ಕಾಲರಾ ಸ್ಪೋಟ ಜಿಲ್ಲೆಯಾದ್ಯಂತ ನೀರಿನ ಮಾದರಿ ಸಂಗ್ರಹ

Water Supply
Published on

* ಅನಾಹುತ ತಪ್ಪಿಸಲು ಆರೋಗ್ಯ ಇಲಾಖೆ ಸಜ್ಜು

* ತುಮಕೂರು ಜಿಲ್ಲೆಯಲ್ಲಿ 6 ಮಂದಿ ಮೃತಪಟ್ಟ ಹಿನ್ನೆಲೆ

* ಕಾಲರಾ ಹರಡಲು ಕಲುಷಿತ ನೀರೇ ಕಾರಣ

ಗಂಗಾಧರ್ ಬೈರಾಪಟ್ಟಣ ರಾಮನಗರ

ಕಲುಷಿತ ನೀರು ಸೇವನೆಯಿಂದ ತುಮಕೂರು ಜಿಲ್ಲೆಯಲ್ಲಿ 6 ಮಂದಿ ಮೃತಪಟ್ಟ ಘಟನೆ ನಂತರ ಎಚ್ಚೆತ್ತಿರುವ ಆರೋಗ್ಯ ಇಲಾಖೆ ಈಗ ಕುಡಿಯುವ ಜಿಲ್ಲೆಯಾದ್ಯಂತ ನೀರಿನ ಮಾದರಿ ಸಂಗ್ರಹಿಸಿ, ಅನಾಹುತ ತಪ್ಪಿಸಲು ಮುಂದಾಗಿದೆ.

ಸದ್ಯಕ್ಕೆ ಜಿಲ್ಲೆಯಲ್ಲಿ ಕಾಲರಾ ಪ್ರಕರಣ ಹೆಚ್ಚು ದಾಖಲಾಗಿಲ್ಲವಾದರೂ ತುಮಕೂರು, ಚಿಕ್ಕಬಳ್ಳಾಪುರ, ಚಾಮರಾಜನಗರ ಜಿಲ್ಲೆಗಳಲ್ಲಿ ಕಲುಷಿತ ನೀರು ಸೇವೆನೆಯಿಂದ ಹಲವು ಮಂದಿ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗವೂ ಸೇರಿ ಜಿಲ್ಲೆಯ ಎಲ್ಲ ಕೊಳವೆ ಬಾವಿಗಳು ಮತ್ತು ನೀರು ಪೂರೈಕೆ ಘಟಕಗಳ ನೀರಿನ ಮಾದರಿ ಸಂಗ್ರಹಿಸಿ ಇವುಗಳನ್ನು ಪರೀಕ್ಷೆಗೆ ಒಳಪಡಿಸುವ ಕೆಲಸ ಆರೋಗ್ಯ ಇಲಾಖೆ, ಜಿಲ್ಲಾ ಪಂಚಾಯಿತಿ ನೆರವಿನೊಂದಿಗೆ ಆರಂಭಿಸಿದೆ.

5240 ಕಡೆಗಳಲ್ಲಿ ಮಾದರಿ ಸಂಗ್ರಹ

ಕಾಲರಾ ಹರಡಲು ಕಲುಷಿತ ನೀರೇ ಪ್ರಮುಖ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಗ್ರಾಮದ ಓವರ್ ಹೆಡ್ ಟ್ಯಾಂಕ್‌ಗಳು, ಸಾರ್ವಜನಿಕ ಕೊಳಾಯಿಗಳು, ಕೊಳವೆ ಬಾವಿಗಳು ಸೇರಿ ನೀರು ಪೂರೈಕೆ ಮಾಧ್ಯಮಗಳಿಂದ ನೀರನ್ನು ಸಂಗ್ರಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 5240 ಕಡೆಗಳಲ್ಲಿ ನೀರಿನ ಮಾದರಿ ಸಂಗ್ರಹಿಸಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಆರೋಗ್ಯ ಇಲಾಖೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ಜಂಟಿಯಾಗಿ ನೀರಿನ ಮಾದರಿ ಸಂಗ್ರಹಿಸುತ್ತಿದ್ದಾರೆ. ಇವುಗಳನ್ನು ಪ್ರಾಯೋಗಾಲಯಕ್ಕೆ ಕಳುಹಿಸಿ, ಅಲ್ಲಿಂದ ಬರುವ ವರದಿ ಆಧಾರದ ಮೇಲೆ ಅಗತ್ಯ ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆ ಮುಂದಾಗಿದೆ. ಬಹುತೇಕ ಎಲ್ಲ ಕಡೆಗಳಲ್ಲಿ ಮಾದರಿಗಳ ಸಂಗ್ರಹ ಕಾರ್ಯ ಮತ್ತು ಇದರ ವರದಿಗಳನ್ನು ಪಡೆಯುವ ಕೆಲಸ ಇನ್ನು 20 ದಿನಗಳಲ್ಲಿ ಪೂರ್ಣಗೊಳ್ಳಲಿದ್ದು, ಜಿಲ್ಲೆಯಲ್ಲಿ ಎಷ್ಟು ಕಡೆಗಳಲ್ಲಿ ನೀರು ಬಳಕೆಗೆ ಯೋಗ್ಯವಾಗಿಲ್ಲ ಎನ್ನುವ ಮಾಹಿತಿ ಲಭ್ಯವಾಗಲಿದೆ.

