

ಸೋಮವಾರಪೇಟೆ: ಇತ್ತೀಚಿನ ವರ್ಷಗಳಲ್ಲಿ ಕಾಫಿ ಕೃಷಿ ಇಂದು ದುಬಾರಿಯಾಗಿದೆ. ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಬೆಲೆ ಗಗನಕ್ಕೇರಿದೆ. ಕಾರ್ಮಿಕರ ಕೊರತೆ, ಅಧಿಕ ಕೂಲಿಯಿಂದ ಕಾಫಿ ಬೆಳೆಗಾರರಿಗೆ ಕಾಫಿ ತೋಟದ ನಿರ್ವಹಣೆ ಕಷ್ಟಕರವಾಗಿದೆ. ಉತ್ಪಾದನಾ ವೆಚ್ಚ ಕಡಿಮೆಯಾದಾಗ ಮಾತ್ರ ಕಾಫಿ ಕೃಷಿ ಲಾಭದಾಯಕವಾಗುತ್ತದೆ ಎಂದು ಪ್ರಗತಿಪರ ಕೃಷಿಕ ಕಾಲಿಸ್ತಾ ಡಿಸಿಲ್ವಾ ಹೇಳಿದರು.
ವಳಗುಂದ ಗ್ರಾಮದ ಕಾಲಿಸ್ತಾ ಡಿಸಿಲ್ವಾ ಅವರ ತೋಟದಲ್ಲಿ ಸೋಮವಾರ ರಾಸಾಯನಿಕ ಗೊಬ್ಬರ ರಹಿತ, ಸೂಕ್ಷ್ಮಾಣು ಜೀವಿ ಕಾಫಿ ಕೃಷಿ ಪದ್ಧತಿ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು. ಈಗಿರುವ ಒಂದೇ ಮಾರ್ಗವೆಂದರೆ ರಾಸಾಯನಿಕ ಬಿಟ್ಟು ಸಾವಯವ ಮಾದರಿಯಲ್ಲಿ ಕೃಷಿ ಮಾಡಬೇಕಾಗಿದೆ ಎಂದು ಹೇಳಿದರು.
ನಾನು 24 ಎಕರೆ ಕಾಫಿ ತೋಟದಲ್ಲಿ ಸಾವಯವ ಮಾದರಿಯಲ್ಲಿ ಕಾಫಿ ಬೆಳೆಯುತ್ತಿದ್ದು, ಕಡಿಮೆ ಖರ್ಚಿನಲ್ಲಿ ಉತ್ತಮ ಇಳುವರಿ ಪಡೆಯುತ್ತಿದ್ದೇನೆ ಎಂದು ಬೆಳೆಗಾರರಿಗೆ ಕಾಲಿಸ್ತಾ ಮಾಹಿತಿ ನೀಡಿದರು.
ನಾನೆ ತಯಾರು ಮಾಡಿಕೊಂಡಿರುವ ಸೂಕ್ಷ್ಮಾಣು ಜೀವಿ ಗೊಬ್ಬರದ ಬಗ್ಗೆ ಮಾಹಿತಿ ನೀಡಿದರು. ಸೂಕ್ಷ್ಮಣು ಜೀವಿಗಳನ್ನು ಮಣ್ಣಿಗೆ ಸಿಂಪಡಣೆ ಮಾಡಬೇಕು. ತೋಟಗಳಲ್ಲಿ ಸಂಪೂರ್ಣವಾಗಿ ಕಳೆ ತೆಗೆಯುವುದನ್ನು ಬಿಟ್ಟು, ನೆಲ ಮಟ್ಟದಲ್ಲಿ ಅದನ್ನು ನಿಯಂತ್ರಿಸಿದಲ್ಲಿ ಇದರಿಂದ ಮಣ್ಣಿನ ಫಲವತ್ತತೆಗೆ ಹೆಚ್ಚಿನ ಸಹಕಾರಿಯಾಗಲಿದೆ. ರಾಸಾಯನಿಕ ಗೊಬ್ಬರ ಬಳಸುವುದನ್ನು ಬಿಟ್ಟಲ್ಲಿ ಎರೆ ಹುಳುಗಳ ಸಂಖ್ಯೆ ಹೆಚ್ಚಾಗುವುದರೊಂದಿಗೆ ಮಣ್ಣಿಗೆ ನೈಸರ್ಗಿಕವಾಗಿ ಗೊಬ್ಬರ ಸಿಗುತ್ತದೆ. ರಾಸಾಯನಿಕ ರಹಿತವಾಗಿ ಬೆಳೆದ ಕಾಫಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಬೇಡಿಕೆ ಮತ್ತು ಬೆಲೆ ಇದೆ. ಬೆಳೆಗಾರರು ಕೃಷಿ ಪದ್ಧತಿಯನ್ನು ಬದಲಾಯಿಸಿಕೊಂಡರೆ ಮಾತ್ರ ಗುಣಮಟ್ಟದ ಕಾಫಿ ಉತ್ಪಾದನೆ ಮಾಡಬಹುದು ಎಂದರು.
ಕಾಫಿ ಬೆಳೆಗಾರರಾದ ಯಡೂರು ಗ್ರಾಮದ ಮನೋಹರ್, ಬೀಟಿಕಟ್ಟೆ ಗ್ರಾಮದ ಮಂಜುನಾಥ್, ಅರಗಲ್ಲು ಗ್ರಾಮದ ದೇವರಾಜು, ಹಿರಿಕರ ಗ್ರಾಮದ ಮಂಜುನಾಥ್ ಮತ್ತು ಚಂದ್ರಶೇಖರ್ ಇದ್ದರು.