ಕ್ಷೀರಭಾಗ್ಯ ಯೋಜನೆಗೆ ಅಂತಾರಾಷ್ಟ್ರೀಯ ಮನ್ನಣೆ

CM_KsheeraBhgya_01
Published on

ಮಧುಗಿರಿ: ಹಾಲು ಉತ್ಪಾದಿಸುವ ರೈತರು ಹಾಗೂ ಬಡವರ ಮಕ್ಕಳಿಗೆ ನೆರವಾಗುವ ‘ಕ್ಷೀರಭಾಗ್ಯ’ ಯೋಜನೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಮನ್ನಣೆ ಬಂದಿದೆ ಎಂದು ಸಿಎಂ ಸಿದ್ದರಾಮಯ್ಯ ಹೆಮ್ಮೆ ವ್ಯಕ್ತಪಡಿಸಿದರು.

ಮಧುಗಿರಿ ಪಟ್ಟಣದಲ್ಲಿ ಕೆಎಂಎಫ್ ವತಿಯಿಂದ ಬುಧವಾರ ಆಯೋಜಿಸಿದ್ದ ‘ಕ್ಷೀರಭಾಗ್ಯ’ಯೋಜನೆ ದಶಮಾನೋತ್ಸವದಲ್ಲಿ ಮಾತನಾಡಿದ ಅವರು, ಬಡವರ ಮಕ್ಕಳು ಅಪೌಷ್ಠಿಕತೆಯಿಂದ ಬಳಸಲು ಬಾರದು ಎಂದು ಕ್ಷೀರಭಾಗ್ಯ, ಬಡವರ ಮಕ್ಕಳು ಬರಿ ಕಾಲಲ್ಲಿ ಬರಬಾರದು ಎಂದು ‘ಶೂಭಾಗ್ಯ’ಬಂತು ಹೀಗೆ ಅನೇಕ ಭ್ಯಾಗ್ಯಗಳು ನಮ್ಮ ಸರ್ಕಾರದ ಅವಧಿಯಲ್ಲಿ ಬಡವರ ಪರವಾಗಿ ಬಂದಿವೆ ಎಂದರು.

ಸರ್ಕಾರದ ವತಿಯಿಂದ ಒಕ್ಕೂಟಗಳ ಮೂಲಕ ಹಾಲು ಖರೀದಿಸಿ ಸರ್ಕಾರಿ ಶಾಲೆಯ ಮತ್ತು ಅಂಗನವಾಡಿ 51 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಒಂದು ಮಗುವಿಗೆ 150 ಎಂಎಲ್ ನಂತೆ ಹಾಲು ನೀಡಲಾಗುತ್ತಿದೆ. 54.68 ಕೋಟಿ ಮಕ್ಕಳಿಗೆ ಸರ್ಕಾರದ ವತಿಯಿಂದ ಹಾಲು ವಿತರಣೆಯಾಗುತ್ತಿದ್ದು ಯಶಸ್ವಿಯಾಗಿ 10 ವರ್ಷ ಪೂರೈಸಿದೆ ಎಂದು ತಿಳಿಸಿದರು.

ಅಕ್ಕಿ ಕೊಡಲು ಅಡ್ಡಗಾಲು: ರಾಜ್ಯದ ಬಡ ಜನರಿಗೋಸ್ಕರ, ಹಸಿದು ಮಲಗಬಾರದು ಎಂದು ಅನ್ನಭಾಗ್ಯ ಕಾರ್ಯಕ್ರಮ ಬಂದಿದೆ ಆದರೆ, ಬಿಜೆಪಿಯವರು ಬಡವರ ಪರವಾಗಿಲ್ಲ, ನಾವು ಹತ್ತು ಕೆಜಿ ಅಕ್ಕಿ ಕೊಡಲು ಅಡ್ಡಗಾಲು ಹಾಕಿದರು. ಹಣ ಕೊಟ್ಟರೂ ಅಕ್ಕಿ ಕೊಡಲಿಲ್ಲ ಎಂದು ಸಿದ್ದರಾಮಯ್ಯ ದೂರಿದರು.

