

ಸುಳ್ಯ: ಮಂಡೆಕೋಲು ಗ್ರಾಮದ ಶಾಲಾ ಬಳಿಯ ಭವಾನಿಶಂಕರ ಆಚಾರ್ಯ ಎಂಬುವರ ಮನೆಗೆ ಪಕ್ಕದಲ್ಲಿದ್ದ ದೊಡ್ಡದಾದ ತೆಂಗಿನ ಮರ ಬುಡ ಸಹಿತ ಬಿದ್ದು ಮನೆಗೆ ತೀವ್ರ ಹಾನಿಯಾಗಿದೆ. ಸ್ಥಳಕ್ಕೆ ಧಾವಿಸಿ ಬಂದ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಮರವನ್ನು ತೆರವುಗೊಳಿಸಿ ಮನೆಯನ್ನು ದುರಸ್ತಿಗೊಳಿಸಲು ಸಹಕಾರ ನೀಡಿದರು.
ಭಾರಿ ಗಾಳಿ ಮಳೆಗೆ ಪಕ್ಕದಲ್ಲೇ ಇದ್ದ ಬೃಹತ್ ಗಾತ್ರದ ತೆಂಗಿನಮರ ಬುಡ ಸಹಿತ ಬಿದ್ದಿದೆ. ಮನೆಗೆ ತೀವ್ರ ಹಾನಿಯಾಗಿದ್ದು ಈ ಸಂದರ್ಭದಲ್ಲಿ ಮನೆಯೊಳಗೆ ಭವಾನಿಶಂಕರರ ತಾಯಿ ಹಾಗೂ ಪತ್ನಿ ಇದ್ದರೂ ಯಾವುದೇ ತೊಂದರೆಗಳಾಗಿಲ್ಲವೆಂದು ತಿಳಿದುಬಂದಿದೆ.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ್ ಕಣೆಮರಡ್ಕ, ಪಂಚಾಯಿತಿ ಸದಸ್ಯರಾದ ಅನಿಲ್ ತೋಟಪ್ಪಾಡಿ, ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಹಾಗೂ ಸ್ಥಳೀಯರು ಧಾವಿಸಿ ಮರ ತೆರವು ಮಾಡಿ ಮನೆ ದುರಸ್ತೆಗೆ ಸಹಕಾರ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಶಲ ಉದ್ದಂತಡ್ಕ, ಕರ್ನಾಟಕ ಅರೆಭಾಷೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಸ್ಥಳೀಯ ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕರು, ಜ್ಞಾನವಿಕಾಸ ಸಮನ್ವಯಾಧಿಕಾರಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.