ತಗ್ಗಿತು ಎಳನೀರ ಇಳುವರಿ, ಬೆಲೆ ಏರಿಕೆ 'ವರಿ'! ಅಧಿಕ ಬೇಡಿಕೆ, ಕಡಿಮೆ ಪೂರೈಕೆ

Tender Coconut
Published on

ಬೆಂಗಳೂರು: ಕಳೆದ 2-3 ವಾರಗಳಿಂದ ಬೇಡಿಕೆ ಪ್ರಮಾಣದಷ್ಟು ಎಳನೀರು ಪೂರೈಕೆಯಾಗದಿರುವುದರಿಂದ ವ್ಯಾಪಾರಿಗಳು ಚಿಂತೆಗೀಡಾಗಿದ್ದಾರೆ. ಕೆಲವೆಡೆ ಎಳೆನೀರು ಲಭಿಸುತ್ತಿದ್ದರೂ, ದುಬಾರಿ ಬೆಲೆ ಕಾರಣಕ್ಕೆ ಗ್ರಾಹಕರು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.

ಮಳೆಗಾಲ ಆರಂಭವಾಗಿದ್ದರೂ ನಗರದಲ್ಲಿ ಎಳನೀರಿಗೆ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. ಆದರೆ ತುಮಕೂರು, ಹಾಸನ, ಮೈಸೂರು, ಮಂಡ್ಯ, ಚಾಮರಾಜನಗರ ಮುಂತಾದ ಜಿಲ್ಲೆಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ತೆಂಗಿನ ತೋಟಗಳು ಜಲಾವೃತವಾಗಿವೆ. ಹೀಗಾಗಿ ಎಳೆನೀರು ಕೊಯ್ಯಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ನುಸಿರೋಗದಿಂದ ಇಳುವರಿ ಕಡಿಮೆಯಾಗಿದೆ. ಮದ್ದೂರು ಎಪಿಎಂಸಿಯಿಂದ ಮಹಾರಾಷ್ಟ್ರ, ಹೈದರಾಬಾದ್​ಗೆ ಹೆಚ್ಚಿನ ಬೆಲೆಗೆ ಎಳನೀರು ರ್ತಾಗುತ್ತಿದೆ. ಹೀಗಾಗಿ ನಗರಕ್ಕೆ ಸರಿಯಾಗಿ ಪೂರೈಕೆಯಾಗುತ್ತಿಲ್ಲ ಎಂದು ಗಿರಿನಗರದ ಎಳನೀರು ವ್ಯಾಪಾರಿ ರಾಜು ತಿಳಿಸಿದ್ದಾರೆ.

ಬೇಸಿಗೆ ಅವಧಿಯಲ್ಲಿ ಎಳನೀರಿಗೆ ತೀವ್ರ ಬೇಡಿಕೆಯಿತ್ತು. ಮಾರ್ಚ್​ವರೆಗೆ 40, 45 ರೂ. ಇದ್ದ ದರ, ಏಪ್ರಿಲ್​ ಆರಂಭದಿಂದ 50, 55 ರೂ.ಗೆ ಮಾರಾಟವಾಗುತ್ತಿತ್ತು. ಇದೇ ದರದಲ್ಲಿ ಪ್ರಸ್ತುತ ಮಾರಾಟವಾಗುತ್ತಿದೆ. ಆದರೆ ಗುಣಮಟ್ಟದ ಎಳನೀರು ಮಾತ್ರ ದೊರೆಯುತ್ತಿಲ್ಲ. ಸಣ್ಣ ಗಾತ್ರದ ಎಳನೀರಿಗೆ 55&60 ರೂ. ಕೊಟ್ಟು ಖರೀದಿಸಲು ಗ್ರಾಹಕರು ಸಹಜವಾಗಿಯೇ ನಿರಾಸಕ್ತಿ ತೋರಿಸುತ್ತಿದ್ದಾರೆ.

ಬೇಡಿಕೆ ಕುಂದಿಲ್ಲ:

ಬೇಸಿಗೆ ಅವಧಿಗೆ ಹೋಲಿಸಿದರೆ ಪ್ರತಿವರ್ಷ ಮಳೆಗಾಲದಲ್ಲಿ ಎಳನೀರಿನ ದರ ಕನಿಷ್ಠ 5-10 ರೂ. ಕಡಿಮೆಯಾಗುತ್ತದೆ. ವಿವಿಧ ಕಾರಣಕ್ಕೆ ಗ್ರಾಹಕರ ಸಂಖ್ಯೆಯೂ ಕಡಿಮೆ ಇರುತ್ತದೆ. ಆದರೆ ಈ ಬಾರಿ ಮಳೆಗಾಲದಲ್ಲಿಯೂ ಎಳನೀರಿಗೆ ಬೇಡಿಕೆ ಕುಂದಿಲ್ಲ. ಉತ್ತಮ ಆರೋಗ್ಯಕ್ಕಾಗಿ ನಿತ್ಯ ಎಳನೀರು ಕುಡಿಯುವವರ ಸಂಖ್ಯೆ ದೊಡ್ಡದಿದೆ. ಇಳುವರಿ ಸಮಸ್ಯೆ ಹಾಗೂ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿರುವುದರಿಂದ ಬೆಲೆ ಏರಿಕೆಯಾಗಿದೆ.

ಬರಗಾಲ ಪರಿಣಾಮ

ಕಳೆದ ಏಪ್ರಿಲ್​, ಮೇ ಅವಧಿಯಲ್ಲಿ ಎದುರಾದ ಬರಗಾಲ ಪರಿಸ್ಥಿತಿಯಲ್ಲಿ ನೀರಿಲ್ಲದೆ ತೆಂಗಿನ ತೋಟಗಳು ಒಣಗಿ ಹೋಗುತ್ತಿದ್ದವು. ಬಿಸಿಲಿನ ತೀವ್ರತೆ ಇಳುವರಿ ಮೇಲೆ ನೇರ ಪರಿಣಾಮ ಬೀರಿದ್ದು, ಎಳನೀರು ಕಟಾವು ಕಷ್ಟ ಎಂಬ ಪರಿಸ್ಥಿತಿ ಇದೆ. ಸದ್ಯ ತೆಂಗಿನ ಮಂಡಿಗೆ ಪಾಂಡವಪುರ, ಮಳವಳ್ಳಿ ಭಾಗದಿಂದ ಹೆಚ್ಚು ಎಳನೀರು ಪೂರೈಕೆಯಾಗುತ್ತಿದೆ.

ಕಳೆದ ಎರಡು ವಾರದಿಂದ ಎಳನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ. 55, 60 ರೂ.ಗೆ ಮಾರುವುದು ಅನಿವಾರ್ಯವಾಗಿದೆ. ಉತ್ತಮ ಎನಿಸುವ ಎಳನೀರು ಹೊರರಾಜ್ಯಕ್ಕೆ ರ್ತಾಗುತ್ತಿವೆ. ಸದ್ಯ ಇರುವಷ್ಟನ್ನು ಖಾಲಿ ಮಾಡಿ, ಒಂದೆರಡು ವಾರ ವ್ಯಾಪಾರ ನಿಲ್ಲಿಸುವ ಯೋಚನೆಯಲ್ಲಿದ್ದೇನೆ.

> ಲಕ್ಷ್ಮಣ, ವ್ಯಾಪಾರಿ, ಕತ್ತರಿಗುಪ್ಪೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net