ಬಡವರು ದಿನದ ಮೂರು ಹೊತ್ತು ಹೊಟ್ಟೆ ತುಂಬ ಊಟ ಮಾಡಬೇಕು ಎಂದು ಜಾರಿಗೊಳಿಸಿದ ಅನ್ನಭಾಗ್ಯಕ್ಕೆ ಸಹಕಾರ ನೀಡದ ಬಿಜೆಪಿಯವರು ನೀಚರು, ಬಡವರ ವಿರೋಧಿಗಳು, ಮನುಷ್ಯತ್ವ ಇಲ್ಲದ ಜನ ಹಣ ಕೊಟ್ಟರು ಅಕ್ಕಿ ನೀಡಲಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ನಮಗೆ ಅಕ್ಕಿ ಸಿಕ್ಕುವವರೆಗೂ ಜನರಿಗೆ ಹಣ ನೀಡುತ್ತಿದ್ದೇವೆ, ಶೀಘ್ರದಲ್ಲಿಯೇ ಎಲ್ಲರಿಗೂ 10ಕೆಜಿ ಅಕ್ಕಿ ನೀಡುತ್ತೇವೆ ಎಂದು ತಿಳಿಸಿದ ಸಿದ್ದರಾಮಯ್ಯ, ಯಾರೂ ಅಕ್ಕಿ ಮಾರಿಕೊಳ್ಳಬಾರದು ಎಂದು ಮನವಿ ಮಾಡಿದರು.

ಉಚಿತ ಕಾರ್ಯಕ್ರಮಗಳನ್ನು ನೀಡಿದರೆ ರಾಜ್ಯ ದಿವಾಳಿಯಾಗಲಿವೆ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದರು ಆದರೆ, ಯೋಜನೆಯನ್ನು ಜಾರಿಗೊಳಿಸಿ ನಾವು ಸಾಧಿಸಿ ತೋರಿಸುತ್ತೇವೆ ಎಂದು ಹೇಳಿದ್ದೇನೆ, ಈಗಾಗಲೇ ನಾಲ್ಕು ಗ್ಯಾರಂಟಿ ಜಾರಿಯಾಗಿದೆ, ಮುಂದಿನ ವರ್ಷದ ಆರಂಭದಲ್ಲಿ ಮತ್ತೊಂದು ಯೋಜನೆಯೂ ಜಾರಿಯಾಗಲಿದೆ. ದೇಶದ ಪ್ರಧಾನಿ ನರೇಂದ್ರ ಮೋದಿ ಯಾವ ಬಡವರಿಗೆ ಕೊಟ್ಟಿದ್ದಾರೆ? ಅವರ ಕಾಲದಲ್ಲಿ ಅದಾನಿ, ಅಂಬಾನಿಗಳು ದೊಡ್ಡ ಕುಳವಾದರೆ ಹೊರತು ಬಡವರು ಇನ್ನೂ ಬಡವರಾದರು ಎಂದು ಟೀಕಿಸಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಡಾ.ಜಿ.ಪರಮೇಶ್ವರ, ಕೆ.ಎನ್.ರಾಜಣ್ಣ, ಕೆ.ವೆಂಕಟೇಶ್,  ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಕೆಎಂಎಫ್ ಅಧ್ಯಕ್ಷ ಎಲ್.ಬಿ.ಪಿ.ಭೀಮಾನಾಯ್ಕ, ಎಂಎಲ್ಸಿ ಆರ್.ರಾಜೇಂದ್ರ, ಶಾಸಕರಾದ ಎಸ್.ಆರ್.ಶ್ರೀನಿವಾಸ್, ಎಚ್.ವಿ.ವೆಂಕಟೇಶ್, ಡಾ.ಎಚ್.ಡಿ.ರಂಗನಾಥ್, ತುಮುಲ್‌ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.

ಕ್ಷೀರಭಾಗ್ಯ ಯೋಜನೆ ಜಾರಿಯಾಗಿ 10 ವರ್ಷ ತುಂಬಿದ್ದು ದಶಮಾನೋತ್ಸವ ಸಂಭ್ರಮದಲ್ಲಿದೆ. ಯೋಜನೆ ಆರಂಭಿಸುವಾಗಲೂ ನಾನೇ ಸಿಎಂ ಆಗಿದ್ದೆ, ದಶಮಾನೋತ್ಸವ ಸಂದರ್ಭದಲ್ಲೂ ನಾನೇ ಸಿಎಂ ಆಗಿದ್ದೇನೆ. ಬಡ ಮಕ್ಕಳು ಅಪೌಷ್ಟಿಕತೆಯಿಂದ ಬಳಲಬಾರದು ಎಂದು ಯೋಜನೆ ಜಾರಿಗೊಳಿಸಲಾಗಿದೆ. ಈ ವರ್ಷದಿಂದ 1 ರಿಂದ 10 ನೇ ತರಗತಿ ವರೆಗಿನ ಮಕ್ಕಳಿಗೆ ವಾರಕ್ಕೆ 2 ದಿನ ಕೋಳಿ ಮೊಟ್ಟೆ ನೀಡಲಾಗುತ್ತಿದೆ. ಸಿದ್ದರಾಮಯ್ಯ ಸಿಎಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net