

ರಾಮನಗರ
ನಿಖಿಲ್ ಕುಮಾರಸ್ವಾಮಿ ಸೋಲಿಸಲು ಕಾಂಗ್ರೆಸ್ ಷಡ್ಯಂತ್ರ ನಡೆಸಿದೆ. ರಾಮನಗರ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯ ಮತ್ತು ಜೆಡಿಎಸ್ ಪಕ್ಷದ ನಡುವೆ ವೈಮನಸ್ಸು ಸೃಷ್ಟಿಸಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದು ಅವರ ಅಜೆಂಡಾ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಜೆಡಿಎಸ್ ಅಭ್ಯರ್ಥಿ ನಿಖಿಲ್ ಪರ ನಗರದ ವಿವಿಧ ವಾರ್ಡ್ಗಳಲ್ಲಿ ಮತಯಾಚನೆ, ಅಲ್ಪಸಂಖ್ಯಾತ ಮುಖಂಡರ ಸಮಾವೇಶ ಮತ್ತು ಬೈಕ್ ರ್ಯಾಲಿ ನಡೆಸಿ ನಗರದ ಸಿಎಂಸಿ ಕಾಂಪ್ಲೆಕ್ಸ್ ಬಳಿ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿ, ಕಾಂಗ್ರೆಸ್ ಗೆಲ್ಲಿಸುವುದಾಗಿದ್ದರೆ, ಡಿ.ಕೆ. ಶಿವಕುಮಾರ್ ಅವರಿಗೆ ಧೈರ್ಯವಿದ್ದಿದ್ದರೆ ರಾಮನಗರ ಕ್ಷೇತ್ರದಿಂದ ಸೋದರ ಡಿ.ಕೆ. ಸುರೇಶ್ ಅಥವಾ ಅಳಿಯನನ್ನು ಕಾಂಗ್ರೆಸ್ ಅಭ್ಯರ್ಥಿ ಮಾಡಬೇಕಿತ್ತು, ಅವರಿಗೆ ಕಾಂಗ್ರೆಸ್ ಅಭ್ಯರ್ಥಿ ಸೋಲುತ್ತಾರೆ ಎಂದು ತಿಳಿದಿರುವುದರಿಂದಲೇ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎಂದು ಇಬ್ರಾಹಿಂ ಮಾತಿನ ಛಾಟಿ ಬೀಸಿದರು.
ನಿಖಿಲ್ಗೆ ರಾಜಕೀಯ ಅಸ್ತಿತ್ವ ಕಟ್ಟಿಕೊಡಲಿದೆ ರಾಮನಗರ
ರಾಮನ ಹೆಸರಿನ ರಾಮನಗರದ ರಾಮಭೂಮಿ ನಿಖಿಲ್ ಕುಮಾರಸ್ವಾಮಿ ಅವರಿಗೆ ರಾಜಕೀಯ ಅಸ್ತಿತ್ವವನ್ನು ಕಟ್ಟಿಕೊಡಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಭವಿಷ್ಯ ನುಡಿದರು. ರಾಮನಗರ ಕೆಂಗಲ್ ಹನುಮಂತಯ್ಯ, ಎಚ್.ಡಿ. ದೇವೇಗೌಡರು, ಎಚ್.ಡಿ. ಕುಮಾರಸ್ವಾಮಿ ಅವರಿಗೆ ರಾಜಕೀಯದಲ್ಲಿ ಸ್ಥಾನಮಾನ ಕಲ್ಪಿಸಿದ ಪುಣ್ಯಭೂಮಿ. ಇದೇ ಭೂಮಿಯಲ್ಲಿ ನಿಖಿಲ್ಗೂ ದೊಡ್ಡ ಮಟ್ಟದಲ್ಲಿ ಜನ ಆಶೀರ್ವಾದ ಮಾಡಲಿದ್ದಾರೆ. ಜೆಡಿಎಸ್ ಪಕ್ಷ ಜಾತಿ ಆಧಾರದ ಮತ ಯಾಚಿಸುವುದಿಲ್ಲ. ಜನರು ಎರಡೂ ಪಕ್ಷಗಳನ್ನು ನೋಡಿದ್ದಾರೆ. ಕಳೆದ ಬಾರಿ ಚುನಾವಣೆಗೂ 2023ರ ಚುನಾವಣೆಗೂ ವ್ಯತ್ಯಾಸವಿದೆ. ಈಗ ಯಾವುದೇ ಗೊಂದಲವಿಲ್ಲ. ಈ ಬಾರಿ ಜೆಡಿಎಸ್ಗೆ ಮುಸ್ಲಿಮರು ಬೆಂಬಲಿಸಿದ್ದು, ಉತ್ತಮ ಫಲಿತಾಂಶ ಬರಲಿದೆ ಎಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ರಾಜಶೇಖರ್, ಪ್ರಧಾನ ಕಾರ್ಯದರ್ಶಿ ಬಿ. ಉಮೇಶ್, ಅಲ್ಪಸಂಖ್ಯಾತ ಮುಖಂಡರಾದ ಸುಹೇಲ್, ಮುನ್ಹಾಜಿಲ್ ಆಗಾ, ಆರಿಫ್ ಖುರೇಷಿ, ಹಾಗೂ ಕಾರ್ಯಕರ್ತರು ರ್ಯಾಲಿಯಲ್ಲಿ ಭಾಗವಹಿಸಿದ್ದರು.