

ಅರಕಲಗೂಡು: ಪಟ್ಟಣ ಪಂಚಾಯಿತಿಯ 2024-25ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರು ಪಂಚಾಯಿತಿ ಆಡಳಿತದ ಕಾರ್ಯವೈಖರಿ ಕುರಿತು ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ, ಹಲವು ಸಲಹೆಗಳನ್ನು ನೀಡಿ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಒತ್ತಾಯಿಸಿದರು.
ಆಡಳಿತಾಧಿಕಾರಿ ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆಯ ಆರಂಭದಲ್ಲಿ ಕಳೆದ ಸಾಲಿನ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರಿಂದ ಪ್ರಸ್ತಾಪಗೊಂಡ ಯೋಜನೆ ಅನುಷ್ಠಾನ ಮತ್ತು ಕೈಗೊಂಡ ಕ್ರಮಗಳ ಕುರಿತು ಚರ್ಚಿಸಲಾಯಿತು. ಈ ಸಂದರ್ಭ ಮಾತನಾಡಿದ ಪಪಂ ಮಾಜಿ ಸದಸ್ಯ ರವಿಕುಮಾರ್ ಮತ್ತು ಮುಖಂಡ ರಾಜು, ಕಳೆದ ಎರಡು ವರ್ಷಗಳಿಂದ ಎಲ್ಲ ವಾರ್ಡ್‌ಗಳಲ್ಲೂ ಸಮರ್ಪಕ ನೀರು ಸರಬರಾಜಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಂಟ್ರೋಲ್ ವಾಲ್ ಅಳವಡಿಸುವಂತೆ ಸಲಹೆ ನೀಡಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ.ಇದಕ್ಕೇನು ಲಕ್ಷಾಂತರ ಹಣ ಬೇಕಿಲ್ಲ. 10ರಿಂದ 15ಸಾವಿರ ರೂ. ಆಗಬಹುದು. ಕಂಟ್ರೋಲ್ ವಾಲ್ ಇಲ್ಲದೆ ತಗ್ಗು ಪ್ರದೇಶದಿಂದ ಕೂಡಿರುವ ಜನ ವಸತಿಗೆ ಹೆಚ್ಚಿನ ನೀರು ಹೋಗುತ್ತಿದೆ. ಎತ್ತರ ಪ್ರದೇಶದಲ್ಲಿನ ಜನರಿಗೆ ನೀರು ಸಿಗುತ್ತಿಲ್ಲ. ಈ ಬಾರಿಯಾದರೂ ಇದನ್ನು ಕಾರ್ಯರೂಪಕ್ಕೆ ತರಲಿ ಎಂದು ಆಗ್ರಹಿಸಿದರು.
ಈ ಬಾರಿಯ ಬಜೆಟ್‌ನಲ್ಲಿ ಎಲ್ಲ ವಾರ್ಡ್‌ಗಳಿಗೆ ಸಮರ್ಪಕವಾಗಿ ನೀರು ಸರಬರಾಜು ಮಾಡಲು ಅನುಕೂಲವಾಗುವಂತೆ ಯೋಜನೆ ಸಿದ್ಧಪಡಿಸಿ ಅನುಷ್ಠಾನಕ್ಕೆ ತನ್ನಿ ಎಂದು ಆಡಳಿತಾಧಿಕಾರಿ ಬಸವರೆಡ್ಡಪ್ಪ ರೋಣದ ಇಂಜಿನಿಯರ್‌ಗೆ ಸೂಚನೆ ನೀಡಿದರು.
