

* ಕಲ್ಪವೃಕ್ಷ ಉಳಿಸಿಕೊಳ್ಳಲು ರೈತರ ಹರಸಾಹಸ
* ನೀರಿನ ಕೊರತೆಯಿಂದ ಸಾಯುತ್ತಿವೆ ಮರಗಳು
ಗಂಗಾಧರ್ ಬೈರಾಪಟ್ಟಣ ರಾಮನಗರ
ಬಿಸಿಲ ಬೇಗೆ ಜೀವ ಸಂಕುಲಕ್ಕೆ ಕಂಟಕವಾಗಿ ಕಾಡುತ್ತಿದ್ದು, ರಾಜ್ಯದಲ್ಲಿ ಮಾವು ಬೆಳೆ ಜತೆ ಜತೆಗೆ ತೆಂಗಿನ ಬೆಳೆಯನ್ನು ಆಪೋಷನ ತೆಗೆದುಕೊಳ್ಳುತ್ತಿದೆ. ತೆಂಗು ಬೆಳೆಯನ್ನೇ ನಂಬಿ ಜೀವನ ನಡೆಸುತ್ತಿರುವ ರಾಜ್ಯದ ಅದೆಷ್ಟೋ ಕುಟುಂಬಗಳು ಈಗ ಬರ ಮತ್ತು ಬಿಸಿಲ ಬೇಗೆಯಲ್ಲಿ ತೆಂಗಿನ ಮರಗಳನ್ನು ಉಳಿಸಿಕೊಳ್ಳಲು ಹರ ಸಾಹಸ ಪಡುತ್ತಿವೆ.
ರಾಜ್ಯದಲ್ಲಿ ಈ ಬಾರಿ ಬರಗಾಲ ವ್ಯಾಪಕವಾಗಿದೆ. ಇದರ ಜತೆಗೆ ಬಿಸಿಲ ಹೊಡೆತವು ಹೆಚ್ಚಾಗಿದ್ದು, ಮನುಷ್ಯರು ಪಶು ಪಕ್ಷಿಗಳ ಜತೆಗೆ ಮರ ಗಿಡಗಳೂ ಬಿಸಿಲ ಬೇಗೆಗೆ ಬಸವಳಿದು ಜೀವ ಕಳೆದುಕೊಳ್ಳುತ್ತಿವೆ. ಇದರ ಸಾಲಿಗೆ ತೆಂಗು ಬೆಳೆಯೂ ಸೇರುತ್ತಿವೆ.
ರಾಜ್ಯದಲ್ಲಿ ಬಿಸಿಲ ತಾಪ 40 ಡಿಗ್ರಿ ತಲುಪಿದೆ. ಇದರಿಂದಾಗಿ ತೆಂಗು ಜೀವ ಕಳೆದುಕೊಳ್ಳುವ ಹಂತಕ್ಕೆ ಬಂದಿದೆ. ಪ್ರತಿ ತೆಂಗಿಗೆ ಪ್ರತಿ ದಿನ ಸರಾಸರಿ 40 ಲೀಟರ್ ನೀರಿನ ಅಗತ್ಯವಿದೆ. ಆದರೆ, ಕಳೆದ ಬಾರಿ ಮಳೆಗಾಲ ಕೈಕೊಟ್ಟ ಕಾರಣ ಆಗಲೇ ತೆಂಗಿನ ಮರಗಳಿಗೆ ನೀರಿನ ಕೊರತೆ ಎದುರಾಗಿತ್ತು. ಇದರ ಜತೆಗೆ ಬೇಸಿಗೆ ಬಿರುಸಾಗಿ ವಾತಾವರಣದಲ್ಲಿ ತಾಪಮಾನ ಏರಿಕೆ ಆಗಿರುವುದು ತೆಂಗು ಜೀವ ಕಳೆದುಕೊಳ್ಳುವಂತೆ ಆಗಿದೆ. ಮಳೆ ಆಶ್ರಿತ ಪ್ರದೇಶದಲ್ಲಿ ತೆಂಗಿನಲ್ಲಿ ಸುಳಿ ಮಾತ್ರ ಉಳಿದಿದ್ದರೆ, ನೀರಾವರಿ ಪ್ರದೇಶದಲ್ಲಿ ಬೆಳೆಯಾಗಿರುವ ತೆಂಗಿನಲ್ಲಿ ಅರಳುಗಳು ಮತ್ತು ಮೊದಡು (ಬಲಿತ ಕಾಯಿಯೂ ಅಲ್ಲ, ಎಳೆನೀರು ಅಲ್ಲದ ಸ್ಥಿತಿ) ಬಿಸಿಲ ತಾಪಕ್ಕೆ ಉದುರುತ್ತಿವೆ.
