ತುಳು ಭಾಷೆಗೆ ಅಧಿಕೃತ ಸ್ಥಾನಮಾನಕ್ಕಾಗಿ ಸಮಿತಿ ರಚನೆ; ಡಾ. ಮೋಹನ್ ಆಳ್ವ ನೇತೃತ್ವದಲ್ಲಿ ಅಧ್ಯಯನ

Tulu
Published on

ಬೆಂಗಳೂರು: ತುಳು ಭಾಷೆಯನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸಲು ಅಧ್ಯಯನ ನಡೆಸಿ ಸೂಕ್ತ ಶಿಫಾರಸ್ಸಿನೊಂದಿಗೆ ವರದಿ ನೀಡಲು ಡಾ.ಮೋಹನ್ ಆಳ್ವ ನೇತೃತ್ವದಲ್ಲಿ ಸರ್ಕಾರ ಸಮಿತಿ ರಚಿಸಿದೆ. ಜತೆಗೆ ಕೇಶವ ಬಂಗೇರ ನಾರಾಯಣಗುರು, ಡಾ. ಮಾಧವ ಕೊಣಾಜೆ ಮತ್ತು ಮಂಗಳೂರಿನ ಗಣೇಶ್ ಅ. ಸಂಕಮಾರೆ ಅವರನ್ನು ಸಮಿತಿ ಸದಸ್ಯರನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡಬೇಕೆಂದು ಗಣ್ಯರು, ಸಂಘ ಸಂಸ್ಥೆಗಳು, ಸಾರ್ವಜನಿಕರಿಂದ ಮನವಿಗಳು ಸ್ವೀಕೃತವಾದ ಹಿನ್ನೆಲೆಯಲ್ಲಿ ತುಳು ಭಾಷೆಯ ಕುರಿತಂತೆ ಹಾಲಿ ಇರುವ ನಿಯಮಗಳು, ಕಾನೂನಿನ ಚೌಕಟ್ಟಿನಲ್ಲಿ ಈ ಕುರಿತು ಆಗುವ ಸಾಧಕ-ಬಾಧಕಗಳ ಬಗ್ಗೆ ಅಧ್ಯಯನ ನಡೆಸಲು ತಜ್ಞರ ಸಮಿತಿಯನ್ನು ರಚಿಸಲಾಗಿದೆ.

ಆ ಸಮಿತಿಯವರು ಸೂಕ್ತ ಶಿಫಾರಸ್ಸಿನೊಂದಿಗೆ ವಾಸ್ತವಾಂಶದಿಂದ ಕೂಡಿದ ವರದಿ ಸಲ್ಲಿಸುವಂತೆ ಕನ್ನಡ ಮತ್ತು ಸಂಸ್ಕತಿ ಇಲಾಖೆ ನಿರ್ದೇಶಕರು ಆದೇಶದಲ್ಲಿ ತಿಳಿಸಿದ್ದಾರೆ. ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಕೆ. ಸುನೀಲ್‍ಕುಮಾರ್ ಅವರು ಶೀಘ್ರವೇ ಅಧ್ಯಯನ ವರದಿ ನೀಡಲು ಸಮಿತಿಗೆ ಸೂಚಿಸಿರುವುದಾಗಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net