

ಬೆಂಗಳೂರು: ಕರೊನಾ ಸಂಕಟದಿಂದ ಪಾರಾಗಲು ಅನೇಕ ಉಪಕ್ರಮಗಳನ್ನು ತೆಗೆದುಕೊಂಡಿರುವ ಸರ್ಕಾರ ಇದೀಗ, ತುರ್ತುಪರಿಹಾರಕ್ಕಾಗಿ ಹಣ ವ್ಯಯಿಸಬೇಕಾಗಿದೆ. ಹೀಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸ್ವತಃ ಒಂದು ವರ್ಷದ ವೇತನವನ್ನು ಪರಿಹಾರ ನಿಧಿಗೆ ನೀಡುತ್ತಿರುವುದಾಗಿ ಘೋಷಿಸಿದ್ದಾರೆ.
ಅಲ್ಲದೆ, ಈ ಸಂಬಂಧ ವಿಡಿಯೋ ಒಂದನ್ನು ಟ್ವೀಟ್ ಖಾತೆಯಲ್ಲಿ ಅಪ್ಲೋಡ್ ಮಾಡಿರುವ ಮುಖ್ಯಮಂತ್ರಿ ಬಿಎಸ್ವೈ, ಪರಿಹಾರ ನಿಧಿಗೆ ಒಂದು ವರ್ಷದ ವೇತನವನ್ನು ಸಂಪೂರ್ಣವಾಗಿ ದೇಣಿಗೆ ನೀಡುವುದಾಗಿ ಹೇಳಿದ್ದಾರೆ. ಅಲ್ಲದೆ, ಸಚಿವ ಸಂಪುಟದ ಸಹೋದ್ಯೋಗಿಗಳು, ಅಧಿಕಾರಿಗಳು, ಸಿಬ್ಬಂದಿ ವರ್ಗ ತಮ್ಮ ಕೈಲಾದ ಮಟ್ಟಿಗೆ ಹಣವನ್ನು ದೇಣಿಗೆಯ ರೂಪದಲ್ಲಿ ಪರಿಹಾರ ನಿಧಿಗೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಕರೊನಾ ಸೋಂಕು ಬೇರೆ ಬೇರೆ ರೀತಿಯಲ್ಲಿ ಜನಜೀವನವನ್ನು ತಟ್ಟಿದ್ದು, ಪರಿಹಾರ ಕಾರ್ಯಗಳಲ್ಲಿ ಸಾರ್ವಜನಿಕರೂ ಸಹಾಯ ಹಸ್ತ ಚಾಚಬೇಕು. ಸಾಧ್ಯ ಇರುವಂಥವರು ದೇಣಿಗೆ ನೀಡಬೇಕು ಎಂದೂ ಅವರು ಮನವಿ ಮಾಡಿದ್ದಾರೆ.