ರಾಜ್ಯದಲ್ಲಿ ಸರಿ ಸುಮಾರು 4.40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗನ್ನು ತೋಟಗಾರಿಕೆ ಬೆಳೆಯಾಗಿ ಬೆಳೆಯಲಾಗುತ್ತಿದೆ. ವಾರ್ಷಿಕ ಸರಾಸರಿ 5177 ಮಿಲಿಯನ್ ತೆಂಗಿನ ಕಾಯಿ ಇಳುವರಿ ಇದೆ. ಇದರಲ್ಲಿ ಸುಮಾರು 2 ಲಕ್ಷ ಹೆಕ್ಟೇರ್ ಪ್ರದೇಶ ತುಮಕೂರು ಜಿಲ್ಲೆ ಒಂದರಲ್ಲೇ ಇದ್ದು, ನಂತರದ ಸ್ಥಾನವನ್ನು ಹಾಸನ, ಚಿತ್ರದುರ್ಗ, ಮಂಡ್ಯ, ಉಡುಪಿ ಜಿಲ್ಲೆಗಳು ಹೊಂದಿವೆ. ರಾಮನಗರ ಜಿಲ್ಲೆಯಲ್ಲಿಯೂ ಸುಮಾರು 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತದೆ. ಆದರೆ ಬಹುತೇಕ ಎಲ್ಲ ಜಿಲ್ಲೆಗಳಲ್ಲಿಯೂ ಮಳೆ ಆಶ್ರಿತವಾಗಿಯೇ ಹೆಚ್ಚಿನ ತೆಂಗು ಬೆಳೆಯಲಾಗುತ್ತದೆ. ಅದರಲ್ಲೂ ತುಮಕೂರು, ಚಿತ್ರದುರ್ಗ ಮತ್ತು ರಾಮನಗರ ಜಿಲ್ಲೆಯಲ್ಲಿ ತೆಂಗು ಮಳೆ ಆಶ್ರಿತವಾಗಿದೆ.
ಈಗಾಗಲೇ ತೆಂಗಿಗೆ ನುಸಿ ಪೀಡೆ, ಕಪ್ಪು ತಲೆ ಹುಳುವಿನ ಬಾಧೆ ತಗುಲಿ ರೈತರು ಸರ್ವ ಪ್ರಯತ್ನ ಮಾಡಿ ಮರಗಳನ್ನು ಉಳಿಸಿಕೊಂಡಿದ್ದಾರೆ. ಈಗ ಮಳೆ ಕೊರತೆ ಜತೆಗೆ ತಾಪಮಾನ ಹೆಚ್ಚಳ ರೈತರ ಬದುಕನ್ನು ಬೀದಿಗೆ ತಂದು ನಿಲ್ಲಿಸುತ್ತಿದೆ. ಉತ್ತಮ ಇಳುವರಿ ನೀಡುವ ಮರ ಸರಾಸರಿ ವಾರ್ಷಿಕವಾಗಿ 2 ಸಾವಿರ ರೂ. ವರಮಾನವನ್ನು ರೈತರಿಗೆ ನೀಡುತ್ತಿತ್ತು. ಆದರೆ, ಈಗ ಮರಗಳು ಸಾಯುತ್ತಿರುವುದು ರೈತರು ಕಣ್ಣೀರು ಹಾಕುವಂತೆ ಆಗಿದೆ. ಮತ್ತೆ ತೆಂಗಿನ ಮರಗಳನ್ನು ಬೆಳೆಸಲು ವರ್ಷಗಟ್ಟಲೆ ಕಾಯಲೇ ಬೇಕಿದೆ.
