ಹುಲಿ ಸೆರೆಗೆ ಮುಂದುವರಿದ ಕೂಂಬಿಂಗ್

22-JUNE-GPT-3
Published on

ಗುಂಡ್ಲುಪೇಟೆ: ತಾಲೂಕಿನ ದೇಶೀಪುರ ಕಾಲನಿಯ ಆದಿವಾಸಿ ಮಹಿಳೆಯನ್ನು ಕೊಂದಿದ್ದ ಹುಲಿ ಪತ್ತೆಗೆ ಅರಣ್ಯ ಇಲಾಖೆ ಮೂರನೇ ದಿನವೂ ಕಾರ್ಯಾಚರಣೆ ನಡೆಸಿದೆ.

ಘಟನೆ ನಡೆದ ಪ್ರದೇಶದಲ್ಲಿ ಅರಣ್ಯ ಇಲಾಖೆ ಅಳವಡಿಸಿರುವ ಕ್ಯಾಮೆರಾಗಳಲ್ಲಿ ಯಾವ ವನ್ಯಜೀವಿಗಳ ಚಿತ್ರವೂ ಸೆರೆಯಾಗಿಲ್ಲ. ಅಲ್ಲದೆ ಸ್ಥಳದಲ್ಲಿ ಬೋನಿನ ಬಳಿಗೆ ಯಾವುದೇ ಪ್ರಾಣಿಗಳು ಸುಳಿಯದ ಹಿನ್ನೆಲೆಯಲ್ಲಿ ಸಾಕಾನೆಗಳ ನೆರವಿನಿಂದ ಭಾನುವಾರ ಬೆಳ್ಳಂಬೆಳಗ್ಗೆಯೇ ಕೂಂಬಿಂಗ್ ನಡೆಸಲಾಯಿತು.

ಪಶುವೈದ್ಯರು, ಸಾಕಾನೆಗಳಾದ ರೋಹಿತ ಮತ್ತು ಪಾರ್ಥಸಾರಥಿ ಜತೆಗೆ ಗೆಜ್ಜಿಗಶೆಟ್ಟಿ ಹಳ್ಳ ಹಾಗೂ ಆಲದಮರದ ಮುಂಟಿಗಳ ಸಮೀಪ ಹುಲಿಸಂರಕ್ಷಣಾ ದಳದ 12 ಹಾಗೂ ಅರಣ್ಯ ಇಲಾಖೆಯ 23 ಸಿಬ್ಬಂದಿ ಕೂಂಬಿಂಗ್ ನಡೆಸಿದರು. ಪ್ರದೇಶದ ಸುತ್ತಲೂ 3 ಕಿಲೋಮೀಟರ್ ವ್ಯಾಪ್ತಿಯಲ್ಲಿ ಡ್ರೋಣ್ ಮೂಲಕ ಹುಡುಕಾಟ ನಡೆಸಿದರೂ ಹುಲಿ ಪತ್ತೆಯಾಗಿಲ್ಲ. ಆದ್ದರಿಂದ ಸೋಮವಾರವೂ ಕೂಂಬಿಂಗ್ ಕಾರ್ಯಾಚರಣೆ ಮುಂದುವರಿಸಲಾಗುವುದು. ಅಕ್ಕಪಕ್ಕದ ಗ್ರಾಮಗಳ ಜನರು ಜಾನುವಾರುಗಳನ್ನು ತಮ್ಮ ಹೊರಗೆ ಕಟ್ಟಿಹಾಕಬಾರದು. ಸಂಜೆ ಕತ್ತಲಾದ ನಂತರ ಮನೆಗಳಿಂದ ಹೊರಬರದೆ ಎಚ್ಚರಿಕೆಯಿಂದ ಇರಬೇಕು ಎಂದು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಓಂಕಾರ್ ವಲಯಾರಣ್ಯಾಧಿಕಾರಿ ಸತೀಶ್ ಕುಮಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net