ಹೊಸ ಕಟ್ಟಡ ನಿರ್ಮಿಸಲು ಸಲಹೆ: ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಹೊಸದಾಗಿ ಪಪಂ ಹಾಗೂ ಪುರಸಭೆ, ನಗರಸಭೆ ಕಟ್ಟಡ ನಿರ್ಮಾಣಗೊಂಡಿವೆ. ಆದರೆ, ಅರಕಲಗೂಡು ಪಪಂನಲ್ಲಿ ಈ ಕೆಲಸ ಆಗಿಲ್ಲ. ತುಂಬ ಕಿರಿದಾಗಿರುವ ಸ್ಥಳದಲ್ಲಿ ಪಪಂ ಆಡಳಿತ ಕಚೇರಿ ಇದೆ. ಪಟ್ಟಣದ ಜನಸಂಖ್ಯೆ ಅಧಿಕಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಟೆಂಪೋ ಸ್ಟ್ಯಾಂಡ್ ಜಾಗ ಸರ್ಕಾರಿ ಜಾಗವಾಗಿದ್ದು, ಇಲ್ಲಿ ನೂತನ ಪಪಂ ಕಟ್ಟಡ ನಿರ್ಮಿಸುವಂತೆ ಪಪಂ ಮಾಜಿ ಸದಸ್ಯರಾದ ರವಿಕುಮಾರ್, ರಾಜು, ಸತ್ಯಣ್ಣ, ವಿಜಯಕುಮಾರ್ ಸಲಹೆ ನೀಡಿದರು.
ಈ ಕುರಿತು ಸಂಬಂಧಪಟ್ಟ ಇಲಾಖೆಯೊಂದಿಗೆ ವ್ಯವಹರಿಸಿ ನೂತನ ಕಟ್ಟಡ ನಿರ್ಮಾಣಕ್ಕೆ ಮುಂದಾಗುವಂತೆ ಮುಖ್ಯಾಧಿಕಾರಿ ಬಸವರಾಜ ಟಾಕಪ್ಪ ಶಿಗ್ಗಾವಿಗೆ ಆಡಳಿತಾಧಿಕಾರಿ ಸಲಹೆ ನೀಡಿದರು.
ರಸ್ತೆಬದಿ ವ್ಯಾಪಾರಿಗಳಿಗೆ ಸೌಕರ್ಯ:
ಪಟ್ಟಣದ ರಸ್ತೆ ಬದಿ ವ್ಯಾಪಾರಿಗಳಿಂದ ಆದಾಯ ಬರುತ್ತಿದೆ. ಆದರೆ, ಸೂಕ್ತ ಜಾಗ ಮತ್ತು ಮೂಲಸೌಕರ್ಯವಿಲ್ಲ. ಕೂಡಲೇ ಖಾಲಿ ಇರುವ ಜಾಗದಲ್ಲಿ ಫುಡ್‌ಕೋರ್ಟ್ ನಿರ್ಮಿಸಿ ಅನುಕೂಲ ಕಲ್ಪಿಸಬೇಕು. ದಿನವಹಿ ಸುಂಕ ಪಡೆಯುವ ಕುರಿತು ಸಾರ್ವಜನಿಕ ಸ್ಥಳದಲ್ಲಿ ಸೂಚನಾಫಲಕ ಹಾಕುವಂತೆ ಸಾರ್ವಜನಿಕರು ಆಗ್ರಹಿಸಿದರು. ಕೂಡಲೇ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಮುಖ್ಯಾಧಿಕಾರಿ ಸೂಚನೆ ನೀಡಿದರು.
ಆದಾಯ ಕುಂಠಿತ:
ಪಟ್ಟಣದಲ್ಲಿ 20ಕ್ಕೂ ಅಧಿಕ ಸಂಖ್ಯೆಯಲ್ಲಿ ಕೋಳಿ ಅಂಗಡಿಗಳಿದ್ದು ಬಹುತೇಕ ಅಂಗಡಿಗಳ ಪರವಾನಗಿ ನವೀಕರಣಗೊಂಡಿಲ್ಲ. ಹೊಸದಾಗಿ ಆರಂಭಗೊಳ್ಳುವ ಅಂಗಡಿಗಳಿಗೆ ಪರವಾನಗಿ ನೀಡುತ್ತಿಲ್ಲ. ಇದರಿಂದ ಪಪಂಗೆ ಆದಾಯ ಬರುತ್ತಿಲ್ಲ. ಅಂಗಡಿಗಳಿಗೆ ಮೂಲಸೌಕರ್ಯ ಕೊಡಲಾಗಿದೆಯೇ ಹೊರತು ಕರ ವಸೂಲಿ, ಪರವಾನಗಿ ಮಾಡುತ್ತಿಲ್ಲ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಪಪಂ ಸದಸ್ಯ ನಿಖಿಲ್‌ಕುಮಾರ್ ಒತ್ತಾಯಿಸಿದರು.
