ಕಾಫಿ ಬೆಳೆ ನಿರ್ವಹಣೆ ಕಷ್ಟ

ಕಾಫಿ ಬೆಳೆ ನಿರ್ವಹಣೆ ಕಷ್ಟ
Published on

ಹಿರಿಕರ ರವಿ ಸೋಮವಾರಪೇಟೆ
ಕಾಫಿ ಬೆಳೆಗಾರರು ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದು, ಕಾಫಿ ತೋಟದ ನಿರ್ವಹಣೆ ಸಾಧ್ಯವಿಲ್ಲದೆ ಪಾಳು ಬಿಡಬೇಕಾದ ಅನಿವಾರ್ಯತೆ ಬರಬಹುದು ಎಂದು ಕಾಫಿ ಬೆಳೆಗಾರರು ತಮ್ಮ ಅಸಹಾಯಕತೆ ತೋಡಿಕೊಂಡರು.

ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ವತಿಯಿಂದ ಸೋಮವಾರಪೇಟೆ ಜೇನು ಕೃಷಿಕರ ಸಹಕಾರ ಸಂಘದ ಮುಂಭಾಗ ಗುರುವಾರ ನಡೆದ ಕಾಫಿ ಬೆಳೆಗಾರರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ತಮ್ಮ ಸಮಸ್ಯೆ ಹೇಳಿಕೊಂಡರು.

ಸೋಮವಾರಪೇಟೆ ತಾಲೂಕಿನಲ್ಲಿ ಅರೇಬಿಕಾ ಕಾಫಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಕೆಲವು ಕಡೆ ರೋಬಸ್ಟಾ ಕಾಫಿಯನ್ನು ಬೆಳೆಯಲಾಗುತ್ತಿದೆ. ಪ್ರಸಕ್ತ ವರ್ಷ ಕಾಫಿ ಉತ್ತಮ ಬೆಲೆ ಇದೆ. ಆದರೆ ಫಸಲು ನಷ್ಟವಾಗಿ, ಉತ್ಪಾದನೆ ಕಡಿಮೆಯಾಗಿದೆ. ಬಹುತೇಕ ಬೆಳೆಗಾರರು ಕಡಿಮೆ ಬೆಲೆ ಇದ್ದಾಗಲೇ ಆರ್ಥಿಕ ಸಮಸ್ಯೆಯಿಂದ ಕಾಫಿ ಮಾರಾಟ ಮಾಡಿದ್ದಾರೆ. ಈಗ ಬೆಲೆ ಹೆಚ್ಚಾಗಿರುವುದರಿಂದ ಶೇ.80ರಷ್ಟು ಬೆಳೆಗಾರರಿಗೆ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡರು.

ಆದರೆ ಕಾಫಿ ಬೆಲೆ ಜಾಸ್ತಿಯಾಗಿರುವ ಕಾರಣ ಕಾರ್ಮಿಕರು ದುಪ್ಪಟ್ಟು ಕೂಲಿ ಕೇಳುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಕೆಲಸ ಮಾಡಿದರೆ ಮಾತ್ರ ಮುಂದಿನ ಫಸಲು ಸಿಗುತ್ತದೆ. ಕೆಲಸ, ಗೊಬ್ಬರ ಹಾಕುವುದು, ಸಿಲೀಂಧ್ರನಾಶಕ ಸಿಂಪಡಣೆ, ಮರಕಪಾತು, ಗಿಡಕಪಾತು, ನಿಗದಿತ ಸಮಯದಲ್ಲೇ ಮಾಡಬೇಕು. ಇದಕ್ಕೆ ಕಾರ್ಮಿಕರು ಅವಶ್ಯಕವಾಗಿ ಬೇಕಾಗಿದೆ. ಈ ಕಾರಣದಿಂದ ಇಷ್ಟು ಕೂಲಿ ಕೊಟ್ಟರೆ ಕೆಲಸಕ್ಕೆ ಬರುತ್ತೇವೆ ಎಂದು ಹೇಳುತ್ತಿದ್ದಾರೆ. ವಿಧಿಯಲ್ಲದೆ ದುಪ್ಪಟ್ಟು ಕೂಲಿ ಕೊಡಬೇಕಾಗಿದೆ. ಕೂಲಿ ತಕ್ಕದಾಗಿ ಕೆಲಸ ಮಾಡಿದರೆ ಸಮಸ್ಯೆಯಿಲ್ಲ. ಆದರೆ, ದಿನಕ್ಕೆ 6 ಗಂಟೆ ಕೆಲಸ ಮಾಡುತ್ತಿರುವುದರಿಂದ ಉತ್ಪಾದನೆ ವೆಚ್ಚ ಹೆಚ್ಚಾಗಿ ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ. ಬಂದ ಆದಾಯ ಬಡ್ಡಿ ಕಟ್ಟಲು ಸಾಕಾಗುತ್ತಿಲ್ಲ ಎಂದು ಬೆಳೆಗಾರರು ನೋವು ತೋಡಿಕೊಂಡರು.
ಮಕ್ಕಳ ವಿದ್ಯಾಭ್ಯಾಸಕ್ಕೂ ಕಷ್ಟಪಡುವಂತಾಗಿದೆ. ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳ ಬೆಲೆ ಗಗನಕ್ಕೇರಿದೆ. ಆಹಾರ ಸಾಮಗ್ರಿಗಳ ಬೆಲೆ ಹೆಚ್ಚಾಗಿದೆ. ಬದುಕು ಕಷ್ಟವಾಗಿದೆ. ಎಷ್ಟೇ ನಷ್ಟವಾದರೂ, ರೈತರು ಕಾಫಿ ತೋಟದ ನಿರ್ವಹಣೆ ಮಾಡುತ್ತಿರುವುದರಿಂದ ಒಂದಷ್ಟು ಕಾಫಿ ಉತ್ಪಾದನೆಯಾಗುತ್ತಿದೆ. ದೇಶಕ್ಕೆ ವಿದೇಶಿ ವಿನಿಮಯದಿಂದ ಸಾವಿರಾರು ಕೋಟಿ ರೂ. ಅದಾಯ ಬರುತ್ತಿದೆ. ಆದರೆ ಕಾಫಿ ಉದ್ದಿಮೆ ಅಭಿವೃದ್ಧಿಗಾಗಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ನೀಡದೆ ಅನ್ಯಾಯ ಮಾಡಲಾಗುತ್ತಿದೆ ಎಂದು ದೂರಿದರು.

