ಮುಖ್ಯಮಂತ್ರಿಯಾಗಿ ನಾನೇ ಮುಂದುವರೆಯುತ್ತೇನೆ; ಸಿಎಂ ಸಿದ್ದರಾಮಯ್ಯ ವಿಶ್ವಾಸ

Cm
Published on

ಬೆಂಗಳೂರು: ಮುಖ್ಯಮಂತ್ರಿ ಸ್ಥಾನ ವಿಚಾರವಾಗಿ ಸಚಿವರುಗಳು ಹೇಳಿಕೆಗಳನ್ನು ನೀಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಸ್ಥಾನ ಖಾಲಿಯಿಲ್ಲದಿರುವಾಗ , ಈ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದ್ದಾರೆ.

ಅರಣ್ಯ ಭವನದಲ್ಲಿ ಆಯೋಜಿಸಿದ್ದ ಇಲಾಖೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 21 ಹಗರಣಗಳು ನಡೆದಿದ್ದು, ಈ ಎಲ್ಲ ಹಗರಣಗಳ ತನಿಖೆಯನ್ನು ಚುರುಕುಗೊಳಿಸಿ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಸಲಹೆ ನೀಡಲು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ. ಈ ಸಮಿತಿಯಲ್ಲಿ ಸಚಿವರಾದ ಕೃಷ್ಣಭೈರೇಗೌಡ, ಪ್ರಿಯಾಂಕ ಖರ್ಗೆ, ಸಂತೋಷ್ ಲಾಡ್ ಹಾಗೂ ಎಚ್.ಕೆ.ಪಾಟೀಲ್ ಸದಸ್ಯರಾಗಿದ್ದಾರೆ.

ಸಮಿತಿಯು ವರದಿಯನ್ನು ನೀಡಲು ಒಂದರಿಂದ ಎರಡು ತಿಂಗಳ ಅವಧಿಯನ್ನು ನೀಡಲಾಗಿದೆ. ಪಿಎಸ್‌ಐ ಹಗರಣ, 40% ಕಮಿಷನ್ ಹಗರಣ, ಕೋವಿಡ್19 ಅಕ್ರಮ, ಬಿಟ್ ಕಾಯಿನ್ ಹಗರಣಗಳಿಗೆ ಮಾತ್ರ ತನಿಖಾ ಆಯೋಗಗಳನ್ನು ರಚಿಸಲಾಗಿದೆ. ಅದರಲ್ಲಿ ಕೋವಿಡ್ 19 ಬಗ್ಗೆ ತನಿಖಾ ಆಯೋಗ ಪೂರ್ವಭಾವಿ ವರದಿಯನ್ನು ನೀಡಿದ್ದು, ಅಧಿಕಾರಿಗಳ ಪರಿಶೀಲನೆಯ ನಂತರ ಈ ಬಗ್ಗೆ ಸಚಿವ ಸಂಪುಟದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.

ತಪ್ಪಿತಸ್ಥರ ವಿರುದ್ಧ ಕ್ರಮ ಖಂಡಿತ

ಸರ್ಕಾರ ತನಿಖೆಗೆ ಸೂಚಿಸುವ ಮೂಲಕ ದ್ವೇಷದ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ಬಿಜೆಪಿಯವರು ನನ್ನ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಹಾಗಂತ ನಮ್ಮ ಸರ್ಕಾರ ದ್ವೇಷದ ರಾಜಕಾರಣ ಮಾಡುವುದಿಲ್ಲ. ಆದರೆ ತಪ್ಪು ಮಾಡಿದವರ ಮೇಲೆ ಖಂಡಿತ ಕ್ರಮ ಕೈಗೊಳ್ಳಲಾಗುವುದು. ಪಿಎಸ್‌ಐ ಹಗರಣದ ಬಗ್ಗೆ ವಿಶೇಷ ತನಿಕಾ ತಂಡಕ್ಕೆ (ಎಸ್‌ಐಟಿ) ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.

ನ್ಯಾಯಾಲಯ ಸೂಕ್ತ ತೀರ್ಮಾನ ಕೈಗೊಳ್ಳಲಿದೆ

ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಹಾಗೂ ಕೇಂದ್ರ ಜಾರಿ ನಿರ್ದೇಶನಾಲಯದ ತನಿಖೆಗಳ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಎಂ, ಈ ಪ್ರಕರಣದ ಬಗ್ಗೆ ಎಸ್‌ಐಟಿಯವರೂ ತನಿಖೆ ಮಾಡಿ ಚಾರ್ಜ್ ಶೀಟ್ ಸಲ್ಲಿಸಿದ್ದು, ಈ ಬಗ್ಗೆ ನ್ಯಾಯಾಲಯ ತೀರ್ಮಾನ ಕೈಗೊಳ್ಳಲಿದೆ ಎಂದು ಸಿಎಂ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net