

ಸೋಮವಾರಪೇಟೆ: ಸಮೀಪದ ಕಲ್ಕಂದೂರು ಗ್ರಾಮದಲ್ಲಿ ಗ್ರಾಮಸ್ಥರಿಗೆ ಸೇರಿದ ತೋಟಗಳಲ್ಲಿ ಆರ್‌ಎಫ್‌ಒ ನೇತೃತ್ವದಲ್ಲಿ ಕಾಫಿ ತೋಟಗಳನ್ನು ಸರ್ವೇ ಮಾಡಿಸುತ್ತಿದ್ದು, ರೈತ ಹೋರಾಟ ಸಮಿತಿ ಶನಿವಾರ ತಡೆದಿದ್ದರಿಂದ ತಾತ್ಕಾಲಿಕವಾಗಿ ಮುಂದೂಡಲಾಯಿತು.
ಕಲ್ಕಂದೂರು ಗ್ರಾಮದಲ್ಲಿ ಬನ್ನಳ್ಳಿ ಗೋಪಾಲ್ ಅವರಿಗೆ ಸೇರಿದ ಕಾಫಿ ತೋಟದ ಸರ್ವೇ ನಡೆಸಲಾಗುತಿತ್ತು. ತೋಟದ ಮಾಲೀಕರಿಗೆ ಯಾವುದೇ ನೋಟಿಸ್ ನೀಡದೆ, ಸರ್ವೇ ಮಾಡುತ್ತಿರುವುದನ್ನು ತಿಳಿದು ಸ್ಥಳಕ್ಕೆ ತೆರಳಿದ ರೈತ ಹೋರಾಟ ಸಮಿತಿ ಪದಾಧಿಕಾರಿಗಳು ಮತ್ತು ಜಾಗದ ಮಾಲೀಕರು ಸರ್ವೇ ಮಾಡುತ್ತಿರುವುದಕ್ಕೆ ಪ್ರಬಲವಾಗಿ ವಿರೋಧಿಸಿದರು.
ಈ ಸಂದರ್ಭ ರೈತ ಹೋರಾಟ ಸಮಿತಿ ಅದ್ಯಕ್ಷ ಚಕ್ರವರ್ತಿ ಸುರೇಶ್ ಮಾತನಾಡಿ, ಒತ್ತುವರಿ ತೆರವಿನ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಅರಣ್ಯ ಸಚಿವ ಈಶ್ವರಖಂಡ್ರೆ ಸೇರಿದಂತೆ ರಾಜ್ಯ ಸರ್ಕಾರದ ಕಾರ್ಯದರ್ಶಿಗಳಿಗೆ ಮನವಿ ಮಾಡಲಾಗಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಆದರೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕಾಗಮಿಸಿ ಜಾಗದ ಮಾಲೀಕರಿಗೆ ಮಾಹಿತಿ ನೀಡದೆ ಸರ್ವೇ ನಡೆಸುತ್ತಿರುವುದು ಖಂಡನೀಯ. ಅರಣ್ಯ, ಕಂದಾಯ ಮತ್ತು ರೈತರು ಒಟ್ಟಾಗಿ ಸೇರಿ ಸರ್ವೇ ನಡೆಸುವಂತೆ ಮನವಿ ಮಾಡಲಾಗಿದೆ ಎಂದು ಅರಣ್ಯಾಧಿಕಾರಿಗಳಿಗೆ ಮನವರಿಕೆ ಮಾಡಲಾಯಿತು.
ಡಿಆರ್‌ಎಫ್‌ಒ ಸತೀಶ್ ಮಾತನಾಡಿ, ರೈತರು ಸರ್ಕಾರಕ್ಕೆ ಮನವಿ ಮಾಡಿದರೂ, ಇಲ್ಲಿಯವರೆಗೆ ಸರ್ವೇ ನಡೆಸದಿರುವ ಬಗ್ಗೆ ಯಾವುದೇ ಆದೇಶವಾಗಿಲ್ಲ. ರೈತರು ಹೋರಾಟ ಮಾಡಿದರೂ, ಇಲಾಖೆ ಸರ್ವೇ ಕಾರ್ಯ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕಿದೆ. ಸರ್ಕಾರದ ಆದೇಶ ತಂದಲ್ಲಿ ಮಾತ್ರ ಸರ್ವೆ ನಡೆಸುವುದನ್ನು ನಿಲ್ಲಿಸಲಾಗುವುದು ಎಂದು ಮತ್ತೆ ಸರ್ವೆ ನಡೆಸಲು ಮುಂದಾದಾಗ ರೈತರು ಮತ್ತು ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ಸರ್ವೇ ಕಾರ್ಯ ನಿಲ್ಲಿಸದೆ, ಮುಂದುವರಿಸಿದಲ್ಲಿ ತೀವ್ರ ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದಾಗ, ಅಧಿಕಾರಿಗಳು ಸರ್ವೇಯನ್ನು ತಾತ್ಕಾಲಿಕವಾಗಿ ಮುಂದೂಡಿದರು.
ಸಮಿತಿಯ ದಿವಾಕರ್, ದಳವಾಯಿ ರಾಜು, ಬನ್ನಳ್ಳಿ ಗೋಪಾಲ್, ಕಿಶೋರ್, ಕಲ್ಕಂದೂರು ಪ್ರಕಾಶ್, ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಎಂ. ದಿನೇಶ್ ಮತ್ತು ಅರಣ್ಯಾಧಿಕಾರಿ ವಿಶ್ವ ಸೇರಿದಂತೆ ಹಲವರು ಇದ್ದರು.