

ತುಮಕೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನ್ನ ವಿರುದ್ಧ, ಬಡಪಾಯಿ ಪುಟ್ಟರಂಗಶೆಟ್ಟಿ ವಿರುದ್ಧ ನಿಂತು ಸೋತಿದ್ದ ಸೋಮಣ್ಣನನ್ನು ಇಲ್ಲಿಗೆ ತಂದು ನಿಲ್ಲಿಸಿದ್ದಾರೆ. ನಾವು ಮೈಸೂರಿಂದ ಓಡಿಸಿದ್ದು ನೀವು ಇಲ್ಲಿಂದ ಓಡಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ತಿಪಟೂರು ತಾಲೂಕು ಕೆ.ಬಿ.ಕ್ರಾಸ್ ಬಳಿ ಲೋಕಸಭಾ ಚುನಾವಣೆಯಲ್ಲಿ ಭಾನುವಾರ ಆಯೋಜಿಸಿದ್ದ ಪ್ರಜಾಧ್ವನಿ-2.0 ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಎರಡು ಚುನಾವಣೆ ಸೋತ ಹತ್ತು ತಿಂಗಳಲ್ಲೇ ಮತ್ತೊಂದು ಚುನಾವಣೆಗೆ ಬಂದಿರುವ ಸೋಮಣ್ಣ ಎಷ್ಟು ದುಡ್ಡು ಮಾಡಿರಬಹುದು ಊಹಿಸಿ ಎಂದರು.
ಸೋಮಣ್ಣ ಲೋಕಸಭೆಗೆ ಹೋದರೆ ತುಮಕೂರು ಜಿಲ್ಲೆಯ ಸಮಸ್ಯೆಯನ್ನು ಹೇಳ್ತಾರಾ? ಮೋದಿ ಮುಂದೆ ನಿಲ್ಲುವ ಧೈರ್ಯವಿದೆಯೇ? ಇಂತಹವರು ಲೋಕಸಭೆಗೆ ಹೋದರೆ ಜನರ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ. ಬಿಜೆಪಿಯವರ ಮನೆದೇವರು ಸುಳ್ಳು, ಸುಳ್ಳು ಹೇಳುವುದನ್ನು ಬಿಟ್ಟು ಬೇರೇನೂ ಮಾಡಲಾರರು, ಲೂಟಿ ಸರ್ಕಾರದ ಪಾಲುದಾರ ಸೋಮಣ್ಣ ಪಾರ್ಲಿಮೆಂಟ್ ಗೆ ಹೋಗಿ ಮಾಡುವುದಾದರೂ ಏನು ಎಂದು ವಾಗ್ಧಾಳಿ ನಡೆಸಿದರು.
ಕಳೆದ ಸಲ ಆಯ್ಕೆಯಾಗಿದ್ದ 27 ಬಿಜೆಪಿ ಸಂಸದರಿಗೆ ಕೇಳುತ್ತೇನೆ? ಬರಗಾಲದ ಪರಿಹಾರ ಕೊಡಲಿಲ್ಲ, ಭದ್ರಾ ಮೇಲ್ದಂಡೆ ಯೋಜನೆಯ ಹಣ ಕೊಡಲಿಲ್ಲ . ಪದೆಪದೇ ರಾಜ್ಯಕ್ಕೆ ಅನ್ಯಾಯವಾದರೂ ಕೂಡ ಸಂಸದರು ಬಾಯಿಬಿಡಲಿಲ್ಲ? ಇಂತವರನ್ನು ಬೆಂಬಲಿಸುವ ಅಗತ್ಯವಿಲ್ಲ. ರಾಜ್ಯದ ಜನರ ಸಮಸ್ಯೆಗಳನ್ನು ಸಂಸತ್‌ನಲ್ಲಿ ಪ್ರತಿಧ್ವನಿಸುವ ಸಮರ್ಥ ಪ್ರತಿನಿಧಿಗಳು ಬೇಕಿದೆ ಎಂದರು.
ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ, ಸಹಕಾರ ಸಚಿವ ಕೆ.ಎನ್.ರಾಜಣ್ಣ, ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕರಾದ ಕೆ.ಷಡಕ್ಷರಿ, ಎಸ್.ಆರ್.ಶ್ರೀನಿವಾಸ್, ಆರ್.ರಾಜೇಂದ್ರ, ಮಾಜಿ ಶಾಸಕರಾದ ಕೆ.ಎಸ್.ಕಿರಣಕುಮಾರ್, ಬೆಮೆಲ್ ಕಾಂತರಾಜು ಮತ್ತಿತರರು ಉಪಸ್ಥಿತರಿದ್ದರು.