ಘಾಟಿಯ ಹಲವೆಡೆ ಕುಸಿತ : ಶಿರಾಡಿ, ಚಾರ್ಮಾಡಿ ಸಂಚಾರ ತೊಡಕು ; ಸಾಲು ಸಾಲಾಗಿ ನಿಂತ ಲಾರಿಗಳು

shiradi
ಮಾಣಿ ಜಂಕ್ಷನ್‌ನಲ್ಲಿ ವಾಹನಗಳನ್ನು ಮಾಣಿ ಮೈಸೂರು ಹೆದ್ದಾರಿಗೆ ತಿರುಗಿಸಲು ಬ್ಯಾನರ್ ಅಳವಡಿಸಿ ಇಟ್ಟಿರುವ ಬ್ಯಾರಿಕೇಡ್
Published on

ಮಂಗಳೂರು/ನೆಲ್ಯಾಡಿ/ಪುತ್ತೂರು

ಕಳೆದೆರಡು ದಿನದಿಂದ ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಾಗಿರುವುದರಿಂದ ಶಿರಾಡಿ, ಚಾರ್ಮಾಡಿ, ಸಂಪಾಜೆ ಘಾಟಿಯ ಹಲವೆಡೆ ಲಘು ಭೂಕುಸಿತವಾಗಿದೆ. ದ.ಕ. ಜಿಲ್ಲೆಗೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್‌ನ ಹಲವೆಡೆ ಗುಡ್ಡ ಕುಸಿದರೂ ರಸ್ತೆ ಸಂಚಾರಕ್ಕೆ ಯಾವುದೇ ತೊಂದರೆಯಾಗಿಲ್ಲ. ಆದರೆ ಈ ಹೆದ್ದಾರಿಯ ಸಕಲೇಶಪುರದ ಮಾರನಹಳ್ಳಿ ಸಮೀಪ ಗುಡ್ಡ ಕುಸಿತವಾಗಿದ್ದರಿಂದ ಗುರುವಾರ ಬೆಳಗ್ಗಿನಿಂದ ಸಂಜೆವರೆಗೆ ಶಿರಾಡಿ ಘಾಟ್ ಮೂಲಕ ಹಾಸನ, ಸಕಲೇಶಪುರ ಸಂಪರ್ಕ ಕಡಿತವಾಗಿತ್ತು. ಗುಂಡ್ಯದ ಅಡ್ಡಹೊಳೆಯಿಂದ ಹಲವು ಕಿ.ಮೀ ದೂರದವರೆಗೆ ಹೆದ್ದಾರಿಯಲ್ಲಿ ಟ್ರಕ್, ಲಾರಿ ಮತ್ತಿತರ ವಾಹನಗಳು ರಸ್ತೆ ಬದಿಯಲ್ಲೇ ನಿಂತಿತ್ತು. ಚಾರ್ಮಾಡಿ ಘಾಟಿಯ ಅಲೆಕಾನ್ ಎಸ್ಟೇಟ್ ಉತ್ತರ ದಿಕ್ಕಿನಲ್ಲಿ ಗುಡ್ಡ ಕುಸಿದಿದೆ. ಬೆಟ್ಟಗಳಿಂದ ಜಲಪಾತದ ರೀತಿ ನೀರಿನ ಹರಿವು ಹೆಚ್ಚಾಗಿದ್ದರಿಂದ ಚಾರ್ಮಾಡಿ-ಕೊಟ್ಟಿಗೆಹಾರ ಸಂಚಾರವೂ ಕೆಲಹೊತ್ತು ಅಪಾಯಕಾರಿಯಾಗಿ ಪರಿಣಮಿಸಿತ್ತು. ದ.ಕ. ಸಂಪರ್ಕಿಸುವ ಸಂಪಾಜೆ ಘಾಟ್‌ನ ಮದೆನಾಡು ಎಂಬಲ್ಲಿ ಗುಡ್ಡ ಕುಸಿದು ದ.ಕ-ಕೊಡಗು ಸಂಚಾರಕ್ಕೆ ತೊಂದರೆಯಾಗಿದೆ.

ರೈಲು, ವಾಹನ ಸಂಚಾರಕ್ಕೆ ತೊಂದರೆ

ಮಂಗಳೂರು ರೈಲ್ವೆ ಪೊಲೀಸ್ ವಿಭಾಗ ವ್ಯಾಪ್ತಿಯ ಸಕಲೇಶಪುರ ತಾಲೂಕಿನ ಮಾರನಹಳ್ಳಿ ಸಮೀಪದ ದೊಡ್ಡ ತಪ್ಪಲು ರೈಲ್ವೆ ಟ್ರ್ಯಾಕ್‌ಗೆ ಗುಡ್ಡ ಜರಿದು ಮಣ್ಣು ಬೀಳುತ್ತಿದ್ದು, ಮಂಗಳೂರು-ಬೆಂಗಳೂರು ರೈಲು ಸಂಚಾರಕ್ಕೂ ತೊಂದರೆಯಾಗಿದೆ. ಇದೇ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 75ರ ಮಾರನಹಳ್ಳಿ ಬಳಿ ಬೃಹತ್ ಗುಡ್ಡದ 50 ಅಡಿ ಮೇಲ್ಭಾಗದಿಂದ ಮಣ್ಣು ಕುಸಿದು ಹೆದ್ದಾರಿಗೆ ಬೀಳುತ್ತಿರುವುದರಿಂದ ದ.ಕ ಹಾಗೂ ಹಾಸನ ಸಂಪರ್ಕ 3 ಗಂಟೆ ಸ್ಥಗಿತವಾಗಿತ್ತು. ಸಂಜೆ ನಂತರ ನಿಧಾನಗತಿಯಲ್ಲಿ ಎರಡು ಬದಿಯಿಂದ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಸಮರ್ಪಕ ರಸ್ತೆ ಸಂಚಾರ ಇರದ ಕಾರಣ ಮಂಗಳೂರಿನಿಂದ ಬೆಂಗಳೂರು ಸಹಿತ ಹೊರಜಿಲ್ಲೆಗೆ ಹೊರಟ ಕಚ್ಛಾವಸ್ತು ತುಂಬಿದ ಟ್ರಕ್, ಲಾರಿಗಳು ಗುಂಡ್ಯದ ಅಡ್ಡ ಹೊಳೆ ಸಮೀಪದ ಗುಡ್ಡ ಪ್ರದೇಶದಲ್ಲಿ ಠಿಕಾಣಿ ಹೂಡಿವೆ. ಶಿರಾಡಿ ಸುತ್ತಮುತ್ತ ಗುಡ್ಡ ಜರಿದು, ಮಣ್ಣುಗಳ ರಾಶಿ ಹೆದ್ದಾರಿ ರಸ್ತೆಗೆ ಬೀಳುವ ಅಪಾಯವಿರುವುದರಿಂದ ವಾಹನ ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದೆ.

ಬೆಂಗಳೂರಿಗೆ ಬದಲಿ ಮಾರ್ಗ

ಶಿರಾಡಿ ಘಾಟಿ ವ್ಯಾಪ್ತಿಯ ದೋಣಿಗಲ್ ಬಳಿ ಗುಡ್ಡ ಕುಸಿತಗೊಂಡು ಹೆದ್ದಾರಿ ಸಂಚಾರ ಬಂದ್ ಆಗಿದೆ. ಇದರಿಂದ ಮಂಗಳೂರು-ಬೆಂಗಳೂರು ನಡುವೆ ವಾಹನ ಸಂಚಾರ ಸ್ಥಗಿತಗೊಂಡಿದ್ದು, ವಾಹನಗಳು ಸಾಲುಗಟ್ಟಿ ನಿಂತಿದ್ದು, ಮಧ್ಯಾಹ್ನವರೆಗೆ ಟ್ರಾಫಿಕ್ ಜಾಂ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಮಾಣಿಯಲ್ಲಿ ವಾಹನಗಳನ್ನು ತಡೆದು ಮಾಣಿ-ಮೈಸೂರು ಹೆದ್ದಾರಿ ಮೂಲಕ ಬೆಂಗಳೂರಿಗೆ ಸಂಚರಿಸುವಂತೆ ಜಿಲ್ಲಾಡಳಿತ ಸೂಚಿಸಿದೆ. ಈ ಬಗ್ಗೆ ಮಾಣಿ ಜಂಕ್ಷನ್‌ನಲ್ಲಿ ಬ್ಯಾರಿಕೇಡ್ ಅಳವಡಿಸಿ ಬ್ಯಾನರ್‌ನಲ್ಲಿ ಸೂಚನೆ ನೀಡಲಾಗಿದೆ.