ಗ್ರಾಮೀಣ ಭಾಗದ ರೈತರೇ ಗುಣಮಟ್ಟದ ಕಾಫಿ ಬೆಳೆಯುತ್ತಿದ್ದಾರೆ. ಕೊಡಗಿನ ಆಸ್ತಿ ದಾಖಲಾತಿ ಸಮಸ್ಯೆಯಿದೆ. ದಾಖಲಾತಿ ಸಮಸ್ಯೆ ಎದುರಿಸುತ್ತಿರುವ ನಿಜವಾದ ಕಾಫಿ ಬೆಳೆಗಾರರಿಗೆ ಸರ್ಕಾರದ ಸೌಲಭ್ಯ ಸಿಗುತ್ತಿಲ್ಲ. ದಾಖಲಾತಿ ಇದ್ದವರಿಗೆ ಮಾತ್ರ ಸರ್ಕಾರದ ಸೌಲಭ್ಯವನ್ನು ಕಾಫಿ ಮಂಡಳಿ ನೀಡುತ್ತಿದೆ. ಸರ್ಕಾರದ ನಿರ್ಲಕ್ಷ್ಯದಿಂದ ಕೊಡಗಿನ ಕಿತ್ತಳೆ ಅವಸಾನವಾಯಿತು. ಇನ್ನು ಕೊಡಗಿನ ಕಾಫಿ ಅವಸಾಯ ಆದ ಮೇಲೆ ಸರ್ಕಾರ ಕಣ್ಣು ತೆರೆಯುತ್ತದೆ ಎಂದು ಬೆಳೆಗಾರರು ಸರ್ಕಾರದ ವಿರುದ್ಧವೂ ಅಕ್ರೋಶ ಹೊರಹಾಕಿದರು.

ಕಾಫಿಗೆ ಬೆಲೆ ಇಲ್ಲದಿದ್ದ ಸಂದರ್ಭ, ಕಾಫಿ ಕೊಳೆರೋಗದಿಂದ ಫಸಲು ಹಾನಿಯಾದಾಗ ಕಾಳುಮೆಣಸು ಫಸಲು ರೈತರನ್ನು ಕಾಪಾಡುತ್ತಿತ್ತು. ಈಗ ಕಾಳುಮೆಣಸಿಗೂ ರೋಗ ಬಂದು ಸಾಯುತ್ತಿದೆ. ಆದರೆ ಸರ್ಕಾರ ಸೂಕ್ತ ಪರಿಹಾರ ಕೊಡುತ್ತಿಲ್ಲ, ಹೀಗೆ ಮುಂದುವರಿದರೆ ಬೆಳೆಗಾರರನ್ನು ಯಾರಿಂದಲೂ ಕಾಪಾಡಲು ಸಾಧ್ಯವಾಗುವುದಿಲ್ಲ ಎಂದರು.

ಮುಂಗಾರು ವಿಳಂಬ, ಬರದಿಂದ ಕಾಫಿ ತೋಟದಲ್ಲಿ ಶೇ.40ರಷ್ಟು ಮಾತ್ರ ಕಾಫಿ ಉಳಿದಿದೆ. ಬಹುತೇಕ ಕಡೆ ಕಾಳುಮೆಣಸು ಫಸಲು ಇಲ್ಲದಂತಾಗಿದೆ. ಕಾರ್ಮಿಕರ ಕೊರತೆ ಇದೆ. ದುಪ್ಪಟ್ಟು ಕೂಲಿ, ಕೆಲಸವೇ ಗೊತ್ತಿಲ್ಲದವರು ಕಾಫಿ ತೋಟದ ಕಾರ್ಮಿಕರಾಗಿದ್ದಾರೆ. ಉತ್ತರ ಭಾರತದ ಕಾರ್ಮಿಕರಿಗೆ ಕೆಲಸ ಗೊತ್ತಿಲ್ಲ. ಅವರು ಮಾಡಿದ ಕೆಲಸಕ್ಕೆ ತೃಪ್ತಿಪಡುವಂತಾಗಿದೆ. ನಿಗದಿತ ಸಮಯದಲ್ಲಿ ಕಾರ್ಮಿಕರು ಸಿಗದ ಹಿನ್ನೆಲೆಯಲ್ಲಿ ನೆಲಕ್ಕೆ ಬಿದ್ದ ಕಾಫಿ ಮಣ್ಣು ಪಾಲಾಗುತ್ತಿದೆ. ಹೆಕ್ಕಲು ಕಾರ್ಮಿಕರು ಸಿಗುತ್ತಿಲ್ಲ. ಇದರಿಂದ ಬೇರ‌್ರಿ ಬೋರರ್ ಕೀಟಬಾಧೆ ಕಾಟ ಸುರುವಾಗಿದೆ. ಒಟ್ಟಿನಲ್ಲಿ ಕಾಫಿ ಬೆಳೆಗಾರ ಹೈರಾಣಾಗಿದ್ದಾನೆ ಬೆಳೆಗಾರರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net