ಪ್ರಕೃತಿಯೊಂದಿಗಿನ ಸಂವಹನ ಭಾಷೆ ಮೌನ

FotoJet (4)
Published on

ಶ್ರೀ ವಿನಯ್ ಗುರೂಜಿ ಅಭಿಮತ ಕೈವಾರದಲ್ಲಿ ವಿಶ್ವ ಹೃದಯ ಸಮ್ಮೇಳನ ಉದ್ಘಾಟನೆ

ಚಿಂತಾಮಣಿ: ಪ್ರಕೃತಿಯನ್ನು ನೋಡಿ ಅರಿತವನು ಜ್ಞಾನಿಯಾಗಬಲ್ಲ. ಪ್ರಕೃತಿಯೊಂದಿಗಿನ ಸಂವಹನ ಭಾಷೆ ಮೌನ ಎಂದು ಗೌರಿಗದ್ದೆಯ ಅವಧೂತ ಶ್ರೀ ವಿನಯ್ ಗುರೂಜಿ ಅಭಿಪ್ರಾಯಪಟ್ಟರು.

ಶ್ರೀ ಕ್ಷೇತ್ರ ಕೈವಾರದ ಶ್ರೀ ಯೋಗಿನಾರೇಯಣ ಮಠದಲ್ಲಿ ಬೆಂಗಳೂರಿನ ಋಷಿ ಪ್ರಭಾಕರ್ ವಿದ್ಯಾ ಕೇಂದ್ರದ ವತಿಯಿಂದ ಹಮ್ಮಿಕೊಂಡಿರುವ ವಿಶ್ವ ಹೃದಯ ಸಮ್ಮೇಳನವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ಗುರುಸ್ಮರಣೆಯಿಂದ ಅಹಂಕಾರವನ್ನು ಕಳೆದುಕೊಳ್ಳಬಹುದು. ಸಾಧನೆಯ ಹಂತದಲ್ಲಿ ಅಹಂಕಾರವನ್ನು ಕಳೆದುಕೊಳ್ಳುವುದು ದೊಡ್ಡ ಘಟ್ಟ. ಯೋಗ ಸಾಧನೆಗೆ ಪೂರಕವಾಗಿ ಆಹಾರ, ವಿಹಾರ, ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಸಾಧನೆ ಮಾಡಬಹುದು ಎಂದರು.

ತೆನಾಲಿಯ ಶ್ರೀಪ್ರಜ್ಞಾನಂದ ಸರಸ್ವತಿಜೀ ಬಾಲಸ್ವಾಮೀಜಿ ಮಾತನಾಡಿ, ಸಿದ್ಧ ಸಮಾಧಿ ಯೋಗದ ಸಂಸ್ಥಾಪಕರಾದ ಶ್ರೀ ಋಷಿ ಪ್ರಭಾಕರ್ ಗುರೂಜಿ ಅವರು ಪ್ರಾಚೀನ ಋಷಿ ಪರಂಪರೆಯನ್ನು ಹಳ್ಳಿಹಳ್ಳಿಗೂ ತಲುಪಿಸಿದಂತಹ ಮಹನೀಯರು. ಸಾಧುಗಳು ಎಂದರೆ ರಜಸ್ಸು, ತಮಸ್ಸುಗಳನ್ನು ಬಿಟ್ಟು ಸಾತ್ವಿಕ ಗುಣದಲ್ಲಿರುವ ಸಾಧಕರು. ಇದು ಯೋಗ ಸಾಧನೆ ಸಾತ್ವಿಕ ಆಹಾರ, ಪ್ರಾಣಾಯಾಮ, ಧ್ಯಾನದಿಂದ ಸಾಧ್ಯವಾಗುತ್ತದೆ. ಈ ಸಂಸ್ಕೃತಿಯನ್ನು ಬೆಳೆಸಿದವರು ಋಷಿ ಪ್ರಭಾಕರ್ ಎಂದರು.

ಪ್ರಾತ:ಕಾಲದಿಂದಲೇ ಯೋಗ-ಧ್ಯಾನ ಕಾರ್ಯಕ್ರಮಗಳು ನಡೆದವು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕುಮಾರಿ ಅಮೃತವಲ್ಲಿ ಅವರಿಂದ ವೀಣಾವಾದನ, ವಿದುಷಿ ವೈಭವಿ ಕಲ್ಯಾ ಶಶಾಂಕ್ ಜೋಡಿದಾರ್ ಅವರಿಂದ ಕೊಳಲುವಾದನ, ವಿದುಷಿ ಡಾ. ವೀಣಾವಾಣಿ ಅವರಿಂದ ಭರತನಾಟ್ಯ, ವಿದುಷಿ ರಜನಿರೆಡ್ಡಿ ಅವರಿಂದ ಗಾಯನ ನಡೆಯಿತು. ಮಹಾ ಆಚಾರ್ಯ ಶ್ರೀಚೈತನ್ಯ ಕಾಯ್ಕಿಜೀ ಉಪಸ್ಥಿತರಿದ್ದರು.

ಇಂದಿನ ಕಾರ್ಯಕ್ರಮ

ಡಿ.21ರ ಶನಿವಾರ ಧಾರವಾಡದ ಪ್ರಕೃತಿ ಚಿಕಿತ್ಸಕ ಹಾಗೂ ವಾಗ್ಮಿ ಶ್ರೀ ಬಸವಾನಂದ ಸ್ವಾಮೀಜಿ, ಬೆಂಗಳೂರು ಯಲಹಂಕದ ಶ್ರೀರಾಮಕೃಷ್ಣ ವಿವೇಕಾನಂದ ವೇದಾಂತ ಆಶ್ರಮದ ಶ್ರೀಅಭಯಾನಂದ ಸ್ವಾಮೀಜಿ, ಹೋಮಿಯೋಪಥಿ ಹಿರಿಯ ಸಲಹೆಗಾರ ಪುಣೆಯ ಡಾ. ಚೇತನ ಕಿರಾದ್ ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ ಸಂಸದರು ಹಾಗೂ ಖ್ಯಾತ ಹೃದಯತಜ್ಞ ಪದ್ಮಶ್ರಿ ಡಾ. ಸಿ.ಎನ್.ಮಂಜುನಾಥ್, ಬೆಂಗಳೂರು ಇಸ್ಕಾನ್‌ನ ಭಕ್ತವೃಂದದಾಸ್, ಡಾ.ಅನಿಲ್‌ಕುಮಾರ್ ಎನ್.ಜೋಷಿ ಅವರು ಯೋಗ-ಧ್ಯಾನದ ಬಗ್ಗೆ ಉಪನ್ಯಾಸಗಳನ್ನು ನೀಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net