗೆ ಮೀಸಲಾಗಿದ್ದು, ಅದರಲ್ಲಿ 16ಸ್ಥಾನಗಳು ಮಹಿಳೆಯರ ಪಾಲಾಗಿವೆ. ಎಸ್​ಟಿ ವರ್ಗಕ್ಕೆ 21ಸ್ಥಾನಗಳಿದ್ದು, ಮಹಿಳೆಯರಿಗೆ 12ಸ್ಥಾನ ಮೀಸಲಾಗಿವೆ. ಅ ವರ್ಗಕ್ಕೆ 47ಸ್ಥಾನಗಳಿದ್ದು, ಮಹಿಳೆಯರಿಗೆ 25ಸ್ಥಾನಗಳು ಮೀಸಲಾಗಿವೆ. ಬ ವರ್ಗಕ್ಕೆ 12ಸ್ಥಾನಗಳಿದ್ದು, 7ಮಹಿಳಾ ಮೀಸಲಿವೆ. ಸಾಮಾನ್ಯ ವರ್ಗಕ್ಕೆ 114 ಸ್ಥಾನಗಳಿದ್ದು, ಅದರಲ್ಲಿ 54ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.

ಜಿಲ್ಲೆಯ 209 ಸೇರಿ ಇನ್ನೂ ಅವಧಿ ಮುಕ್ತಾಯವಾಗದೇ ಇರುವ ಗ್ರಾಪಂಗಳಿಗೂ ಮೀಸಲಾತಿ ನಿಗದಿಪಡಿಸಲಾಗಿದೆ. ಮಂಗಳವಾರ ಗ್ರಾಪಂವಾರು ಚುನಾವಣಾಧಿಕಾರಿಗಳನ್ನೂ ನೇಮಿಸಲಾಗಿದೆ. ಚುನಾವಣಾಧಿಕಾರಿಗಳು ಬುಧವಾರ ಆಯಾ ಗ್ರಾಪಂಗಳಿಗೆ ತೆರಳಿ ವರದಿ ಮಾಡಿಕೊಂಡು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ 7ದಿನ ಮುಂಚಿತವಾಗಿ ನೋಟಿಸ್ ಹೊರಡಿಸಲಿದ್ದಾರೆ.| ಪ್ರಶಾಂತ ನಾಲವಾರ ಚುನಾವಣೆ ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net