ವಾಣಿಜ್ಯ ಉದ್ಯಮ ಎಂದಿಗೂ ಪ್ರಜಾಕೇಂದ್ರಿತವಾಗಿರಲಿ

292
Published on

ದಾವಣಗೆರೆ: ವಾಣಿಜ್ಯೋದ್ಯಮವಾಗಲಿ, ಮಾರುಕಟ್ಟೆಯಾಗಲಿ ಅದರ ನಿರ್ವಹಣೆಯಲ್ಲಿ ಗ್ರಾಹಕರ ಹಿತರಕ್ಷಣೆ ಅಲಕ್ಷಿಸುವಂತಿಲ್ಲ ಎಂದು ಭಾರತೀಯ ವಾಯುಸೇನೆಯ ಗ್ರೂಪ್ ಕ್ಯಾ.ಡಾ.ವಿನಯ್ ವಿಠ್ಠಲ್ ಹೇಳಿದರು.

ನಗರದ ಬಾಪೂಜಿ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಎಂಬಿಎ ವಿದ್ಯಾರ್ಥಿಗಳ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿ, ವಾಣಿಜ್ಯವು ಪ್ರಜಾಕೇಂದ್ರಿತವಾಗಿರಬೇಕು, ಕಾಲಕಾಲದ ಬದಲಾವಣೆಗಳಿಗೆ ಒಳಪಟ್ಟಿರಬೇಕು ಎಂದು ತಿಳಿಸಿದರು.

ಶಿಕ್ಷಣ ಹಾಗೂ ಪದವಿ ನಮ್ಮನ್ನು ಮುಂದುವರಿಯಲು ಪ್ರೇರೇಪಿಸಿದರೆ, ಜ್ಞಾನವು ಆ ಮುಂದುವರಿಕೆಯನ್ನು ನೀತಿಯುತವಾಗಿಸಬೇಕು ಎಂಬ ಪ್ರಾಚೀನ ಅರ್ಥಶಾಸ್ತ್ರಜ್ಞ ಕೌಟಿಲ್ಯರ ಅನೇಕ ವಿಚಾರ ಪ್ರಸ್ತಾಪಿಸಿದರು.

ಸಂಪಾದನೆಯಾಗಲಿ, ಸಾಮರ್ಥ್ಯವಾಗಲಿ ಯಶಸ್ಸಿನ ಮಾನದಂಡವಲ್ಲ. ತಾನು ಸಂತೋಷವಾಗಿದ್ದು, ಇತರರನ್ನೂ ಸಂತೋಷವಾಗಿಡುವುದೇ ಯಶಸ್ಸು ಎಂದರು.

ಕಾಲೇಜಿನ ಚೇರ್ಮನ್ ಡಾ.ಅಥಣಿ ಎಸ್. ವೀರಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಪದವೀಧರರಾದ ಮೇಲೆ ಜವಾಬ್ದಾರಿ ಹೆಚ್ಚುತ್ತದೆ. ಪದವಿಯು ಮುಂದಿನ ಸವಾಲುಗಳನ್ನು ಎದುರಿಸಲು ಅನುಮತಿ ಎಂಬಂತೆ ಭಾವಿಸಿದಲ್ಲಿ ಸಾಧನೆ ಸಾಧ್ಯ. ನಿತ್ಯವೂ ಜ್ಞಾನ ನವೀಕರಿಸಿಕೊಂಡಾಗ ಮಾತ್ರ ಭವಿಷ್ಯದ ಕೃತಕ ಬುದ್ಧಿಮತ್ತೆಯ ಸವಾಲನ್ನು ಎದುರಿಸಬಹುದು ಎಂದರು.

ಪ್ರಾಚಾರ್ಯ ಡಾ. ನವೀನ್ ನಾಗರಾಜ್, ಡಾ. ಶ್ರುತಿ ಮಾಕನೂರು, ಡಾ. ಪ್ರಕಾಶ್ ಅಳಲಗೇರಿ ಇದ್ದರು. ನಿರ್ದೇಶಕ ಡಾ. ಸ್ವಾಮಿ ತ್ರಿಭುವನಾನಂದ ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ವಿಭಾಗದ ಮುಖ್ಯಸ್ಥ ಡಾ.ಎಸ್.ಎಚ್. ಸುಜಿತ್‌ಕುಮಾರ್ ಸ್ವಾಗತಿಸಿದರು. ಕೃಷ್ಣ ಮತ್ತು ಅಮೂಲ್ಯ ನಿರೂಪಿಸಿದರು. ಅಧ್ಯಾಪಕಿ ಕೆ.ಎಸ್. ಚೈತ್ರಾ ಶೈಕ್ಷಣಿಕ ವರದಿ ವಾಚಿಸಿದರು. ಸಹಾಯಕ ಪ್ರಾಧ್ಯಾಪಕ ಪ್ರೊ.ಕೆ.ಎಸ್. ವಿಜಯ್ ವಂದಿಸಿದರು. ಈ ಸಂದರ್ಭದಲ್ಲಿ ರ‌್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net