ಕಲುಷಿತಗೊಳ್ಳದಿರಲಿ

ಬಹುತೇಕ ಕಡೆಗಳಲ್ಲಿ ಓವರ್ ಹೆಡ್ ಟ್ಯಾಂಕ್‌ಗಳ ಬಳಿ ಕಳೆ ಬೆಳೆದುಕೊಳ್ಳುವ ಜತೆಗೆ ಮೋರಿ ನೀರು ಅಲ್ಲಿಯೇ ಸಂಗ್ರಹವಾಗುವ ವ್ಯವಸ್ಥೆ ಇದೆ. ಅಲ್ಲದೆ, ಕೆಲವು ಕಡೆಗಳಲ್ಲಿ ನೀರು ಪೂರೈಕೆ ಪೈಪ್‌ಗಳ ಬಳಿಯೇ ಒಳಚರಂಡಿಗಳು ಇವೆ. ಇಂತಹ ಕಡೆಗಳಲ್ಲಿ ಸಾರ್ವಜನಿಕರು ಅಧಿಕಾರಿಗಳಿಗೆ ಮಾಹಿತಿ ನೀಡುವ ಜತೆಗೆ ನಿಮ್ಮೂರಿನ ಜನರ ಆರೋಗ್ಯದ ದೃಷ್ಟಿಯಿಂದ ಕೊಳಚೆ ತೆರವುಗೊಳಿಸಿ, ಕಲ್ಮಶ ಕುಡಿಯುವ ನೀರಿನೊಂದಿಗೆ ಸೇರದಂತೆ ನೋಡಿಕೊಳ್ಳಬೇಕಿದೆ.

ಜಿಲ್ಲೆಯಲ್ಲಿ ಇಬ್ಬರಿಗೆ ಕಾಲರಾ

ಸದ್ಯಕ್ಕೆ ಜಿಲ್ಲೆಯಲ್ಲಿ ಇಬ್ಬರು ಕಾಲರಾ ರೋಗದಿಂದ ಬಳಲುತ್ತಿದ್ದಾರೆ. ಕನಕಪುರ ಮತ್ತು ಮಾಗಡಿ ತಲಾ ಒಬ್ಬರು ಈ ರೋಗಕ್ಕೆ ತುತ್ತಾಗಿದ್ದು, ಇವರಿಗೆ ಸ್ಥಳೀಯವಾಗಿ ಕಾಲರಾ ಸೋಂಕು ತಗುಲಿಲ್ಲ. ಇಬ್ಬರೂ ಬೆಂಗಳೂರಿನಲ್ಲಿ ಊಟ ಮಾಡಿದ ನಂತರ ಅನಾರೋಗ್ಯಕ್ಕೆ ತುತ್ತಾಗಿರುವುದು ಆರೋಗ್ಯ ಇಲಾಖೆ ನಡೆಸಿದ ತನಿಖೆ ವೇಳೆ ಬಯಲಿಗೆ ಬಂದಿದೆ.

ಎಚ್ಚರವಹಿಸಿ

ಎಲ್ಲೆಡೆ ಕಲುಷಿತ ನೀರು ಸೇವನೆಯಿಂದ ಅಸ್ವಸ್ಥಗೊಳ್ಳುವ ಮತ್ತು ಕೆಲವು ಕಡೆಗಳಲ್ಲಿ ಪ್ರಾಣ ಹಾನಿಯೂ ಆಗಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆವಹಿಸುವ ಅಗತ್ಯವಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಕುದಿಸಿ ಆರಿಸಿದ ನೀರಿನ ಬಳಕೆ, ಬಿಸಿಯಾದ ಆಹಾರ ಸೇವನೆ, ಸಾಧ್ಯವಾದಷ್ಟೂ ಶುದ್ಧ ಕುಡಿಯುವ ನೀರಿನ ಬಳಕೆ ಮಾಡುವ ಹವ್ಯಾಸ ರೂಢಿಸಿಕೊಳ್ಳುವಂತೆ ಮನವಿ ಮಾಡಿದೆ. ಅಲ್ಲದೆ, ರಸ್ತೆ ಬದಿ ತಿಂಡಿ ತಿನ್ನುವ ಮುನ್ನಾ ಎಚ್ಚರಿಕೆವಹಿಸಬೇಕು, ಮನೆಯ ಬಳಿ ನೀರು ಪೂರೈಕೆ ಆಗುವ ಪೈಪ್‌ಲೈನ್ ಬಳಿ ಕಲುಷಿತ ಮತ್ತು ಕೊಳಚೆ ಸೇರದಂತೆ ಎಚ್ಚರಿಕೆವಹಿಸಬೇಕಿದೆ.

ಕಲುಷಿತ ನೀರು ಸೇವನೆಯಿಂದ ಕೆಲವು ಕಡೆಗಳಲ್ಲಿ ಜೀವ ಹಾನಿ ಆಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 5 ಸಾವಿರಕ್ಕೂ ಹೆಚ್ಚು ಮಾದರಿಗಳನ್ನು ಸಂಗ್ರಹಿಸಿ ಅವುಗಳಿಗೆ ಪರೀಕ್ಷೆಗೆ ಒಳಪಡಿಸುವ ಕೆಲಸ ಪ್ರಗತಿಯಲ್ಲಿದೆ. ಜನತೆ ಶುದ್ಧ ಕುಡಿಯುವ ನೀರಿನ ಬಳಕೆಗೆ ಹೆಚ್ಚಿನ ಒತ್ತು ನೀಡಬೇಕು. ಡಾ.ಬಿ.ಎಸ್.ನಿರಂಜನ್, ಡಿಎಚ್‌ಒ, ರಾಮನಗರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net