

ಉಪ್ಪಿನಂಗಡಿ : ಪೆರ್ನೆ ಗ್ರಾಮದ ಬಿಳಿಯೂರು ಎಂಬಲ್ಲಿ ಖಾಸಗಿ ವ್ಯಕ್ತಿಯೋರ್ವರ ಜಮೀನಿಗೆ ನಿರ್ಮಿಸಲಾದ ತಡೆಗೋಡೆ ರಸ್ತೆಗೆ ಮಗುಚಿ ಬಿದ್ದು ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ.
ಬಿಳಿಯೂರು ಬಳಿ ವ್ಯಕ್ತಿಯೋರ್ವರು ಜಮೀನಿಗೆ ರಸ್ತೆ ಮಾರ್ಜಿನಿನ ಸನಿಹದಲ್ಲೆ ಆವರಣ ಗೋಡೆ ಸ್ವರೂಪದಲ್ಲಿ ತಡೆಗೋಡೆ ಕಟ್ಟಿದ್ದು, ಗುರುವಾರ ಭಾರಿ ಮಳೆಯಿಂದಾಗಿ ರಸ್ತೆಗೆ ಮಗುಚಿ ಬಿತ್ತು. ಇದೇ ರಸ್ತೆಯಲ್ಲಿ ಹೋಗುತ್ತಿದ್ದ ಪುತ್ತೂರು ಖಾಸಗಿ ವಿದ್ಯಾ ಸಂಸ್ಥೆಯ ಮಿನಿ ಬಸ್ಸೊಂದು ಇದಕ್ಕೆ ಸಿಲುಕುವ ಸಾಧ್ಯತೆ ಇದ್ದು, ಬಸ್ಸಿನ ಚಾಲಕ ತಪ್ಪಿಸಿಕೊಳ್ಳಲು ಹೋಗಿ ಶಾಲಾ ವಾಹನ ಚರಂಡಿಗೆ ವಾಲಿ ಕೆಸರು ಮಣ್ಣಿನಲ್ಲಿ ಹೂತು ಹೋಗಿ ಸುಮಾರು ಮೂರು ಗಂಟೆಗಳ ಕಾಲ ಸಂಚಾರದಲ್ಲಿ ತೊಡಕು ಉಂಟಾಯಿತು.
ಪಂಚಾಯತ್ ಕಾರ‌್ಯದರ್ಶಿ ರಾಜೇಶ, ಸದಸ್ಯರಾದ ಕೇಶವ ಸುಣ್ಣಾಣ, ತನಿಯಪ್ಪ ಸಹಿತ ಗ್ರಾಮಸ್ಥರ ಸಹಕಾರದಿಂದ ರಸ್ತೆ ಸಂಚಾರ ಸುಗಮಗೊಳಿಸಲು ಹರಸಾಹಸ ಪಟ್ಟು ಸಂಜೆ ವೇಳೆಗೆ ಸುಗಮಗೊಂಡಿತು. ಸ್ಥಳಕ್ಕೆ ಗ್ರಾಮ ಕರಣಿಕರಾದ ಚಂದ್ರಕಲಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.