ಹಾನಿಯಾದ ಮನೆಗಳಿಗೆ ಪರಿಹಾರ: ಜಿಲ್ಲಾಧಿಕಾರಿ ಹೇಳಿಕೆ

Bel_Dc Meet
Published on

ಬೆಳ್ತಂಗಡಿ: ತಾಲೂಕಿನಲ್ಲಿ ಮಳೆ ಹಾನಿ ಪ್ರದೇಶಗಳಿಗೆ ದ.ಕ. ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ಗುರುವಾರ ಭೆೇಟಿ ನೀಡಿ ಪರಿಶೀಲನೆ ನಡೆಸಿದರು.
ಮದ್ದಡ್ಕ, ಪಡಂಗಡಿ, ಪೊಯ್ಯೆಗುಡ್ಡೆ ಸಂಪರ್ಕ ರಸ್ತೆ ಕುದ್ರೆಂಜ ಎಂಬಲ್ಲಿ ಸಂಪರ್ಕ ರಸ್ತೆ ಕುಸಿದಿದ್ದು, ಇಲ್ಲಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾರ್ವಜನಿಕರು ಇಂಥ ಅಪಾಯಕಾರಿ ರಸ್ತೆಗಳಲ್ಲಿ ಪ್ರಯಾಣಿಸದಂತೆ ಮನವಿ ಮಾಡಿದರು. ಸಂಬಂಧ ಪಟ್ಟ ಅಧಿಕಾರಿಗಳಿಗೆ ತುರ್ತು ಕಾಮಗಾರಿ ನಡೆಸಲು ಅಂದಾಜು ವೆಚ್ಚ ಮಾಡಿ ವರದಿ ನೀಡುವಂತೆ ಸೂಚಿಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಬುಧವಾರ ರಾತ್ರಿ ತಾಲೂಕಿನಲ್ಲಿ ಅಧಿಕ ಮಳೆಯಾಗಿದ್ದು ಅಪಾರ ಹಾನಿಯಾಗಿದೆ. ರಾತ್ರಿಯೇ ತಹಸೀಲ್ದಾರರ ನೇತೃತ್ವದ ತಂಡ, ಅಗ್ನಿಶಾಮಕ ದಳ, ಹಾಗೂ ಸಾರ್ವಜನಿಕರು, ಜನಪ್ರತಿನಿಧಿಗಳು ತುರ್ತು ಕಾರ್ಯದಲ್ಲಿ ಸಹಕರಿಸಿದ್ದಾರೆ. ಮುಂದೆ ಮನೆ ನಿರ್ಮಾಣದ ಸಂದರ್ಭದಲ್ಲಿ ಸುರಕ್ಷತೆ ಅಳವಡಿಸಬೇಕು. ಪರವಾನಗಿ ನೀಡುವಾಗ ಕೂಡ ಎಲ್ಲ ಸುರಕ್ಷಿತಾ ನಿಯಮ ಅನುಸರಿಸಲು ಅದೇಶ ಮಾಡಲಾಗುತ್ತದೆ. ಇಲ್ಲವಾದಲ್ಲಿ ಕೇರಳ ವಯನಾಡ್ ಸ್ಥಿತಿ ಬರಬಹುದು.

ಅತಿ ಹೆಚ್ಚು ಮಳೆಯಾಗುತ್ತಿರುವುದರಿಂದ ಅನಾಹುವಾಗದಂತೆ ತಡೆಯಲು, ಮಕ್ಕಳ ಮೇಲಿನ ಕಾಳಜಿಯಿಂದ ರಜೆ ನಿಡಲಾಗುತ್ತದೆ. ಪಾಲಕರು ಕೂಡ ಮಕ್ಕಳನ್ನು ಮಳೆ ಸಂದರ್ಭದಲ್ಲಿ ಹೊರಗೆ ಕಳಿಸಬಾರದು ಎಂದರು.

ಬಳಿಕ ಸವಣಾಲು, ಅಳದಂಗಡಿ, ವೇಣೂರು ಭಾಗಗಳಿಗೆ ಭೆೇಟಿ ನೀಡಿದರು. ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ನಪಂ ಉಪಾಧ್ಯಕ್ಷ ಜಯಾನಂದ ಗೌಡ, ಪಡಂಗಡಿ ಗ್ರಾಪಂ ಅಧ್ಯಕ್ಷೆ ಮೀನಾಕ್ಷಿ, ಉಪಾಧ್ಯಕ್ಷ ಸಂತೋಷ್ ಕುಮಾರ್, ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್, ತಹಸೀಲ್ದಾರ್ ಪೃಥ್ವಿ ಸಾನಿಕಂ, ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್, ಮ್ಯಾನೇಜರ್ ಪ್ರಶಾಂತ್ ಡಿ, ಜಿಪಂ ಸಹಾಯಕ ಕಾರ್ಯಪಾಲಕ ಅಭಿಯಂತ ನಿತಿನ್ ನಾಯ್ಕ, ನಪಂ ಮುಖ್ಯಾಧಿಕಾರಿ ರಾಜೇಶ್, ಸ್ಥಳೀಯ ಗ್ರಾಪಂ ಅಧ್ಯಕ್ಷರುಗಳು, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಂದಾಯಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net