ಹಾಸನದಲ್ಲಿ ಕೆರೆಗಳ ಸಂರಕ್ಷಣೆಗೆ ಪಣ

ಹಾಸನದಲ್ಲಿ ಕೆರೆಗಳ ಸಂರಕ್ಷಣೆಗೆ ಪಣ
Published on

ಕೆ.ಆರ್.ಪ್ರಸಿನ್ ಹಾಸನ

ಅಳಿವಿನಂಚಿಗೆ ತಲುಪಿದ ಕೆರೆಗಳನ್ನು ಸಂರಕ್ಷಿಸಲು ಹಾಸನ ತಾಲೂಕು ಆಡಳಿತ ಮುಂದಾಗಿದ್ದು, ವಿಶೇಷ ಆಸಕ್ತಿ ವಹಿಸಿ ಕೆರೆಗಳ ಸರ್ವೇ ನಡೆಸಿ ಸಂರಕ್ಷಣೆ ಕಾರ್ಯದಲ್ಲಿ ತೊಡಗಿದೆ.

ನ್ಯಾಯಾಲಯದ ನಿರ್ದೇಶನದಂತೆ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ನೂರಾರು ಎಕರೆ ಕೆರೆ ಜಾಗ ಒತ್ತುವರಿ ತೆರವು ಕಾರ್ಯ ಕ್ಷಿಪ್ರಗತಿಯಲ್ಲಿ ಸಾಗುತ್ತಿದೆ. ಈಗಾಗಲೇ ಹಾಸನ ತಾಲೂಕಿನಲ್ಲಿನ 1300 ಕೆರೆಗಳ ಪೈಕಿ ಒಂದು ಸಾವಿರ ಕೆರೆಗಳ ಸರ್ವೇ ಕಾರ್ಯ ಪೂರ್ಣಗೊಳಿಸಲಾಗಿದೆ.

ಹಾಸನ ತಾಲೂಕಿನಲ್ಲಿ 290 ಕೆರೆಗಳ ಒತ್ತುವರಿ ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ ಈಗಾಗಲೇ 255 ಕೆರೆಗಳ ಒತ್ತುವರಿಯನ್ನು ಯಶಸ್ವಿಯಾಗಿ ತೆರವುಗೊಳಿಸಲಾಗಿದೆ. 35 ಕೆರೆಗಳ ಒತ್ತುವರಿ ತೆರವು ಕಾರ್ಯ ಮಾತ್ರ ಬಾಕಿ ಉಳಿದಿದೆ. ಇವುಗಳನ್ನು ತಿಂಗಳಾಂತ್ಯದ ಒಳಗೆ ಪೂರ್ಣಗೊಳಿಸುವ ಭರವಸೆಯನ್ನು ತಹಸೀಲ್ದಾರ್ ನೀಡಿದ್ದಾರೆ.

ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾಖಲಾದ ರಿಟ್ ಅರ್ಜಿ ಸಂಖ್ಯೆ 38401/2014 ಮತ್ತು 11044/2018ರಂತಹ ಮಹತ್ವದ ಪ್ರಕರಣಗಳಲ್ಲಿ ಕೆರೆಗಳ ಸಂರಕ್ಷಣೆ ಕುರಿತು ನೀಡಲಾದ ಆದೇಶಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಬಾಕಿ ಉಳಿದಿರುವ 35 ಕೆರೆಗಳ ಒತ್ತುವರಿ ತೆರವು ಕಾರ್ಯವನ್ನು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು ಎಂದು ತಹಸೀಲ್ದಾರ್ ಗೀತಾ ತಿಳಿಸಿದ್ದಾರೆ. ಈ ಪ್ರದೇಶಗಳಲ್ಲಿರುವ ಮನೆ, ಮರಗಳು ಹಾಗೂ ಇನ್ನಿತರ ಕ್ಲಿಷ್ಟಕರ ಸನ್ನಿವೇಶಗಳನ್ನು ಕಾನೂನು ಪ್ರಕಾರ ನಿಭಾಯಿಸಿ ಯಾವುದೇ ಅಡೆತಡೆಗಳಿಲ್ಲದೆ ತೆರವು ಕಾರ್ಯ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ.

