

ಚಿಕ್ಕಬಳ್ಳಾಪುರ: ಸೈಕ್ಲೋನ್ ಜಿಟಿಜಿಟಿ ಮಳೆ ಹಿನ್ನೆಲೆಯಲ್ಲಿ ಬೆಚ್ಚಗಿರಲು ಮಾಡಿದ ತಂದೆ ಮಾಡಿದ ಐಡಿಯಾ ಮಗಳನ್ನೇ ಬಲಿ ಪಡೆದಿದ್ದು, ಇಡೀ ಕುಟುಂಬ ಜೀವನ್ಮರಣದ ನಡುವೆ ಹೋರಾಟ ಮಾಡುತ್ತಿರುವ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಬುಕ್ಕರಾಯಪಟ್ಟಣ ಮೂಲದ ವೀರಾಂಜನೇಯಲು ಅವರು ಪತ್ನಿ ಶಾಂತಮ್ಮ, ಮಕ್ಕಳಾದ ಅಂಕಿತಾ ಮತ್ತು ಅರ್ಚನಾ ಜತೆ ಗೌರಿಬಿದನೂರು ತಾಲೂಕಿನ ಮರಾಠಿಪಾಳ್ಯದ ಬಳಿ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸಕ್ಕಿದ್ದರು. ನಿವಾರ್ ಚಂಡಮಾರುತದ ಎಫೆಕ್ಟ್ ಜಿಟಿಜಿಟಿ ಮಳೆಯಾಗುತ್ತಿತ್ತು. ಚಳಿ ವಾತಾವರಣ ಹೆಚ್ಚಾಗಿತ್ತು. ಗುರುವಾರ ರಾತ್ರಿ ಕುಂಬಳಕಾಯಿ ಪಲ್ಯ ಹಾಗೂ ಚಪಾತಿ ಮಾಡಿಕೊಂಡು ನಾಲ್ವರು ತಿಂದು ಮಲಗಿದ್ದರು. ಇದಕ್ಕೂ ಮುನ್ನ ಚಳಿಯಿಂದ ತಪ್ಪಿಸಿಕೊಳ್ಳಲು ವೀರಾಂಜನೇಯಲು ತಾವು ವಾಸವಿದ್ದ ಚಿಕ್ಕ ಕೋಣೆಯಲ್ಲಿ ತಗಡಿನ ಡಬ್ಬದಲ್ಲಿ ಕೆಂಡ ಹಾಕಿ ಮಲಗಿದ್ದರು.
ಶುಕ್ರವಾರ ಬೆಳಗ್ಗೆ ಎಷ್ಟೊತ್ತದಾರೂ ಕೋಣೆಯಿಂದ ಆಚೆಗೆ ಬಾರದ ಪರಿಣಾಮ ಅನುಮಾನಗೊಂಡ ಇಟ್ಟಿಗೆ ಫ್ಯಾಕ್ಟರಿ ಮಾಲೀಕರು ಬಾಗಿಲು ಹೊಡೆದು ಒಳ ಹೋದಾಗ ಅಪ್ಪ-ಅಮ್ಮ, ಕಿರಿ ಮಗಳು ಅಸ್ವಸ್ಥರಾಗಿ ಮಲಗಿದ್ದಲ್ಲೇ ಬಿದ್ದಿದ್ದರು. ಹಿರಿ ಮಗಳು ಮೃತಪಟ್ಟಿದ್ದಳು. ಕೂಡಲೇ ಮಂಚೇನಹಳ್ಳಿ ಪೊಲೀಸರ ನೆರವಿನಿಂದ ಗೌರಿಬಿದನೂರು ತಾಲೂಕು ಆಸ್ಪತ್ರೆಗೆ ಅವರನ್ನು ದಾಖಲಿಸಿದ್ದು, ಪ್ರಜ್ಞಾಹೀನರಾಗಿದ್ದ ಮೂವರು ಚೇತರಿಸಿಕೊಳ್ಳುತ್ತಿದ್ದಾರೆ.
ಅಷ್ಟಕ್ಕೂ ಆ ರಾತ್ರಿ ಆಗಿದ್ದೇನು ಎಂಬುದಕ್ಕೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಆದ್ರೆ ಚಳಿಯಿಂದ ಬೆಚ್ಚಗಿರಲು ವೀರಾಂಜನೇಯಲು ಡಬ್ಬದಲ್ಲಿ ಹಾಕಿಟ್ಟಿದ್ದ ಕೆಂಡದಿಂದ ಹೊಗೆ ತುಂಬಿಕೊಂಡು ಮಲಗಿದ್ದ ಹಿರಿಯ ಮಗಳು ಅರ್ಚನಾ ಸ್ಥಳದಲ್ಲೇ ಸಾವನ್ನಪ್ಪಿರುವ ಶಂಕೆ ಇದೆ. ಉಳಿದವರು ಉಸಿರುಗಟ್ಟಿ ಅಸ್ವಸ್ಥರಾಗಿದ್ದರು ಎನ್ನಲಾಗಿದೆ.
ಆದರೆ ಈ ಘಟನೆಗೆ ಬೆಂಕಿಯ ಹೊಗೆ ಅಥವಾ ರಾತ್ರಿ ಸೇವಿಸಿದ ಆಹಾರ ಕಾರಣವಾ? ಎಂದು ತನಿಖೆ ನಡೆಯುತ್ತಿದೆ. ಸಂಕಷ್ಟಕ್ಕೆ ಸಿಲುಕಿದ ಈ ಬಡ ಕುಟುಂಬಕ್ಕೆ ಮಾನವೀಯತೆ ಮೆರೆದಿರುವ ಮಂಚೇನಹಳ್ಳಿ ಪೊಲೀಸ್ ಠಾಣೆ ಪಿಎಸ್ಐ ಲಕ್ಷ್ಮೀನಾರಾಯಣ ವೈಯಕ್ತಿಕವಾಗಿ 25 ಸಾವಿರ ರೂಪಾಯಿ ನೀಡಿದ್ದಾರೆ.