ಕೋವಿಡ್ ಪರೀಕ್ಷೆಗೆ ಸಹಕಾರ ಅಗತ್ಯ

24bkl1
Published on

ಭಟ್ಕಳ: ಬ್ರಿಟನ್​ನಲ್ಲಿ ಕರೊನಾ ವೈರಸ್ ಎರಡನೇ ಹಂತಕ್ಕೆ ತಲುಪಿದೆ. ಮುನ್ನೆಚ್ಚರಿಕೆ ಕ್ರಮವಾಗಿ ವಿದೇಶದಿಂದ ಜಿಲ್ಲೆಗೆ ಬಂದ ಪ್ರಯಾಣಿಕರ ಗಂಟಲ ದ್ರವ ಪರೀಕ್ಷೆ ಮಾಡಲು ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶರದ ನಾಯಕ ಹೇಳಿದರು.

ತಾಲೂಕಾಸ್ಪತ್ರೆಯಲ್ಲಿ ಗುರುವಾರ ಏರ್ಪಡಿಸಿದ್ದ ಕರೊನಾ ಎರಡನೇ ಹಂತ ತಡೆಗಟ್ಟುವಿಕೆ ಸಭೆಯಲ್ಲಿ ಸಮಾಜದ ಮುಖಂಡರೊಂದಿಗೆ ಅವರು ಮಾತನಾಡಿದರು.

ಬ್ರಿಟನ್ ಸೇರಿ ಕೆಲವು ರಾಷ್ಟ್ರಗಳಲ್ಲಿ ರೂಪಾಂತರಿ ಕರೊನಾ ಜನರಲ್ಲಿ ಮತ್ತೆ ಆತಂಕ ಮೂಡಿಸಿದೆ. ವಿದೇಶದಿಂದ ಬಂದವರನ್ನು ಕೋವಿಡ್ ಟೆಸ್ಟ್​ಗೆ ಒಳಪಡಿಸಬೇಕು. ಅವರಿಗೆ ಪಾಸಿಟಿವ್ ಬಂದಲ್ಲಿ ಹೋಮ್ ಐಸೋಲೇಷನ್​ನಲ್ಲಿ ಇರುವ ವ್ಯವಸ್ಥೆ ಮಾಡಿಕೊಳ್ಳಬೇಕು. ಜಿಲ್ಲಾದ್ಯಂತ ಮುಂದಿನ ದಿನಗಳಲ್ಲಿ ಎರಡನೇ ಹಂತದ ಕರೊನಾ ಟೆಸ್ಟ್ ಆರಂಭಿಸಲಿದ್ದು, ಪ್ರತಿಯೊಬ್ಬರ ಗಂಟಲ ದ್ರವ ಸಂಗ್ರಹಿಸಿ ಕಾರವಾರಕ್ಕೆ ಕಳುಹಿಸಿ. ಪರೀಕ್ಷೆ ನಡೆಸಲಾಗುವುದು ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಇನಾಯಿತುಲ್ಲಾ ಶಾಬಂದ್ರಿ, ಈಗಾಗಲೇ ಒಂದು ಹಂತದ ಪರೀಕ್ಷೆ ಮುಗಿಸಿದ್ದು, ನೆಗೆಟಿವ್ ವರದಿ ಬಂದಿದೆ. ಪುನಃ ಜನರಿಗೆ ತೊಂದರೆ ಕೊಡುವುದು ಬೇಡ. ವಿದೇಶದಿಂದ ಬಂದವರ ಮೇಲೆ ಅಗತ್ಯ ಕ್ರಮ ಕೈಗೊಳ್ಳಿ ಎಂದರು.

ಸಮಾಜ ಸೇವಕ ಟಾಪ್ ನಿಸಾರ ರುಕ್ನುದ್ದೀನ ಮಾತನಾಡಿ, ನಮ್ಮ ಕಾರವಾರದ ಲ್ಯಾಬ್ ದೋಷಪೂರಿತವಾಗಿದೆ. ಕೂಡಲೆ ಸರಿಪಡಿಸಿ. ಕಳೆದ ಬಾರಿ ವಿಮಾನ ನಿಲ್ದಾಣಕ್ಕೆ ತೆರಳಿದ ನೂರಾರು ಮಂದಿ ಅಲ್ಲಿಂದ ಮುಂದೆ ತೆರಳಲಾಗದೆ ಇದರಿಂದ ತೊಂದರೆ ಅನುಭವಿಸಿದ್ದಲ್ಲದೆ, ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಇದಾವುದಕ್ಕೂ ಸಮರ್ಪಕ ಉತ್ತರ ನೀಡದ ನೀವು, ಈಗ ಇನ್ನೊಂದು ಹಂತದ ಪರೀಕ್ಷೆ ಮಾಡಲು ನಮ್ಮ ಆಕ್ಷೇಪವಿದೆ ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ಡಾ. ಶರದನಾಯಕ, ಈ ಹಿಂದೆ ತಂತ್ರಜ್ಞಾನದಲ್ಲಿ ಕೆಲ ಲೋಪದೋಷಗಳು ಕಂಡುಬಂದಿರಬಹುದು. ಅದನ್ನೆಲ್ಲ ಸರಿಪಡಿಸಿಕೊಳ್ಳಲಾಗಿದೆ. ಸರ್ಕಾರದ ಆದೇಶ ಪಾಲಿಸಲು ಸಹಕಾರ ನೀಡಿ ಎಂದರು.

