

ಬೇಲೂರು: ನಿರಂತರ ಗಾಳಿ ಮಳೆಯಿಂದಾಗಿ ಸೋಮವಾರ ರಾತ್ರಿ ಬೃಹತ್ ಗಾತ್ರದ ತೆಂಗಿನ ಮರವೊಂದು ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸಮೀಪದ ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದರಿಂದ ಡಾ.ಅಂಬೇಡ್ಕರ್ ವೃತ್ತದಲ್ಲಿ ವಿದ್ಯುತ್ ವ್ಯತ್ಯಯವಾಗಿ ಸಾರ್ವಜನಿಕರು ಪರದಾಡುವಂತಾಯಿತು.
ಸೋಮವಾರ ರಾತ್ರಿಯಿಂದ ಮಂಗಳವಾರ ಮಧ್ಯಾಹ್ನದವರೆಗೂ ವಿದ್ಯುತ್ ಪೂರೈಕೆ ವ್ಯತ್ಯಯಗೊಂಡಿತ್ತು. ಬೇಲೂರು ಪಟ್ಟಣದ ಡಾ.ಅಂಬೇಡ್ಕರ್ ವೃತ್ತದ ಸಮೀಪವಿರುವ ಮಾಜಿ ಶಾಸಕ ದಿವಂಗತ ವೈ.ಎನ್.ರುದ್ರೇಶ್‌ಗೌಡರ ನಿವಾಸದ ಮುಂದಿದ್ದ ಬೃಹತ್ ಗಾತ್ರದ ತೆಂಗಿನ ಮರವೊಂದು ಗಾಳಿಗೆ ಬುಡ ಸಮೇತ ಕಿತ್ತು ಬಂದಿದ್ದರಿಂದ ಮರವು ಅಂಗಡಿ ಮಳಿಗೆ ಸೇರಿದಂತೆ ಮುಂಭಾಗದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಅಂಗಡಿ ಬಾಗಿಲು ಹಾಕಿದ್ದರಿಂದ ಯಾವುದೇ ಅವಘಡ ಸಂಭವಿಸಿಲ್ಲ. ಸೆಸ್ಕ್ ಸಿಬ್ಬಂದಿ ಮರ ತೆರವುಗೊಳಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿದರು.