ಕರಾವಳಿಯಲ್ಲಿ ಸಾಧ್ಯ ಕಾಫಿ ಬೆಳೆ : ಡಾ.ಚಂದ್ರಶೇಖರ್ ಮಾಹಿತಿ : ಬೋರ್ಡ್‌ನಿಂದ ಅಧ್ಯಯನ ಮಾಹಿತಿ ಕಾರ್ಯಾಗಾರ

Upp_Coffee
Published on

ಉಪ್ಪಿನಂಗಡಿ: ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಬೆಳೆಸಲಾಗುವ ಕಾಫಿ ಬೆಳೆಯ ಒಂದು ತಳಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲ್ಲೂಕಿನಲ್ಲಿಯೂ ಬೆಳೆಯಬಹುದೆಂಬುವುದನ್ನು ಸಂಶೋಧನೆ ಮುಂಚಿತವಾಗಿಯೇ ರೈತರು ಬೆಳೆದು ತೋರಿಸಿದ್ದಾರೆ. ಸೂಕ್ತ ಮಾರ್ಗದರ್ಶನ ಮತ್ತು ಪ್ರೋತ್ಸಾಹದೊಂದಿಗೆ ಹೆಚ್ಚಿನ ಇಳುವರಿ ಪಡೆಯಲು ಮುಂದಾಗಬೇಕೆಂದು ಕೇಂದ್ರ ಸರ್ಕಾರದ ಕಾಫಿ ಬೋರ್ಡ್ ಸಂಶೋಧನಾ ವಿಭಾಗದ ನಿರ್ದೇಶಕ ಡಾ.ಚಂದ್ರಶೇಖರ್ ತಿಳಿಸಿದರು.

ಉಪ್ಪಿನಂಗಡಿಯಲ್ಲಿ ಚಂದ್ರಶೇಖರ್ ತಾಳ್ತಜೆ ಅವರ ಅಡಕೆ ತೋಟದಲ್ಲಿ ಉಪ ಬೆಳೆಯಾಗಿ ಮಾಡಿರುವ ಕಾಫಿ ಬೆಳೆಯನ್ನು ಬುಧವಾರ ಪರಿಶೀಲನೆ ನಡೆಸಿದ ಬಳಿಕ ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.

ಚಟ್ಟಹಳ್ಳಿ ಕಾಫಿ ಬೋರ್ಡ್ ಸಂಶೋಧನಾ ವಿಭಾಗದ ಉಪ ನಿರ್ದೇಶಕಿ, ಚಟ್ಟಹಳ್ಳಿ ಕಾಫಿ ಮಂಡಳಿಯ ಚೇರ್ಮನ್ ಡಾ.ಝೀನಾ ದೇವಸ್ಯ ಮಾತನಾಡಿ, ಇಲ್ಲಿನ ಮಣ್ಣು ರೋಬಸ್ಟೊ ಕಾಫಿ ತಳಿಯನ್ನು ಉಪ ಬೆಳೆಯಾಗಿ ಬೆಳೆಯಲು ಸೂಕ್ತವಾಗಿದೆ ಎಂದರು.

ಕಾಫಿ ಮಂಡಳಿ ಚಟ್ಟಹಳ್ಳಿಯ ಮಣ್ಣು ವಿಜ್ಞಾನಿ ಎಸ್.ಎ.ನದಾಫ್, ಬೇಸಾಯ ತಜ್ಞ ಡಾ.ನಾಗರಾಜ್ ಗೋಕವಿ, ಪುತ್ತೂರು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ರೇಖಾ, ಕಾರ್ಯಕ್ರಮದ ಸಂಯೋಜಕ ಅಜಿತ್ ಪ್ರಸಾದ್ ರೈ ಮೊದಲಾದವರು ಸುಮಾರು 2 ತಾಸು ತೋಟದಲ್ಲಿ ಪ್ರತಿಯೊಂದು ಗಿಡಗಳನ್ನು ಪರಿಶೀಲನೆ ನಡೆಸಿ, ಪ್ರಾತ್ಯಕ್ಷಿಕೆ ರೀತಿಯಲ್ಲಿ ತಾಲೂಕಿನಾದ್ಯಂತದಿಂದ ಆಗಮಿಸಿದ ಕಾಫಿ ಬೆಳೆಗಾರರಿಗೆ ಗಿಡಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.

