ನನ್ನ ಹುಟ್ಟೂರಿನ ಅಭಿವೃದ್ಧಿಗೆ ಬದ್ಧ

30KMD-1
Published on

ಕೆ.ಎಂ.ದೊಡ್ಡಿ: ನನ್ನ ತವರು ಗ್ರಾಮದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಿದ್ದು ನನ್ನ ಅಧಿಕಾರ ಅವಧಿಯಲ್ಲಿ ಸಾಧ್ಯವಾದಷ್ಟು ಅನುದಾನ ನೀಡುವುದಾಗಿ ವಿಧಾನ ಪರಿಷತ್ ಸದಸ್ಯ ಮಧು ಜಿ. ಮಾದೇಗೌಡ ಭರವಸೆ ನೀಡಿದರು.

ಸಮೀಪದ ಗುರುದೇವರಹಳ್ಳಿ ಕಾಲನಿಯ(ಜಿ.ಮಾದೇಗೌಡ ನಗರ) ಶ್ರೀ ವಿನಾಯಕ ದೇವಾಲಯದ ಕಾಂಪೌಂಡ್ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ನಾನು ರಾಜಕೀಯ ಬಂದಾಗಿನಿಂದ ನನಗೆ ಅಧಿಕಾರ ಲಭಿಸದೆ ಇದ್ದರೂ ಸಹ ನನ್ನ ನಮ್ಮ ಗ್ರಾಮ ವ್ಯಾಪ್ತಿಯ ಗ್ರಾಮ ಪಂಚಾಯಿತಿ ನಮ್ಮ ಬೆಂಬಲಿಗರಿಗೆ ಸಿಕ್ಕಿದೆ ಎಂದರು.

ನನಗೆ ಅಧಿಕಾರ ಇಲ್ಲದೆ ನನ್ನ ತವರು ಗ್ರಾಮ ಅಭಿವೃದ್ಧಿ ಪಡಿಸಲು ಸಾಧ್ಯವಾಗಿರಲಿಲ್ಲ ಆದರು ಸಹ ಕಳೆದ 20 ವರ್ಷಗಳಿಂದ ಗ್ರಾಮದ ಡೇರಿ, ಸೊಸೈಟಿ ಮತ್ತು ಗ್ರಾಮ ಪಂಚಾಯಿತಿಯಲ್ಲಿ ನನ್ನ ಬೆಂಬಲಿಗರ ಬಹುಮತ ಪಡೆದು ಅಧಿಕಾರ ಉಳಿಸಿ ಕೊಂಡಿದ್ದು ನೀವು ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಸಾಕ್ಷಿಯಾಗಿದೆ ಎಂದರು.

ನಾನು ವಿಧಾನ ಪರಿಷತ್ ಸದಸ್ಯನಾಗಿದ್ದು ಗ್ರಾಮದ ಅಭಿವೃದ್ಧಿಗೆ ನನ್ನ ಶಕ್ತಿ ಮೀರಿ ಶ್ರಮಿಸುವೆ. ಗ್ರಾಮದ ವಿಚಾರದಲ್ಲಿ ಪಕ್ಷ ಭೇದ ಮರೆತು ಗ್ರಾಮಸ್ಥರೆಲ್ಲ ಒಗ್ಗಟಾಗಿ ಗ್ರಾಮದ ಏಳಿಗೆಗೆ ಸಹಕರಿಸಿದರೆ ಗ್ರಾಮದ ಚಿತ್ರಣವೇ ಬದಲಾಗುತ್ತದೆ ಎಂದು ಕಿವಿ ಮಾತು ಹೇಳಿದರು.

ಶಾಲೆ ತೆರವಿಗೆ ಒತ್ತಡ:

ಛತ್ರದ ಹೊಸಹಳ್ಳಿ ರಸ್ತೆಯಲ್ಲಿ ಆರೋಗ್ಯ ಇಲಾಖೆಯ ವಸತಿ ನಿಲಯದಲ್ಲಿ ಸರ್ಕಾರಿ ಶಾಲೆ ನಡೆಯುತ್ತಿದ್ದು, ಅದನ್ನು ಖಾಲಿ ಮಾಡುವಂತೆ ಆರೋಗ್ಯ ಇಲಾಖೆಯವರು ಒತ್ತಡ ಹಾಕುತ್ತಿದ್ದಾರೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದ್ದು ಶಾಲಾ ಕಟ್ಟಡ ನಿರ್ಮಿಸಿ ಕೊಡುವಂತೆ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅವರು ಈ ಬಗ್ಗೆ ಶಿಕ್ಷಣ ಸಚಿವರ ಗಮನಕ್ಕೆ ತಂದು ಕಾಲನಿಯಲ್ಲಿ ಕಟ್ಟಡ ನಿರ್ಮಿಸಲು ಅಗತ್ಯ ಕ್ರಮ ವಹಿಸುತ್ತೇನೆ ಎಂದು ಭರವಸೆ ನೀಡಿದರು.

ತಾ.ಪಂ ಮಾಜಿ ಸದಸ್ಯ ಭರತೇಶ್, ಅಣ್ಣೂರು ಸೊಸೈಟಿ ಮಾಜಿ ಅಧ್ಯಕ್ಷ ಆರ್.ಸಿದ್ದಪ್ಪ, ಚಿಕ್ಕರಸಿನಕೆರೆ ಗ್ರಾ.ಪಂ ಅಧ್ಯಕ್ಷೆ ಕಮಲಮ್ಮ ಬೋರೇಗೌಡ, ಸದಸ್ಯರಾದ ಕುಮಾರ್, ಮಾಜಿ ಸದಸ್ಯರಾದ ಪುಟ್ಟೇಗೌಡ, ಗುರುದೇವರಹಳ್ಳಿ ಕಾಲನಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ನಂದಿನಿ ಕೃಷ್ಣ, ಮುಖಂಡರಾದ ಜವರಾಯಿಗೌಡ, ಉಮೇಶ್, ಬೋರೇಗೌಡ, ಮಧು, ಸ್ವಾಮಿ, ಕೃಷ್ಣ, ಬೋರೇಗೌಡ, ರಾಮಚಂದ್ರು ಸೇರಿದಂತೆ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net