

ತುಮಕೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಚರ್ಚೆಯೇ ಇಲ್ಲ, ಡಿ.ಕೆ.ಶಿವಕುಮಾರ್ ಸಿಎಂ ಆಗಲು ಈಗ ಸಿಎಂ ಖುರ್ಚಿ ಖಾಲಿಯೂ ಇಲ್ಲ. ಮುಂದಿನ ಐದು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಪುನರುಚ್ಚರಿಸಿದರು.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮೂವರು ಡಿಸಿಎಂ ಆಗಬೇಕು ಎನ್ನುವದು ನನ್ನ ನಿರಂತರ ವಾದವಾಗಿದೆ. ಮುಂಬರುವ ಸ್ಥಳಿಯ ಸಂಸ್ಥೆ ಚುನಾವಣೆಯಲ್ಲಿ ಗೆಲ್ಲಲು ಮೂವರು ಡಿಸಿಎಂ ಆಗತ್ಯವಿದೆ ಎಂದರು.
ಲೋಕಸಭಾ ಚುನಾವಣೆ ಕಾರಣಕ್ಕೆ ಎಐಸಿಸಿ ಅಧ್ಯಕ್ಷರು ಸುಮ್ಮನಿರಲು ಸೂಚನೆ ನೀಡಿದ್ದರು. ಶ್ರೀದಲ್ಲಿಯೇ ಅವರನ್ನು ಭೇಟಿಯಾಗಿ ನಮ್ಮ ಬೇಡಿಕೆ ಬಗ್ಗೆ ಮನವಿ ಮಾಡುತ್ತೇನೆ ಎಂದರು.
ಮಲ್ಲಿಕಾರ್ಜುನರ್ಖಗೆ ಅವರು ರಾಜ್ಯ ರಾಜಕಾರಣಕ್ಕೆ ಬರುತ್ತಾರೆ, ಸಿಎಂ ಅಪೇಕ್ಷೆ ಪಡುತ್ತಾರೆ ಎಂದರೆ ಯಾರೊಬ್ಬರೂ ಅಡ್ಡಿ ಪಡಿಸಲು ಸಾಧ್ಯವಿಲ್ಲ, ತಪ್ಪಿಸಲು ಸಾಧ್ಯವೂ ಇಲ್ಲ, ಅವರಿಗೆ ಮನಸ್ಸಿದ್ದರೆ ಹಿಂದೆಯೇ ಆಗುತ್ತಿದ್ದರು ಎಂದು ರ್ಖಗೆ ರಾಜ್ಯ ರಾಜಕಾರಣಕ್ಕೆ ವಾಪಸಾಗುವ ವದಂತಿ ಬಗ್ಗೆ ಪ್ರತಿಕ್ರಿಯಿಸಿದರು.
ನರೇಂದ್ರ ಮೋದಿ ದೇಶದ ಪ್ರಧಾನಿ ಆದರೆ ದೇಶ ಬಿಟ್ಟು ಹೋಗ್ತಿನಿ ಎಂದು ಎಚ್.ಡಿ.ದೇವೇಗೌಡರು 2014ರಲ್ಲಿ ಹೇಳಿಕೆ ನೀಡಿದ್ದರು ಈಗ ನೀನೇ ಕಾಣಪ್ಪ ದೇಶ ಕಾಪಾಡೋನು ಎಂದು ಸ್ವಾರ್ಥಕ್ಕಾಗಿ ಊಸರವಳ್ಳಿ ಥರ ಬಣ್ಣ ಬದಲಾಯಿಸಿದ್ದಾರೆ ಎಂದು ಜೆಡಿಎಸ್ ವಿರುದ್ಧ ಹರಿಹಾಯ್ದರು.
ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಶತ್ರುಗಳ ಶತ್ರು ಮಿತ್ರರಾಗಿದ್ದಾರೆ, ಬಿಜೆಪಿ, ಜೆಡಿಎಸ್ ನಮ್ಮ ಶತ್ರಗಳು ಇಬ್ಬರೂ ಮಿತ್ರರಾಗಿ ಗೆಲುವು ಸಾಧಿಸಿದ್ದಾರೆ. ಅವರ ಈ ಮಿತ್ರತ್ವ ಎಷ್ಟು ದಿನ ಇರಲಿದೆಯೋ ನೋಡೋಣ ಎಂದರು.