ರಾಜ್ಯದಲ್ಲಿ ಈಗಾಗಲೇ ಮಾವು ನೆಲ ಕಚ್ಚಿ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಮರಗಳು ಜೀವ ಕಳೆದುಕೊಂಡಿವೆ. ಈಗ ತೆಂಗಿನ ಪರಿಸ್ಥಿತಿಯೂ ಸಹ ಇದೇ ಆಗಿದ್ದು, ಸರ್ಕಾರ ಈ ಕೂಡಲೇ ರೈತರ ನೆರವಿಗೆ ಧಾವಿಸಬೇಕಿದೆ. ತೋಟಗಾರಿಕೆ ಬೆಳೆಗಳು ಸಾಯುತ್ತಿರುವ ಕಾರಣ ಪ್ರತಿ ರೈತನಿಗೆ ಲಕ್ಷಾಂತರ ರೂ. ನಷ್ಟ ಉಂಟಾಗಿದ್ದು, ಇದನ್ನು ಭರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮವನ್ನು ಸರ್ಕಾರ ತೆಗೆದುಕೊಳ್ಳಬೇಕಿದೆ. ಈಗಾಗಲೇ ರಾಮನಗರ ಜಿಲ್ಲೆಯಲ್ಲಿ ಮಾವು ಬೆಳೆ ನಷ್ಟದ ಅಧ್ಯಯನಕ್ಕೆ ಸಮಿತಿ ನೇಮಕ ಮಾಡಿದೆ. ಅದೇ ರೀತಿ ರಾಜ್ಯಾದ್ಯಂತ ತೆಂಗು ಮತ್ತು ಮಾವು ಬೆಳೆ ನಷ್ಟದ ಸಮೀಕ್ಷೆಗೆ ಸಮಿತಿ ರಚಿಸಿ, ವರದಿ ಪಡೆದು ರೈತರ ಕೈ ಹಿಡಿಯಬೇಕಿದೆ.
===
ರಾಮನಗರ ಜಿಲ್ಲೆಯಲ್ಲಿ ಈ ಬಾರಿ ಮಾವಿನ ಜೊತೆಗೆ ತೆಂಗು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು ಈಗಾಗಲೇ ಸಮಿತಿ ರಚನೆ ಮಾಡಿ ವರದಿಯನ್ನು ಪಡೆಯಲಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೂ ತರಲಾಗಿದೆ. ಎಂ.ಎಸ್ ರಾಜು, ಉಪನಿರ್ದೇಶಕ ತೋಟಗಾರಿಕೆ ಇಲಾಖೆ ರಾಮನಗರ&&&&ರಾಮನಗರ ಜಿಲ್ಲೆ ಮಾತ್ರವಲ್ಲ ರಾಜ್ಯಾದ್ಯಂತ ಬಿಸಿಲ ತಾಪಕ್ಕೆ ಮಾವು ಮತ್ತು ತೆಂಗಿನ ಮರಗಳು ಜೀವ ಕಳೆದುಕೊಂಡಿವೆ. ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಿ ಅವರಿಗೆ ಹೆಚ್ಚಿನ ಪರಿಹಾರ ನೀಡಬೇಕು. ಸಿ.ಪುಟ್ಟಸ್ವಾಮಿ, ಹಿರಿಯ ರೈತ ಮುಖಂಡ, ರಾಮನಗರ