ಸಂಪಾಜೆ-ಮಡಿಕೇರಿ ನಿರ್ಬಂಧ

ರಾಷ್ಟ್ರೀಯ ಹೆದ್ದಾರಿ 275ರ ಸಂಪಾಜೆಯಿಂದ ಮಡಿಕೇರಿ ನಡುವಿನ ಕರ್ತೋಜೆ ಬಳಿಯಲ್ಲಿ ಗುಡ್ಡ ಕುಸಿತವಾಗುವ ಸಾಧ್ಯತೆ ಇದ್ದು, ಸಾರ್ವಜನಿಕ ಹಿತಾಸಕ್ತಿಯಿಂದ ಜುಲೈ 18ರಿಂದ ಜುಲೈ 22ರವರೆಗೆ ರಾತ್ರಿ 8ರಿಂದ ಬೆಳಗ್ಗೆ 6ರವರೆಗೆ ತುರ್ತು ವಾಹನ ಹೊರತುಪಡಿಸಿ ಬೇರೆಲ್ಲ ವಾಹನಗಳ ಸಂಚಾರ ನಿರ್ಬಂಧಿಸಿ ಮಂಡಿಕೇರಿ ಜಿಲ್ಲಾಧಿಕಾರಿ ವೆಂಕಟ್‌ರಾಜ್ ಆದೇಶ ಹೊರಡಿಸಿದ್ದಾರೆ. ಬದಲಿ ರಸ್ತೆಯಾಗಿ ಚಾರ್ಮಾಡಿ ಘಾಟಿ-ಕೊಟ್ಟಿಗೆಹಾರ ಮಾರ್ಗ ಬಳಸಿಕೊಳ್ಳಲು ಸೂಚಿಸಲಾಗಿದೆ.

ತುಂಬೆ ಡ್ಯಾಂನ ಎಲ್ಲ ಗೇಟ್ ಓಪನ್

ಉಪ್ಪಿನಂಗಡಿ ನೇತ್ರಾವತಿ ಮತ್ತು ಕುಮಾರಧಾರಾ ನದಿ ಸಂಗಮ ಸ್ಥಳದಲ್ಲಿ 28.60 ಮೀಟರ್(ಅಪಾಯ ಮಟ್ಟ 31.5 ಮೀ.) ಹಾಗೂ ಬಂಟ್ವಾಳದಲ್ಲಿ ನೇತ್ರಾವತಿ ನದಿ 7.3 ಮೀ.(ಅಪಾಯ ಮಟ್ಟ 8.5 ಮೀ.)ನಲ್ಲಿ ಹರಿಯುತ್ತಿದೆ. ಉಪ್ಪಿನಂಗಡಿಯಲ್ಲಿ ನದಿ ನೀರು ಅಪಾಯ ಮಟ್ಟ 29 ಮೀಟರ್ ಮೀರಿ 29.1 ಮೀಟರ್ ಎತ್ತರದಲ್ಲಿ ಹರಿದಿದೆ. ನೀರಿನ ಹರಿಯುವಿಕೆ ಹೆಚ್ಚಳವಾಗುತ್ತಿದ್ದಂತೆ ತುಂಬೆ ಡ್ಯಾಂನ ಎಲ್ಲ ಗೇಟ್ ತೆರೆಯಲಾಗಿದೆ. ತುಂಬೆ, ಪರಂಗಿಪೇಟೆ, ಸಹ್ಯಾದ್ರಿ, ಅಡ್ಯಾರ್ ಸುತ್ತಮುತ್ತ ನೀರಿನ ಮಟ್ಟ ಹೆಚ್ಚಳವಾಗಿದ್ದು, ರಾಷ್ಟ್ರೀಯ ಹೆದ್ದಾರಿವರೆಗೂ ಆಸುಪಾಸಿನಲ್ಲಿತ್ತು. ನೆರೆಗೆ ಬಂಟ್ವಾಳದಲ್ಲಿ 3.576 ಎಕರೆ ಕೃಷಿಭೂಮಿ ಹಾನಿಗೀಡಾಗಿದೆ. ಇದರಿಂದ ಗುರುವಾರ ಬೆಳಗ್ಗೆ ನದಿ ತೀರ ಪ್ರದೇಶದ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವಂತೆ ಸೂಚಿಸಲಾಗಿದ್ದು, ದಿನಪೂರ್ತಿ ಕಂದಾಯ ಇಲಾಖೆ ಸಿಬ್ಬಂದಿ ಸ್ಥಳದಲ್ಲಿ ನಿಗಾ ಇರಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net