ಸವಾಲಿನಿಂದ ಕೂಡಿದ್ದ ಕಾರ್ಯಾಚರಣೆ: ಕೆರೆಗಳ ಒತ್ತುವರಿ ತೆರವು ಕಾರ್ಯ ತಾಲೂಕು ಆಡಳಿತಕ್ಕೆ ಸುಲಭದ ಕೆಲಸವಾಗಿರಲಿಲ್ಲ. ಜಿಲ್ಲಾಧಿಕಾರಿ ಅವರ ನಿರ್ದೇಶನದಂತೆ ತಾಲೂಕಿನಾದ್ಯಂತ 1300 ಕೆರೆಗಳ ಪೈಕಿ 1000 ಕೆರೆಗಳ ಸಮಗ್ರ ಸರ್ವೇ ಕಾರ್ಯ ನಡೆಸಲಾಗಿದ್ದು, ಅದರಲ್ಲಿ 290 ಕೆರೆಗಳ ಒತ್ತುವರಿ ಪ್ರಕರಣ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಸರ್ವೇ ವರದಿ ಹಾಗೂ ಒತ್ತುವರಿದಾರರ ಸಮಗ್ರ ಮಾಹಿತಿಯನ್ನು ಆಧರಿಸಿ, ತಹಸೀಲ್ದಾರ್ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ, ಸರ್ವೇ ಇಲಾಖೆ, ತಾಲೂಕು ಕಚೇರಿ ಸಿಬ್ಬಂದಿ ಮತ್ತು ಗ್ರಾಮಗಳ ಆಡಳಿತ ಅಧಿಕಾರಿಗಳ ಸಹಕಾರದೊಂದಿಗೆ ಒತ್ತುವರಿ ತೆರವುಗೊಳಿಸುವ ಕಾರ್ಯವನ್ನು ಯಶಸ್ವಿಗೊಳಿಸಿದ್ದಾರೆ.

ತೆರವುಗೊಳಿಸಿದ ಕೆರೆಗಳ ಸುತ್ತಲೂ ಟ್ರಂಚ್ ನಿರ್ಮಿಸಿ ಅವುಗಳನ್ನು ಆಯಾ ಗ್ರಾಮ ಪಂಚಾಯಿತಿಗಳ ಪಿಡಿಒಗಳಿಗೆ ಅಧಿಕೃತವಾಗಿ ಹಸ್ತಾಂತರಿಸಲಾಗಿದೆ. ಇನ್ನು ಮುಂದೆ ಈ ಕೆರೆಗಳ ನಿರ್ವಹಣೆ ಮತ್ತು ಒತ್ತುವರಿ ತಡೆಯುವ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿ ವಹಿಸಿಕೊಳ್ಳಲಿವೆ. ಲೋಕಾಯುಕ್ತರು ಕೆರೆಗಳಿಗೆ ಘನ ಮತ್ತು ದ್ರವ ತ್ಯಾಜ್ಯಗಳು ಸೇರುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಗಳು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ತಾಲೂಕು ಆಡಳಿತವು ಕೈಗೊಂಡಿರುವ ಈ ಮಹತ್ವದ ಕಾರ್ಯವನ್ನು ಗ್ರಾಮ ಪಂಚಾಯಿತಿಗಳು ಮುಂದುವರೆಸಿಕೊಂಡು ಹೋಗುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಸೆಪ್ಟೆಂಬರ್ ಅಂತ್ಯದೊಳಗೆ ಸರ್ವೇ ಕಾರ್ಯ ಪೂರ್ಣ

ಹಾಸನ ತಾಲೂಕಿನ 1300 ಕೆರೆಗಳ ಪೈಕಿ 1000 ಕೆರೆಗಳ ಸರ್ವೇ ಕಾರ್ಯ ಪೂರ್ಣಗೊಂಡಿದ್ದು, ಸೆಪ್ಟೆಂಬರ್ ಅಂತ್ಯದೊಳಗೆ ಉಳಿದ 300 ಕೆರೆಗಳ ಸರ್ವೇ ಕಾರ್ಯ ಪೂರ್ಣಗೊಳಿಸುವುದಾಗಿ ತಹಸೀಲ್ದಾರ್ ಗೀತಾ ಹೇಳಿದ್ದಾರೆ.

ಸರ್ವೇ ನಡೆಸಿದ ಸಾವಿರ ಕೆರೆಗಳ ಪೈಕಿ 290 ಒತ್ತುವರಿಯಾಗಿರುವುದು ತಿಳಿದು ಬಂದಿದ್ದು, ಇವುಗಳಲ್ಲಿ 255 ಕೆರಗಳ ಒತ್ತುವರಿ ತೆರೆವುಗೊಳಿಸಿ ಟ್ರೆಂಚಿಂಗ್ ಅಳವಡಿಸಲಾಗಿದೆ. ಕೆರೆ ಒತ್ತುವರಿ ಮಾಡಿಕೊಂಡು ತೋಟಗಳನ್ನು ಮಾಡಿಕೊಂಡಿರುವವರಿಗೆ ನೋಟಿಸ್ ನೀಡಲಾಗಿದ್ದು, ತೆರವುಗೊಳಿಸುವ ಕಾರ್ಯ ನಡೆಸಲಾಗುತ್ತದೆ ಎಂದು ಗೀತಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net