ವಿಜಯವಾಣಿ ಸುದ್ದಿಜಾಲ ಬಾಗೇಪಲ್ಲಿ
ಕೇಂದ್ರ ಪುರಸ್ಕೃತ ಅಮೃತ-2 ಯೋಜನೆಯಡಿ 14.41 ಕೋಟಿ ರೂ. ವೆಚ್ಚದ ಕಾಮಗಾರಿ ಮೂಲಕ ಚಿತ್ರಾವತಿ ಜಲಾಶಯದಿಂದ ಬಾಗೇಪಲ್ಲಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬಿ.ಎಸ್.ಸುರೇಶ್ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ಯೋಜನೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಸಮರ್ಪಕ ಕುಡಿಯುವ ನೀರು ಪೂರೈಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಕಲ್ಪಿಸಿದ್ದು, ಅದರ ಭಾಗವಾಗಿ ಚಿತ್ರಾವತಿ ಜಲಾಶಯದಿಂದ ಬಾಗೇಪಲ್ಲಿಗೆ ನೀರು ಪೂರೈಸಲಾಗುವುದು. ಈಗಾಗಲೇ ಯೋಜನೆಯಡಿ ಗುಡಿಬಂಡೆಗೆ 32 ಕೋಟಿ ರೂ. ಅನುದಾನ ಸಿಕ್ಕಿದೆ ಎಂದರು.
ಸಂಸದ ಡಾ.ಕೆ.ಸುಧಾಕರ್ ಮಾತನಾಡಿ, ಕೇಂದ್ರ ಸರ್ಕಾರ ಜಲಜೀವನ ಮಿಷನ್ ಯೋಜನೆಯಡಿ ಪ್ರತಿಮನೆಗೂ ನಲ್ಲಿ ಸಂಪರ್ಕ ಕಲ್ಪಿಸಿ, ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಯನ್ನು ದೇಶದಾದ್ಯಂತ ಅನುಷ್ಠಾನಗೊಳಿಸುತ್ತಿದೆ.. ಇದೀಗ ಅಮೃತ್ ಯೋಜನೆಯಡಿ ನಗರ ಮತ್ತು ಪಟ್ಟಣಕ್ಕೆ ಹತ್ತಿರದಲ್ಲಿರುವ ಜಲಾಶಯ, ಕೆರೆ, ಕಾಲುವೆಗಳಿಂದ ಪೈಪ್‌ಲೈನ್ ಮೂಲಕ ನೀರು ಸರಬರಾಜು ಮಾಡುವ ಯೋಜನೆಯನ್ನು ಸರ್ಕಾರ ರೂಪಿಸಿದ್ದು, ಯೋಜನೆಯಡಿ ಕಾಮಗಾರಿಗಳಿಗೆ ಕೇಂದ್ರ ಸರ್ಕಾರ 60, ರಾಜ್ಯ ಸರ್ಕಾರ 40ರಷ್ಟು ಅನುದಾನ ನೀಡಲಿವೆ. ಬಾಗೇಪಲ್ಲಿಯನ್ನು ಭಾಗ್ಯನಗರವನ್ನಾಗಿ ಮರು ನಾಮಕರಣ ಮಾಡಿರುವ ರಾಜ್ಯ ಸರ್ಕಾರ ಭಾಗ್ಯನಗರಕ್ಕೆ ಹಲವು ಅಭಿವೃದ್ಧಿ ಕಾರ್ಯಗಳ ಭಾಗ್ಯಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಪುರಸಭೆ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷೆ ಸುಜಾತಾ ನರಸಿಂಹನಾಯ್ಡು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಸ್.ನರೇಂದ್ರ, ಜಿಪಂ ಸಿಇಒ ಡಾ.ನವೀನ್ ಭಟ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶ್ರೀನಿವಾಸರೆಡ್ಡಿ, ಉಪಾಧ್ಯಕ್ಷ ಬಿ.ಎ.ನರಸಿಂಹಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್, ಸದಸ್ಯರಾದ ಎ.ನಂಜುಂಡ, ಎ.ಶ್ರೀನಾಥ, ಗಡ್ಡಂ ರಮೇಶ್ ಇದ್ದರು.
