

ವಿಜಯಪುರ: ಸಮುದಾಯ ಭವನದ ಕೀ ಕೇಳಿದ್ದಕ್ಕೆ ವ್ಯಕ್ತಿಯೊಬ್ಬ ಪೊಲೀಸ್ ಪೇದೆಯ ಕಿವಿಯನ್ನೇ ಕಚ್ಚಿರುವ ಘಟನೆ ವಿಜಯಪುರ ತಾಲೂಕಿನ ಮಹಲ-ಐನಾಪುರದಲ್ಲಿ ನಡೆದಿದೆ.
ಸುರೇಶ್ ಚವ್ಹಾಣ ಎಂಬಾತನೇ ಪೇದೆಯ ಕಿವಿ ಕಚ್ಚಿದವ. ಖಾಸಗಿ ಶಾಲೆಯ ಶಿಕ್ಷಕನಾಗಿರುವ ಈತ ವಿಜಯಪುರ ಗ್ರಾಮೀಣ ಠಾಣೆಯ ಪೊಲೀಸ್ ಪೇದೆ ಬಾಬು ಕಡಣಿ ಅವರ ಕಿವಿಯನ್ನು ಕಚ್ಚಿದ್ದಾರೆ.
ಮಹಾರಾಷ್ಟ್ರದಿಂದ ಬಂದ ಕಾರ್ಮಿಕರನ್ನು ಕ್ವಾರಂಟೈನ್ನಲ್ಲಿ ಇಡಲು ಪೇದೆ ಬಾಬು ಅವರು ವಿಜಯಪುರ ತಹಶೀಲ್ದಾರ್ ಮೋಹನಕುಮಾರಿ ಆದೇಶದ ಮೇರೆಗೆ ಸಮುದಾಯ ಭವನದ ಕೀ ಕೇಳಿದ್ದರು. ಆದರೆ, ಸಮುದಾಯ ಭವನ ನನ್ನದು ಎಂದು ಕೀ ಕೊಡದೆ ಸತಾಯಿಸಿದ್ದ ಸುರೇಶ್ ಏಕಾಏಕಿ ಹಲ್ಲೆಮಾಡಿ ತಹಶೀಲ್ದಾರ್ ಮೋಹನಕುಮಾರಿ ಎದುರಲ್ಲೇ ಕಿವಿ ಕಚ್ಚಿ, ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ತಹಶೀಲ್ದಾರ್ ಮೋಹನಕುಮಾರಿ ಅವರೇ ಖುದ್ದಾಗಿ ವಿಜಯಪುರ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. (ಏಜೆನ್ಸೀಸ್)