ಕಾಫಿ ಬೆಳೆಗಾರರಾದ ಅಜಿತ್ ಪ್ರಸಾದ್ ದಾರಂದಕುಕ್ಕು, ಪುಷ್ಪರಾಜ್ ಅಡೇಕಲ್, ಉಪ್ಪಿನಂಗಡಿ ಸಹಕಾರಿ ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ್, ಸಿಪಿಸಿಆರ್‌ಐ ನಿವೃತ್ತ ವಿಜ್ಞಾನಿ ಡಾ.ಯದುಕುಮಾರ್, ಅನಂತಕೃಷ್ಣ ಪೆರುವಾಯಿ, ಪುತ್ತೂರು ಆಕರ್ಷನ್ ಸಮೂಹ ಸಂಸ್ಥೆಯ ನಾಸಿರ್, ರೈತ ಉತ್ಪಾದಕರ ಸಂಘದ ಅಧ್ಯಕ್ಷ ಜಯರಾಮ ಸುಳ್ಯ, ಡಾ.ತಾಳ್ತಜೆ ವಸಂತ ಕುಮಾರ್, ಜಯರಾಮ ಸುಳ್ಯ, ರವಿ ಮುಳ್ಳಂಗುಚ್ಚಿ, ಪ್ರವೀಣ್ ಆಳ್ವ ಮೊದಲಾದವರು ಭಾಗವಹಿಸಿದ್ದರು. ಗೀತಾಲಕ್ಷ್ಮೀ ತಾಳ್ತಜೆ, ಅತುಲ್ ಕಶ್ಯಪ, ಅಕ್ಷರ ಕಶ್ಯಪ ನಿರ್ವಹಿಸಿದರು.

ರೋಬಸ್ಟೊ ತಳಿ ಉತ್ತಮ

ಕಾಫಿ ತಳಿಯಲ್ಲಿ ಅರೆಬಿಕಾ ಮತ್ತು ರೋಬಸ್ಟೊ ಎಂಬ 2 ತಳಿಗಳಿದ್ದು, ಈ ಪೈಕಿ ಸಾಮಾನ್ಯವಾಗಿ ಅರೆಬಿಕಾ ಸಮುದ್ರಮಟ್ಟದಿಂದ 1000 ಮೀಟರ್ ಎತ್ತರದ ಪ್ರದೇಶದಲ್ಲಿ ಉತ್ತಮ ಇಳುವರಿ ನೀಡಿದರೆ, ಅದಕ್ಕಿಂತ ಕಡಿಮೆ ಎತ್ತರದ ಪ್ರದೇಶಗಳಲ್ಲಿ ರೊಬಸ್ಟೊ ತಳಿಯನ್ನು ಬೆಳೆಸಬಹುದಾಗಿದೆ. ಈ ಕಾರಣಕ್ಕೆ ದಕ್ಷಿಣ ಕನ್ನಡದ ಈ ಭಾಗದಲ್ಲಿ ರೋಬಸ್ಟೊ ತಳಿ ಬೆಳೆಸಬಹುದೆಂದು ಡಾ.ಚಂದ್ರಶೇಖರ್ ತಿಳಿಸಿದರು.

ಅಡಕೆಗೆ ಪರ್ಯಾಯವೆನ್ನುವ ನಿರೀಕ್ಷೆ

ಅಡಕೆ ಬೆಲೆ ಕುಸಿತ ಹಾಗೂ ರೋಗ ಬಾಧೆಯ ಭೀತಿ ಕಾಡುತ್ತಿರುವ ಈ ದಿನಗಳಲ್ಲಿ ಉಪ ಬೆಳೆಯಾಗಿ ಕಾಫಿ ಬೆಳೆ ಮಾಡಿದ್ದು, ಇಲ್ಲಿನ ಮಣ್ಣು ಮತ್ತು ಇದರ ನಿರ್ವಹಣೆಯ ಬಗ್ಗೆ ನಮ್ಮೊಳಗೆ ಗೊಂದಲ ಇತ್ತು. ಆದರೆ ಇದೀಗ ಇಲ್ಲಿಗೆ ಆಗಮಿಸಿ ಅಧ್ಯಯನ, ಪರಿಶೀಲನೆ ನಡೆಸಿದ ಅಧಿಕಾರಿಗಳು ಇಲಾಖೆಗೆ ವರದಿ ನೀಡಿ ಮುಂದೆ ಅಧಿಕೃತ ಮಾನ್ಯತೆ ನೀಡುವ ಬಗ್ಗೆ, ಸೂಕ್ತ ಮಾರ್ಗದರ್ಶನ, ಪ್ರೋತ್ಸಾಹ ಮತ್ತು ಮಾರುಕಟ್ಟೆ ಒದಗಿಸುವ ಬಗ್ಗೆ ಭರವಸೆ ನೀಡಿರುವುದು ಕೃಷಿಕರ ಪಾಲಿಗೆ ಆಶಾದಾಯಕ ನಡೆಯಾಗಿದೆ ಎಂದು ಕಾಫಿ ಬೆಳೆಗಾರ ಚಂದ್ರಶೇಖರ್ ತಾಳ್ತಜೆ ಪ್ರತಿಕ್ರಿಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net