

ಬೆಂಗಳೂರು: ಈಗಾಗಲೇ ಸಂಚಾರ ನಡೆಸುತ್ತಿರುವ ನಮ್ಮ ಮೆಟ್ರೋ ವಿಸ್ತೃತ ಮಾರ್ಗವನ್ನು ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಧಿಕೃತವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ್ದಾರೆ. ಕೆ.ಆರ್.ಪುರಂ- ಬೈಯಪ್ಪನಹಳ್ಳಿ ಮತ್ತು ಕೆಂಗೇರಿ- ಚಲ್ಲಘಟ್ಟ ಸೇರಿ 2 ವಿಸ್ತೃತ ಮಾರ್ಗಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿಯವರು ಉದ್ಘಾಟಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಸಹ ಭಾಗಿಯಾಗಿದ್ದಾರೆ. ಈ ಸಂದರ್ಭದಲ್ಲಿ ಯಶವಂತಪುರ ಶಾಸಕ ಎಸ್.ಟಿ ಸೋಮಶೇಖರ್, ಸಿಎಸ್ ವಂದಿತಾ ಶರ್ಮಾ, ಮೆಟ್ರೋ ಎಂಡಿ ಅಂಜುಮ್ ಪರ್ವೇಜ್ ಉಪಸ್ಥಿತಿರಿದ್ದರು. ಇದೇ ವೇಳೆ ದೇಶದ ಮೊದಲ ರಾಪಿಡ್ ರೈಲಿಗೂ ಮೋದಿ ಚಾಲನೆ ನೀಡಿದರು.
ಕೆ.ಆರ್.ಪುರ-ಬೈಯ್ಯಪ್ಪನಹಳ್ಳಿ, ಕೆಂಗೇರಿ-ಚಲ್ಲಘಟ್ಟ ಮಾರ್ಗ ಉದ್ಘಾಟನೆ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಎಂ ಸಿದ್ದರಾಮಯ್ಯ ಧನ್ಯವಾದ ತಿಳಿಸಿದ್ದಾರೆ. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ಅವರು, ರಾಜ್ಯ ಹಾಗೂ ಬೆಂಗಳೂರು ಜನತೆ ಪರವಾಗಿ ಪ್ರಧಾನಿಗಳಿಗೆ ಧನ್ಯವಾದ ಹೇಳುತ್ತೇನೆ.
ನೂತನ ಮೆಟ್ರೋ ಮಾರ್ಗದಿಂದ ಜನರಿಗೆ ಮತ್ತಷ್ಟು ಅನುಕೂಲವಾಗಲಿದೆ. ಮೆಟ್ರೋ ಮಾರ್ಗಕ್ಕೆ ರಾಜ್ಯ ಸರ್ಕಾರ 5,630 ಕೋಟಿ ರೂ. ನೀಡಿದೆ. ಕೇಂದ್ರ, ರಾಜ್ಯ ಸರ್ಕಾರ ಜಂಟಿಯಾಗಿ ಮೆಟ್ರೋ ಯೋಜನೆ ಕೈಗೊಂಡಿದೆ. ಎರಡು ಹಂತದಲ್ಲಿ ಸುಮಾರು 74 ಕಿ.ಮೀ. ಮೆಟ್ರೋ ಮಾರ್ಗ ವಿಸ್ತರಣೆಯಾಗಿದೆ. ಟ್ರಾಫಿಕ್ ಸಮಸ್ಯೆ ಹೆಚ್ಚಾಗಿರೋದ್ರಿಂದ ಮೆಟ್ರೋ ಸೇವೆ ಅತ್ಯಗತ್ಯ ಎಂದರು.