

ಸಿದ್ದಾಪುರ: ಯಾವುದೇ ಸಂಘ- ಸಂಸ್ಥೆಗಳು ಅಭಿವೃದ್ಧಿ ಹೊಂದಬೇಕಾದರೆ ಪಾರದರ್ಶಕತೆ ಹಾಗೂ ಪ್ರಾಮಾಣಿಕತೆ ಇರಬೇಕು. ರೈತರ ಜೀವನಾಡಿಯಾಗಿರುವ ಸಹಕಾರಿ ಸಂಘಗಳು ಶಿರಸಿ-ಸಿದ್ದಾಪುರ ತಾಲೂಕಿನಲ್ಲಿ ರೈತರ ಆಧಾರ ಸ್ತಂಭವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ತಾಲೂಕಿನ ಬೇಡ್ಕಣಿಯ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಕಟ್ಟಡ ಹಾಗೂ ವ್ಯಾಪಾರ ಮಳಿಗೆ ಉದ್ಘಾಟಿಸಿ ಅವರು ಶುಕ್ರವಾರ ಮಾತನಾಡಿದರು.
ಸಂಘದ ಅಧ್ಯಕ್ಷ ಪ್ರಶಾಂತ ನಾಯ್ಕ ಮಾತನಾಡಿ, 1965-66ರಲ್ಲಿ ಸ್ಥಾಪನೆಯಾದ ಸಂಘ ಸಾಕಷ್ಟು ಏರು-ಪೇರುಗಳ ನಡುವೆ ಬೆಳೆದು ಈಗ 46 ವರ್ಷ ಪೂರೈಸಿದೆ. ಸದಸ್ಯರ ಅನುಕೂಲಕ್ಕಾಗಿ ಸಿಮೆಂಟ್, ಕಬ್ಬಿಣ ವ್ಯಾಪಾರದ ಮಳಿಗೆ ಆರಂಭಿಸಲಾಗಿದೆ ಎಂದು ಹೇಳಿದರು.
ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಮಾತನಾಡಿ, ಸಹಕಾರ ಕ್ಷೇತ್ರ ಜನಸೇವೆ ಮಾಡಲು ಇರುವ ಶ್ರೇಷ್ಠವಾದ ಕ್ಷೇತ್ರವಾಗಿದೆ. ರೈತರು ಅವಲಂಭಿಸಿರುವ ಸಹಕಾರಿ ಸಂಘಗಳು ಪಾರದರ್ಶಕವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಏಳಿಗೆ ಹೊಂದುತ್ತದೆ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಬಾಬು ನಾಯ್ಕ ಕಡಕೇರಿ, ಗ್ರಾಪಂ ಅಧ್ಯಕ್ಷ ಉಲ್ಲಾಸ ಗೌಡರ್, ಕೋಟೆ ಆಂಜನೇಯ ದೇವಾಲಯದ ಅಧ್ಯಕ್ಷ ವಿ.ಎನ್. ನಾಯ್ಕ, ಶನೇಶ್ಚರ ದೇವಾಲಯದ ಅಧ್ಯಕ್ಷ ಜಿ.ಕೆ. ನಾಯ್ಕ, ಭುವನಗಿರಿ ದೇವಾಲಯದ ಅಧ್ಯಕ್ಷ ಶ್ರೀಕಾಂತ ಹೆಗಡೆ, ರೈತ ಸಂಘದ ಜಿಲ್ಲಾಧ್ಯಕ್ಷ ಕೆರಿಯಪ್ಪ ನಾಯ್ಕ, ವಸಂತ ನಾಯ್ಕ ಮನಮನೆ, ಗ್ರಾಪಂ ಮಾಜಿ ಉಪಾಧ್ಯಕ್ಷ ಉಮೇಶ ನಾಯ್ಕ ಕಡಕೇರಿ ಇತರರಿದ್ದರು. ಎನ್.ಟಿ. ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.
ಶಾಸಕ ಭೀಮಣ್ಣ ನಾಯ್ಕ ಅವರನ್ನು ವ್ಯವಸಾಯ ಸೇವಾ ಸಹಕಾರಿ ಸಂಘ, ಕೋಟೆ ಹನುಮಂತ ದೇವಸ್ಥಾನ ಹಾಗೂ ಬೇಡ್ಕಣಿ ಗ್ರಾಪಂನ ಕಾಂಗ್ರೆಸ್ ಘಟಕದಿಂದ ಸನ್ಮಾನಿಸಲಾಯಿತು.