

ಕೆ.ಆರ್.ಪೇಟೆ: ಸಹಕಾರ ಸಂಘಗಳು ರಾಜಕೀಯದಿಂದ ಮುಕ್ತವಾಗಿ ರೈತರ ಸಮಗ್ರವಾದ ಅಭಿವೃದ್ಧಿಯನ್ನು ಮುಖ್ಯ ಗುರಿಯನ್ನಾಗಿಸಿಕೊಂಡು ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 75ನೇ ವರ್ಷದ ವಜ್ರಮಹೋತ್ಸವ ಹಾಗೂ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಮಾತನಾಡಿದ ಅವರು, ದೇಶಾದ್ಯಂತ ಸಹಕಾರ ಚಳವಳಿ ವಿಸ್ತರಿಸಿದ್ದು, ರೈತರ ಬಂಧುವಿನಂತೆ ಹಾಗೂ ಮಿತ್ರನಂತೆ ಕಾರ್ಯನಿರ್ವಹಿಸುತ್ತಿರುವ ಸಹಕಾರ ಸಂಘಗಳು ಕೃಷಿ ಚಟುವಟಿಕೆಗಳಿಗೆ ಅಗತ್ಯವಾಗಿ ಬೇಕಾದ ಬಿತ್ತನೆ ಬೀಜಗಳು, ರಾಸಾಯನಿಕ ಗೊಬ್ಬರ ಹಾಗೂ ಔಷಧವನ್ನು ರಿಯಾಯಿತಿ ದರದಲ್ಲಿ ಸಕಾಲಕ್ಕೆ ನೀಡುತ್ತಿವೆ ಎಂದರು.
ಸಾಲ ಸೌಲಭ್ಯವನ್ನು ಕಡಿಮೆ ಬಡ್ಡಿ ದರದಲ್ಲಿ ನೀಡಿ ರಾಷ್ಟ್ರೀಕೃತ ಬ್ಯಾಂಕುಗಳು ಮಾಡದ ಕೆಲಸವನ್ನು ಸಹಕಾರ ಸಂಘಗಳು ಮಾಡುತ್ತಿವೆ. ಈ ಮೂಲಕ ರೈತರ ಬೆನ್ನೆಲುಬಾಗಿ ಸದೃಢವಾಗಿ ನಿಂತಿವೆ. ಕೃಷಿ ಚಟುವಟಿಕೆಗಳಿಗೆ ಪರ್ಯಾಯವಾಗಿ ಹೈನುಗಾರಿಕೆಯು ಬೃಹತ್ ಉದ್ಯಮವಾಗಿ ಬೆಳೆದು ನಿಂತಿದೆ. ದೇಶದಲ್ಲಿನ ಕ್ಷೀರಕ್ರಾಂತಿಗೆ ಕರ್ನಾಟಕದ ಕೊಡುಗೆ ದೊಡ್ಡದಿದ್ದು, ಹಾಲು ಉತ್ಪಾದನೆಯಲ್ಲಿ ಗುಜರಾತ್ ಹೊರತುಪಡಿಸಿದರೆ ಕರ್ನಾಟಕವು ದೇಶದ 2ನೇ ರಾಜ್ಯವಾಗಿ ನಿಂತಿದೆ. ರಾಜ್ಯ ಸರ್ಕಾರವು ರೈತನು ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸರಬರಾಜು ಮಾಡುವ ಪ್ರತಿ ಲೀಟರ್ ಹಾಲಿಗೆ 5 ರೂ. ಸಹಾಯಧನದ ಜತೆಗೆ ಬಡ್ಡಿ ರಹಿತವಾದ ಸಾಲಸೌಲಭ್ಯವನ್ನು ನೀಡಿ ರೈತರಿಗೆ ಆಸರೆಯಾಗುತ್ತಿದೆ ಎಂದರು.
ಶಾಸಕ ಎಚ್.ಟಿ.ಮಂಜು ಅಧ್ಯಕ್ಷತೆ ವಹಿಸಿದ್ದರು, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಕಾಡೇನಹಳ್ಳಿ ರಾಮಚಂದ್ರು, ಅಕ್ಕಿಹೆಬ್ಬಾಳು ಕೃಷಿ ಪತ್ತಿನ ಸಹಕರ ಸಂಘದ ಅಧ್ಯಕ್ಷ ಎಸ್.ಆರ್.ನವೀನ್‌ಕುಮಾರ್, ಮೈಸೂರು ಮಹಾರಾಣಿ ಕಾಲೇಜಿನ ಅರ್ಥಶಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ.ಸುರೇಶ್, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಅಕ್ಕಿಹೆಬ್ಬಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಹರೀಶ್ ಇತರರಿದ್ದರು.