

ಬೆಂಗಳೂರು: ಮಹಾಮಾರಿ ಕರೊನಾ ಸೋಂಕು ನಿಯಂತ್ರಣಕ್ಕೆ ಸರ್ಕಾರದ ಜತೆಗೆ ಜನರ ಸಹಕಾರವು ಅಗತ್ಯವೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮನವಿ ಮಾಡಿದರು.
ಮಾಸ್ಕ್ ಡೇ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಸಮುದಾಯದಲ್ಲಿ ಜಾಗೃತಿ ಮೂಡಿಸಲೆಂದು ಮಾಸ್ಕ್ ದಿನ ಆಚರಿಸಿ ಪಾದಯಾತ್ರೆ ನಡೆಸಲಾಗಿದೆ. ಆಯಾ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಆಚರಿಸಲು ಸೂಚಿಸಲಾಗಿದೆ ಎಂದರು. ಇದನ್ನೂ ಓದಿ: ಇಡೀ ಪ್ರಪಂಚವೇ ಇದರಿಂದ ತುಂಬಿದೆ ಎಂದ ರಾಮ್ ಗೋಪಾಲ್ ವರ್ಮಾಗೆ ನೆಟ್ಟಿಗರ ಶಾಕ್!
ರಾಜ್ಯದಲ್ಲಿ ಸೋಂಕು ಹರಡದಂತೆ ನಿಯಂತ್ರಣ, ಮುನ್ನೆಚ್ಚರಿಕೆ ಕ್ರಮಗಳ ನಿರ್ವಹಣೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘಿಸಿ, ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿರುವುದು ದೇಶಕ್ಕೆ ಮೇಲ್ಪಂಕ್ತಿಯಾಗಿದೆ ಎಂಬ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೊರ ರಾಜ್ಯಗಳಿಂದ ಬರುವವರನ್ನು ತಡೆಗಟ್ಟಿದ್ದರೆ ಸೋಂಕಿತ ಪ್ರಕರಣಗಳು ಏರಿಕೆಯಾಗುತ್ತಿದ್ದಿಲ್ಲ. ಮುಂದಿನ ದಿನಗಳಲ್ಲಿ ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಲಿದ್ದು, ಸರ್ಕಾರದ ಜತೆಗೆ ಜನರು ಕೈಜೋಡಿಸಬೇಕು ಎಂದು ಕರೆ ನೀಡಿದರು.
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಕೈ ತೊಳೆಯುವುದು, ಸ್ಯಾನಿಟೈಸರ್ ಬಳಕೆ ಇನ್ನಿತರ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಿಎಂ ಕೋರಿದರು.
ಹೆಸರಾಂತ ಕ್ರಿಕೆಟ್ ಪಟು ಅನಿಲ್ ಕುಂಬ್ಳೆ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಆರ್.ಅಶೋಕ್, ಕೆ.ಸಿ.ನಾರಾಯಣ ಗೌಡ, ಸಂಸದ ತೇಜಸ್ವಿ ಸೂರ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಇದ್ದರು. ಇದನ್ನೂ ಓದಿ: ಆಲಿಯಾ ಭಟ್ ವಿರುದ್ಧ ಟ್ವೀಟ್ ಮೂಲಕ ಭಾರಿ ಕೋಪ ವ್ಯಕ್ತಪಡಿಸಿದ್ದರು ಸುಶಾಂತ್ ಸಿಂಗ್
ಇದೇ ಸಂದರ್ಭದಲ್ಲಿ ಆರ್.ಕೆ.ಟ್ರಸ್ಟ್ ನ ರಮೇಶ್ ಕುಮಾರ್ 10 ಲಕ್ಷ ಮಾಸ್ಕ್ ಗಳನ್ನು ದೇಣಿಗೆಯಾಗಿ ನೀಡಿದರು. ಸಿಎಂ ಅನಾವರಣಗೊಳಿಸಿ ಸಾಂಕೇತಿಕವಾಗಿ ಧರಿಸುವುದರೊಂದಿಗೆ ಸಹೋದ್ಯೋಗಿಗಳು, ಹಿರಿಯ ಅಧಿಕಾರಿಗಳಿಗೆ ವಿತರಿಸಿದರು.