ಮಧುಗಿರಿ ಜಿಲ್ಲಾ ಕೇಂದ್ರ ಪ್ರಸ್ತಾವನೆ, ಸರ್ಕಾರ ಗಂಭೀರ ಚಿಂತನೆ: ಸಿಎಂ ಸಿದ್ದರಾಮಯ್ಯ

Siddu_District
Published on

ಮಧುಗಿರಿ: ಮಧುಗಿರಿ ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕೆಂಬ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಶೀಲಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.

ಪಟ್ಟಣದ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕ್ಷೀರಭಾಗ್ಯ ದಶಮಾನೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಧುಗಿರಿ ಜಿಲ್ಲೆ ಮಾಡಲು ಯಾವುದೇ ವಿರೋಧವಿಲ್ಲ ಎಂಬುದು ರಾಜಣ್ಣನ ಹಕ್ಕೊತ್ತಾಯವಾಗಿದ್ದು ಷಡಕ್ಷರಿ ಸಹ ತಿಪಟೂರನ್ನು ಜಿಲ್ಲೆ ಮಾಡಿ ಎಂದು ಕೇಳುತ್ತಿದ್ದಾರೆ. ಸದ್ಯ ಆರ್ಥಿಕ ಹೊರೆಯಿದ್ದು ಮಧುಗಿರಿಯನ್ನು ಜಿಲ್ಲೆಯನ್ನಾಗಿ ಮಾಡುವ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಶೀಲಿಸಲಿದೆ ಎಂದು ತಿಳಿಸಿದರು.

ಏಷ್ಯಾದ ಅತಿದೊಡ್ಡ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಮಾಡೇ ತೀರುತ್ತೇವೆ. ತಾಯಿ ಮಕ್ಕಳ ಆಸ್ಪತ್ರೆಗೆ ಮುಂದಿನ ವರ್ಷ ಮಂಜೂರು ಮಾಡಿಕೊಡುತ್ತೇನೆ. ರಾಜಣ್ಣ ಮಧುಗಿರಿಗೆ ಬಹಳಷ್ಟು ಕೆಲಸ ಮಾಡಿದ್ದು, ಈಗ ಮೂರೇ ತಿಂಗಳಲ್ಲಿ 5 ಗ್ಯಾರಂಟಿಗಳ ನಡುವೆಯೂ 156 ಕೋಟಿ ವೆಚ್ಚದ ಕಾಮಗಾರಿಗಳನ್ನು ತಂದಿದ್ದಾರೆ. ಕನ್ನಡ ಭವನ ಪೂರ್ಣಗೊಳ್ಳಲು ರಾಜಣ್ಣನ ಶ್ರಮ ಅಪಾರ. ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರ ಸ್ಥಾನ. ಕನ್ನಡವೇ ನಮ್ಮ ಉಸಿರು. ನಾವು ಕೊಟ್ಟ ಮಾತಿನಂತೆ ನಡೆದಿದ್ದೇವೆ. ನಿಮ್ಮ ಆಶೀರ್ವಾದ ಸದಾ ಇರಲಿ ಎಂದರು.

ರಾಜಣ್ಣ, ಪರಂ ವಕಾಲತ್ತು: ಧರೆಯೊಳೆಲ್ಲೆ ಇರಲಿ ಮರೆಯಲಾರೆ ನಾ ಮಧುಗಿರಿಯ ಎಂಬ ಮಾತಿನಂತೆ ಮಧುಗಿರಿ ಉಪವಿಭಾಗದ ಮಧುಗಿರಿ, ಪಾವಗಡ, ಕೊರಟಗೆರೆ, ಶಿರಾ ತಾಲೂಕುಗಳು ಶಾಶ್ವತ ಬರಪೀಡಿತ ಪ್ರದೇಶವಾಗಿವೆ. ಮಧುಗಿರಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿದರೆ ಉಪವಿಭಾಗದ ತಾಲೂಕುಗಳು ಬಹಳಷ್ಟು ಅಭಿವೃದ್ಧಿ ಯಾಗಲಿವೆ. ಮಧುಗಿರಿ ಬೆಟ್ಟ ಏಷ್ಯಾ ಖಂಡದಲ್ಲೇ ಅತೀ ದೊಡ್ಡ ಬೆಟ್ಟವಾಗಿದೆ. ಇದು ಐತಿಹಾಸಿಕ ಸ್ಥಳವಾಗಿದ್ದು, ಈ ಬೆಟ್ಟಕ್ಕೆ ರೋವ್ ವೇ ಅಳವಡಿಸಿದಲ್ಲಿ ಹಿಸ್ಟಾರಿಕಲ್ ಟೂರಿಸಂಗೆ ಹೇಳಿ ಮಾಡಿಸಿದ ತಾಣವಾಗಲಿದೆ. ಮಧುಗಿರಿ ಬೆಟ್ಟಕ್ಕೆ ರೋಪ್ ವೇ ಅಳವಡಿಸಿ ಮಧುಗಿರಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ, ಸಹಕಾರ ಸಚಿವ ಕೆ.ಎನ್.ರಾಜಣ್ಣ ಮನವಿ ಮಾಡುವ ಮೂಲಕ ಮಧುಗಿರಿ ಜೆಲ್ಲೆ ಘೋಷಣೆಯ ಪರ ವಕಾಲತ್ತು ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net