

ಬೈಲಹೊಂಗಲ: ಯಡಿಯೂರಪ್ಪ ಕುಟುಂಬ ಬಿಜೆಪಿಯಿಂದ ಹೊರ ಬರುವವರೆಗೂ ನಾನು ಬಿಜೆಪಿಗೆ ಬರಲ್ಲ. ಅವರನ್ನು ಮುಖ್ಯಮಂತ್ರಿ ಮಾಡಲು ನಾವು ಪಕ್ಕೆ ಬರಬೇಕಾ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಶ್ನಿಸಿದರು.
ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮನ ಸಮಾಧಿ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಚನ್ನಮ್ಮನ ಸಮಾಧಿಗೆ ಪುಷ್ಪ ನಮನ ಅರ್ಪಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮೂರು ತಿಂಗಳಿಗೊಮ್ಮೆ ದುಬೈಗೆ ಯಾಕೆ ಹೋಗ್ತೀರಿ ಅಪ್ಪಾ ಮಕ್ಕಳು. ವಿದೇಶದಲ್ಲಿ ಆಸ್ತಿ ಇಲ್ಲವೆಂದು ಯಡಿಯೂರು ಸಿದ್ಧಲಿಂಗೇಶ್ವರನ ಬಳಿ ಹೋಗಿ ಆಣೆ ಮಾಡಿ ಡಿಕ್ಲೆರ್ ಮಾಡಲಿ. ಯಡಿಯೂರಪ್ಪ, ವಿಜಯೇಂದ್ರರನ್ನು ತಲೆ ಮೇಲೆ ಕೂಡಿಸಿಕೊಂಡಿರಬಹುದು. ಚುನಾವಣೆ ಬರಲಿ ಆಗ ಮಾತಾಡ್ತೇನಿ' ಎಂದು ಸವಾಲು ಹಾಕಿದರು.
ಮಂತ್ರಿ ಮಾಡಿ ಎಂದು ಲ$್ಮ ಹೆಬ್ಬಾಳ್ಕರ್, ಕುಲಕರ್ಣಿ ಸೇರಿ ಕೂಡಲಸಂಗಮ ಸ್ವಾಮೀಜಿ ಅವರನ್ನು ಯಾರ್ಯಾರು ದಿಲ್ಲಿಗೆ ಕರೆದುಕೊಂಡು ಹೋಗಿದ್ದರು ಗೊತ್ತಿದೆ. ನಾನು ಒಮ್ಮೆಯೂ ಮಂತ್ರಿ ಮಾಡಿ ಎಂದು ಕರೆದುಕೊಂಡು ಹೋಗಿಲ್ಲ. ರಾಜಕೀಯ ಭವಿಷ್ಯದಲ್ಲಿ ಸ್ವಾಮೀಜಿಯನ್ನು ನಾನು ಉಪಯೋಗ ಮಾಡಿಕೊಂಡಿಲ್ಲ ಎಂದರು.
ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಬಸನಗೌಡ ಪಾಟೀಲ ಯತ್ನಾಳ ಲಿಂಗಾಯತ ಪಂಚಮಸಾಲಿ ಸಮುದಾಯದ ಶಕ್ತಿ. ಬಿಜೆಪಿ ನಾಯಕರು ಕೂಡಲೇ ಯತ್ನಾಳ ಅವರನ್ನು ಮರಳಿ ಪಕ್ಕೆ ಸೇರಿಸಿಕೊಳ್ಳಬೇಕು. ಇಲ್ಲವಾದಲ್ಲಿ ಮೇ.11ಕ್ಕೆ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮುಖಂಡರಾದ ಮಹೇಶ ಹರಕುಣಿ, ಮುರಗೇಶ ಗುಂಡ್ಲೂರ, ಶಂಕರ ಮಾಡಲಗಿ, ಎಂ.ವೈ.ಸೋಮಣ್ಣವರ, ಶಿವಾನಂದ ಬೆಳಗಾವಿ, ರಾಜು ನರಸನ್ಮವರ, ಗಂಗಪ್ಪ ಗುಗ್ಗರಿ, ಬಾಳನಗೌಡ ಪಾಟೀಲ ಇತರರಿದ್ದರು.