ರಾಜಕಾಲುವೆ, ಕೆರೆ ರಕ್ಷಣೆ ಮಾಡಬೇಕಿದೆ:
ಪಟ್ಟಣದ ಕೆರೆಯನ್ನು ಒಡೆದು ಸಾರಿಗೆ ಬಸ್ ನಿಲ್ದಾಣ, ಕ್ರೀಡಾಂಗಣ, ಪಾರ್ಕ್ ಅಭಿವೃದ್ಧಿ ಮಾಡುವ ವೇಳೆ ರಾಜಕಾಲುವೆ ಜಾಗ ಮಾಯವಾಗಿದೆ. ಇದನ್ನು ಪತ್ತೆ ಹಚ್ಚಿ ಸಂರಕ್ಷಣೆ ಮಾಡಬೇಕಿದೆ. ಪಪಂ ವ್ಯಾಪ್ತಿಯಲ್ಲಿ ಕೆರೆಗಳನ್ನು ಸರ್ವೇ ಮಾಡಿಸಿ ಸಂರಕ್ಷಣೆ ಮಾಡಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಪಪಂ ಆಡಳಿತ ಮುಂದಾಗಬೇಕೆಂದು ಪಪಂ ಸದಸ್ಯೆ ರಶ್ಮಿ ಸಲಹೆ ನೀಡಿದರು.
ಅಗತ್ಯವಿರುವ ಶ್ರದ್ಧಾಂಜಲಿ ವಾಹನ ಖರೀದಿಗೆ ಪಪಂ ಕ್ರಮ ಕೈಗೊಳ್ಳಬೇಕಿದೆ. 3 ಕಿಮೀ ದೂರದಲ್ಲಿ ರುದ್ರಭೂಮಿ ಇದೆ. ಅಲ್ಲಿಗೆ ಶವಗಳನ್ನು ಅಂತ್ಯಕ್ರಿಯೆಗೆ ಕೊಂಡೊಯ್ಯಲು ಕಷ್ಟವಾಗಿದೆ. ತಾಂತ್ರಿಕವಾಗಿ ಶವಗಳನ್ನು ಸುಡಲು ಕ್ರಮ ಕೈಗೊಳ್ಳಬೇಕಿದೆ. ಪಾರ್ಕ್ ಪಕ್ಕದಲ್ಲಿನ ಖಾಲಿ ಜಾಗದಲ್ಲಿ ಆಂಜನೇಯ ದೇವಸ್ಥಾನ ನಿರ್ಮಾಣಕ್ಕೆ ಮುಂದಾಗಬೇಕಿದೆ. ತುಂಬ ಅವಶ್ಯವಿರುವ ಒಳಾಂಗಣ ಕ್ರೀಡಾಂಗಣ ಮತ್ತು ಈಜುಕೊಳ ನಿರ್ಮಾಣಕ್ಕೆ ಒತ್ತು ನೀಡಬೇಕಿದೆ. ಬೀದಿ ದೀಪಗಳ ನಿರ್ವಹಣೆ ಸಮರ್ಪಕವಾಗಿ ನಡೆಯಬೇಕಿದೆ. ಬೀದಿ ನಾಯಿಗಳ ಹಾವಳಿ ಅಧಿಕಗೊಳ್ಳುತ್ತಿದೆ. ಈ ಸಂಬಂಧ ಅಗತ್ಯ ಕ್ರಮಕ್ಕೆ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.