

ಬ್ಯಾಡಗಿ: ತಾಲೂಕಿನ ಚಿಕ್ಕಬಾಸೂರು ಗ್ರಾಮದ ಕೃಷಿ ಉತ್ಪನ್ನ ಉಪಮಾರುಕಟ್ಟೆ ಪ್ರಾಂಗಣದಲ್ಲಿ 5 ಕೋಟಿ ರೂ. ಅನುದಾನದಲ್ಲಿ ಆಧುನಿಕ ಶೈಲಿಯ ಕೋಲ್ಡ್ ಸ್ಟೋರೇಜ್ ನಿರ್ವಿುಸಲಾಗುವುದು ಎಂದು ಎಪಿಎಂಸಿ ಅಧ್ಯಕ್ಷ ವೀರಭದ್ರಪ್ಪ ಗೊಡಚಿ ತಿಳಿಸಿದರು.
ಇಲ್ಲಿನ ಎಪಿಎಂಸಿ ಕಾರ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಆಡಳಿತ ಮಂಡಳಿ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಶುಂಠಿ, ಅರಿಷಿಣ, ಹಸಿಮೆಣಸು, ಎಲೆಕೋಸು, ಹೂಕೋಸು ಸೇರಿ ವಿವಿಧ ತರಕಾರಿ, ಸಾಂಬಾರು ಪದಾರ್ಥಗಳನ್ನು ಬೆಳೆಯಲಾಗುತ್ತಿದೆ. ಇದಕ್ಕೆ ಹೊಂದಿಕೊಂಡಂತೆ ಹಾನಗಲ್ಲ, ಹಿರೇಕೆರೂರ, ಹಾವೇರಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಹೆಚ್ಚು ಬೆಳೆ ಬೆಳೆಯುತ್ತಿದ್ದು, ಕೋಲ್ಡ್ ಸ್ಟೋರೇಜ್ ನಿರ್ವಿುಸಿದರೆ ಸಾಕಷ್ಟು ಬೆಳೆಗಳು ಸಂಗ್ರಹವಾಗಲಿವೆ. ತೋಟಗಾರಿಕೆ ಇಲಾಖೆಯ 5 ಕೋಟಿ ರೂ. ವೆಚ್ಚದ ಅನುದಾನದಲ್ಲಿ ಉಪಮಾರುಕಟ್ಟೆಯ ಆವರಣದಲ್ಲಿ 2500 ಮೆಟ್ರಿಕ್ ಟನ್ ಸಾಮರ್ಥ್ಯದ ಕೋಲ್ಡ್ ಸ್ಟೋರೇಜ್ ನಿರ್ವಿುಸಲಾಗುವುದು. ಈ ಕುರಿತು ಠರಾವು ಮಾಡಲಾಗಿದ್ದು, ಶೀಘ್ರ ಕಟ್ಟಡಕ್ಕೆ ಚಾಲನೆ ನೀಡಲಾಗುವುದು ಎಂದರು.
ಜಾನುವಾರ ಮಾರುಕಟ್ಟೆ ಆರಂಭ: ತಾಲೂಕಿನ ಚಿಕ್ಕಣಜಿ ಗ್ರಾಮದಲ್ಲಿ 3 ಎಕರೆ ವ್ಯಾಪ್ತಿಯಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಜಾನುವಾರು ಮಾರುಕಟ್ಟೆ ನಿರ್ವಿುಸಲಾಗಿದೆ. ಕುಡಿಯುವ ನೀರು, ನೆರಳು, ಹೈಮಾಸ್ಟ್, ರೈತರಿಗೆ ವಿಶ್ರಾಂತಿ ಭವನ, ಹೈಟೆಕ್ ಶೌಚಗೃಹ, ಕಾರ್ಯಾಲಯ, ವಾಹನ ತಂಗಲು ಶೆಡ್, ಸುತ್ತಲೂ ರಕ್ಷಣಾ ಗೋಡೆ ಸೇರಿ ಹಲವು ಸೌಲಭ್ಯ ಕಲ್ಪಿಸಲಾಗಿದೆ. ಆವರಣವನ್ನು ಕಾಂಕ್ರೀಟೀಕರಣಗೊಳಿಸಲಾಗಿದೆ. ವೇಬ್ರಿಡ್ಜ್ ಯಂತ್ರ ಸಿದ್ಧಗೊಂಡಿದೆ. ಕೆಲ ದಿನಗಳಲ್ಲಿ ಹೊಸ ಮಾರುಕಟ್ಟೆ ಸೌಲಭ್ಯ ರೈತರಿಗೆ ಲಭ್ಯವಾಗಲಿದೆ ಎಂದರು.
ರೈತರಲ್ಲಿ ಮನವಿ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಎಸ್.ಬಿ. ನ್ಯಾಮಗೌಡ ಮಾತನಾಡಿ, ಮಾರುಕಟ್ಟೆಗೆ ಬಂದುಹೋಗುವ ರೈತರು, ವರ್ತಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಪ್ರಾಂಗಣದಲ್ಲಿ ಕೈತೊಳೆಯಲು ಸೋಪ್ ನೀರು, ಸ್ಯಾನಿಟೈಸರ್, ಶುದ್ಧ ನೀರು ಒದಗಿಸಲಾಗಿದೆ. ಹೊರರಾಜ್ಯಗಳಿಂದ ಅಂಗಡಿಗಳಿಗೆ ಬಂದುಹೋಗುವ ಲಾರಿ ಚಾಲಕ, ಕ್ಲೀನರ್ಗಳು ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಆಯಾ ದಲ್ಲಾಳಿ ಅಂಗಡಿಯವರು ನೋಡಿಕೊಳ್ಳಬೇಕು. ರೈತರು ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ, ಉಗುಳದಂತೆ ಎಚ್ಚರಿಕೆ ವಹಿಸಬೇಕು. ಕರೊನಾ ರೋಗ ತಡೆಗಟ್ಟುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಎಲ್ಲರೂ ನಿಯಮ ಪಾಲಿಸಬೇಕು ಎಂದು ಮನವಿ ಮಾಡಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಕರಬಸಪ್ಪ ನಾಯ್ಕರ, ಎಪಿಎಂಸಿ ಉಪಾಧ್ಯಕ್ಷ ಉಳಿವೆಪ್ಪ ಕುರುವತ್ತಿ, ಸದಸ್ಯರಾದ ಮಾಲತೇಶ ಹೊಸಳ್ಳಿ, ಚನ್ನಬಸಪ್ಪ ಹುಲ್ಲತ್ತಿ, ಬಾಬಣ್ಣ ಪಾಟೀಲ, ವಿಜಯ ಮಾಳಗಿ, ನೀಲವ್ವ ಪಾಟೀಲ, ಶಿವಪ್ಪ ಕುಮ್ಮೂರು, ಹನುಮಂತಪ್ಪ ನಾಯ್ಕರ ಇತರರಿದ್ದರು.