ತಾಲೂಕಾಸ್ಪತ್ರೆ ಆಡಳಿತಾಧಿಕಾರಿ ಡಾ. ಸವಿತಾ ಕಾಮತ ಮಾತನಾಡಿ, ಕೋವಿಡ್ ಟೆಸ್ಟ್ ಮಾಡಿಸುವುದರಿಂದ ಮುಂದಿನ ದಿನಗಳಲ್ಲಿ ಸಹಾಯವಾಗುತ್ತದೆ ಎಂದರು.

ತಾಲೂಕು ಆರೋಗ್ಯಾಧಿಕಾರಿ ಮೂರ್ತಿರಾಜ ಭಟ್ ಇದ್ದರು. ಸಾದಿಕ್ ಮಟ್ಟಾ, ನರೇಂದ್ರ ನಾಯಕ, ಎಂ.ಆರ್. ನಾಯ್ಕ, ಶ್ರೀಕಾಂತ ನಾಯ್ಕ, ಸುಧಾ ನಾಯ್ಕ, ಕೃಷ್ಣಾ ನಾಯ್ಕ ಆಸರಕೇರಿ, ಇತರರಿದ್ದರು.

ರೂಪಾಂತರಗೊಂಡ ವೈರಸ್ ಬಗ್ಗೆ ಜಾಗೃತಿ: ಕರೊನಾ ಸಕ್ರಿಯರ ಸಂಖ್ಯೆ ತೀರಾ ಕಡಿಮೆ ಇದೆ. ರೂಪಾಂತರಗೊಂಡ ವೈರಸ್ ಬಗ್ಗೆ ಮುಂಜಾಗ್ರತೆ ಕ್ರಮವಾಗಿ ಹೊರ ದೇಶದಿಂದ ಬಂದವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ. ಹೇಳಿದರು. ಮುಂಡಗೋಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಸಿಟಿವ್ ಬಂದವರನ್ನು ರೂಪಾಂತರಗೊಂಡ ವೈರಸ್ ಇರುವ ಬಗ್ಗೆ ಖಚಿತ ಪಡಿಸಲು ಬೆಂಗಳೂರು ವೈರಾಲಜಿ ಸಂಸ್ಥೆಗೆ ಪರೀಕ್ಷೆಗೆ ಒಳಪಡಿಸಲಾಗುವುದು. ಪಾಸಿಟಿವ್ ಇದ್ದರೆ ಅವರ ಸುತ್ತ-ಮುತ್ತ ಇರುವವರನ್ನು ಪರೀಕ್ಷೆಗೆ ಒಳಪಡಿಸಲಾಗುವುದು. ಈಗಾಗಲೇ ಮುಂಡಗೋಡಿಗೆ 8 ಮಂದಿ, ದಾಂಡೇಲಿ ಮತ್ತು ಕುಮಟಾಕ್ಕೆ ತಲಾ ಇಬ್ಬರು ಸೇರಿ 12 ಜನರು ಹೊರದೇಶದಿಂದ ಬಂದಿದ್ದಾರೆ. ಇವರೆಲ್ಲರನ್ನೂ ಪರೀಕ್ಷೆಗೆ ಒಳಪಡಿಸಿ ಹೋಂ-ಕ್ವಾರಂಟೈನ್ ಮಾಡಲಾಗಿದೆ. ಕೋವಿಡ್ ಲಸಿಕೆ ಬಗ್ಗೆ ವಿಶೇಷ ತಯಾರಿ ಪೂರ್ತಿಯಾಗಿದೆ. ಮೊದಲು ಆರೋಗ್ಯ ಇಲಾಖೆ ನಂತರ ಪೊಲೀಸ್ ಇಲಾಖೆ ಸಿಬ್ಬಂದಿಗೆ, ಆಮೇಲೆ ಕರೊನಾ ಸೇನಾನಿಗಳಿಗೆ ನಿಗದಿತ ಸಮಯದಲ್ಲಿ ಲಸಿಕೆ ನೀಡಲಾಗುವುದು. 50 ವರ್ಷಕ್ಕಿಂತ ಮೇಲ್ಪಟ್ಟ ತೀವ್ರ ಕಾಯಿಲೆಯಿಂದ ಬಳಲುತ್ತಿರುವರೆಗೆ ಲಸಿಕೆ ನೀಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net