3 ತಿಂಗಳೀಚೆಗೆ ತಾಲೂಕಿಗೆ ₹ 300 ಕೋಟಿ ಅನುದಾನ
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ, ಗ್ಯಾರಂಟಿಗಳಿಂದಾಗಿ ಅನುದಾನದ ಕೊರತೆಯಿಂದ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುತ್ತಿಲ್ಲ ಎಂಬ ವಿಪಕ್ಷದವರ ಹೇಳಿಕೆ ಸುಳ್ಳು. ಮೂರು ತಿಂಗಳಿನಿಂದ ಈಚೇಗೆ ಘಂಟ್ಲಮಲ್ಲಮ್ಮ ಕಣಿವೆ ಆಣೆಕಟ್ಟು ನಿರ್ಮಾಣಕ್ಕೆ 189 ಕೋಟಿ ರೂ., ಪಾಲಿಟೆಕ್ನಿಕ್ ಕಾಲೇಜಿಗೆ 25 ಕೋಟಿ ರೂ., ಕಾರ್ಮಿಕ ಇಲಾಖೆಯಿಂದ 40 ಕೋಟಿ ರೂ., ಅಲ್ಪಸಂಖ್ಯಾತರ ಕಾಲೇಜು ನಿರ್ಮಾಣಕ್ಕೆ 20 ಕೋಟಿ ರೂ. ಸೇರಿ ಬಾಗೇಪಲ್ಲಿ ಕ್ಷೇತ್ರಕ್ಕೆ ಒಟ್ಟು 300 ಕೋಟಿ ರೂ. ಅನುದಾನವನ್ನು ನೀಡುವುದರ ಜತೆಗೆ ಬಾಗೇಪಲ್ಲಿಯನ್ನು ಭಾಗ್ಯನಗರ ಎಂದು ನಾಮಕರಣ ಮಾಡಿದೆ. ತಾಲೂಕಿನಲ್ಲಿ ಕೈಗಾರಿಕಾ ಅಭಿವೃದ್ಧಿಗೂ ಒಪ್ಪಿಗೆ ಸಿಕ್ಕಿದ್ದು, ರಾಜ್ಯ ಸರ್ಕಾರ ಆರ್ಥಿಕವಾಗಿ ಸದೃಢವಾಗಿದೆ ಎಂದರು.
ವೇದಿಕೆಯಲ್ಲೇ ಅಸಮಾಧಾನ
ಚಿಕ್ಕಬಳ್ಳಾಪುರ ತಾಲೂಕಿಗೆ ಕುಡಿಯುವ ನೀರು ಪೂರೈಸುವ ಕಾಮಗಾರಿಗೆ ಜಿಲ್ಲಾ ಕೇಂದ್ರದಲ್ಲಿ ನೆರವೇರಿಸಬೇಕಿದ್ದ ಭೂಮಿಪೂಜೆಯನ್ನು ಬಾಗೇಪಲ್ಲಿ ಪಟ್ಟಣದಲ್ಲಿ ಆಯೋಜಿಸಿರುವ ಆಗತ್ಯ ಏನಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರನ್ನು ವೇದಿಕೆಯಲ್ಲೇ ಪ್ರಶ್ನಿಸಿದ ಸಂಸದರು, ಚಿಕ್ಕಬಳ್ಳಾಪುರ ತಾಲೂಕಿನ ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಸರ್ಕಾರದ ಒಕ್ಕೂಟ ವ್ಯವಸ್ಥೆಯಡಿ 19 ಕೋಟಿ ರೂ. ಅನುದಾನ ನೀಡಿರುವ ಬಗ್ಗೆ ಚಿಕ್ಕಬಳ್ಳಾಪುರ ತಾಲೂಕು ಜನರಿಗೂ ಗೊತ್ತಾಗಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಳ ಮೀಸಲಾತಿಗೆ ಒತ್ತಾಯ
ಎಸ್ಸಿ, ಎಸ್ಟಿ ಒಳ ಮೀಸಲಾತಿ ಜಾರಿಯಲ್ಲಿ ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದ್ದು, ಮಾದಿಗ ಜನಾಂಗಕ್ಕೆ ಅನ್ಯಾಯವಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳ ಮೀಸಲಾತಿ ಜಾರಿಗೊಳಿಸುವಂತೆ ಒತ್ತಡ ಹೇರಬೇಕು ಎಂದು ದಲಿತ ಸಂಘರ್ಷ ಸಮಿತಿಯಿಂದ ಸಚಿವ ಬಿ.ಎಸ್.ಸುರೇಶ್‌ಗೆ ಮನವಿ ಸಲ್ಲಿಸಲಾಯಿತು.
ಅನುದಾನಕ್ಕೆ ಮನವಿ
ಬಾಗೇಪಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಎರಡು ದಶಕಗಳಿಂದ ಯುಜಿಡಿ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಪಟ್ಟಣ ವಾಸಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಅಪೂರ್ಣ ಯುಜಿಡಿ ಕಾಮಗಾರಿ ಪೂರ್ಣಗೊಳಿಸಲು ಅಗತ್ಯವಿರುವ 40 ಕೋಟಿ ರೂ. ಅನುದಾನ ನೀಡಬೇಕು ಎಂದು ನಗರಾಭಿವೃದ್ಧಿ ಸಚಿವ ಬಿ.ಎಸ್.ಸುರೇಶ್, ಸಂಸದ ಡಾ.ಕೆ.ಸುಧಾಕರ್ ಅವರಿಗೆ ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮನವಿ ಸಲ್ಲಿಸಿದರು.