ಸಿಎಂಗೆ ಸರಣಿ ಸವಾಲು: ಆರ್ಥಿಕತೆ, ಕೃಷಿ, ಕೈಗಾರಿಕೆ ಕ್ಷೇತ್ರಕ್ಕೆ ಬೇಕಿದೆ ತುರ್ತು ಆಕ್ಸಿಜನ್

VV Special
Published on

ಬೆಂಗಳೂರು: ಕರೊನಾ ಮಹಾಮಾರಿಯ ಆಘಾತಕ್ಕೆ ದಿಕ್ಕು ತಪ್ಪಿ ಅಲ್ಲೋಲಕಲ್ಲೋಲವಾಗಿರುವ ಇಡೀ ರಾಜ್ಯದ ವ್ಯವಸ್ಥೆಯನ್ನು ಸರಿದಾರಿಗೆ ತರುವಂತಹ ಸರಣಿ ಸವಾಲುಗಳು ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಮುಂದಿದೆ. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಒಂದರ ಮೇಲೊಂದರಂತೆ ಬೆನ್ನಿಗೇರಿದ ಪ್ರವಾಹ, ಸಿಎಎ ವಿರೋಧಿ ಹೋರಾಟ, ರಾಜಕೀಯ ಬೆಳವಣಿಗೆ, ಉಪ ಚುನಾವಣೆ, ಸಂಪುಟ ವಿಸ್ತರಣೆಯಂತಹ ಸವಾಲು, ಸಮಸ್ಯೆಗಳನ್ನೆಲ್ಲ ಬಗೆಹರಿಸಿಕೊಂಡು ಗೆಲುವಿನ ನಗೆ ಬೀರಿದ್ದ ಅವರೀಗ ಇಡೀ ರಾಜ್ಯವನ್ನೇ ಹೊಸದಾಗಿ ಕಟ್ಟುವ ಮತ್ತೊಂದು ಹೊಣೆ ನಿಭಾಯಿಸಬೇಕಿದೆ.

ಆರ್ಥಿಕ ಹಿಂಜರಿತದಿಂದ ಮೊದಲೇ ತೊಂದರೆಯಲ್ಲಿದ್ದ ದೇಶಕ್ಕೆ ಕರೊನಾ ಮಹಾಮಾರಿ ಮತ್ತಷ್ಟು ಆಘಾತ ನೀಡಿದೆ. ದೇಶದ ಆರ್ಥಿಕ ಸ್ಥಿತಿ 30 ವರ್ಷಗಳಷ್ಟು ಹಿಂದಕ್ಕೆ ಹೋಗಿರು ವುದರಿಂದ ಎದುರಾಗುವ ಸವಾಲುಗಳನ್ನು ಎದುರಿಸಲು ಒಂದಷ್ಟು ಗಟ್ಟಿಯಾದ ನಿರ್ಧಾರ ಗಳನ್ನೇ ಯಡಿಯೂರಪ್ಪ ಕೈಗೊಳ್ಳ ಬೇಕಾಗಿದೆ. ಕೈಗಾರಿಕೆ, ಕೃಷಿ, ಆರ್ಥಿಕತೆ, ತೆರಿಗೆ ಹೆಚ್ಚಳ, ಉದ್ಯಮಿಗಳಿಗೆ ಜಿಎಸ್​ಟಿ ರಿಫಂಡ್ ಮಾಡಿಸುವುದು, ತೆರಿಗೆ ಮೂಲಗಳನ್ನು ಹೆಚ್ಚಿಸಿಕೊಳ್ಳುವುದು, ಅಮದು-ರಫ್ತು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕೇಂದ್ರದ ಮೇಲೆ ಒತ್ತಡ ತಂದು ಕೆಲ ನೀತಿಗಳಲ್ಲಿ ಬದಲಾವಣೆ ಮಾಡಿಕೊಳ್ಳುವುದು, ಕೇಂದ್ರದಿಂದ ಬರಬೇಕಾಗಿರುವ ಹಣ ಕಡಿತವಾಗದಂತೆ ನೋಡಿಕೊಳ್ಳುವುದೂ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಸಾಕಷ್ಟು ಸಮಸ್ಯೆಗಳಿವೆ. ಕರೊನಾ ಲಾಕ್​ಡೌನ್ ಮುಗಿಯುತ್ತಿದ್ದಂತೆ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂಬುದನ್ನು ತಜ್ಞರು ಗುರುತಿಸುತ್ತಾರೆ. ಲಾಕ್​ಡೌನ್ ಮುಗಿದ ಬಳಿಕದ ಮೂರ್ನಾಲ್ಕು ತಿಂಗಳು ಅತ್ಯಂತ ಪ್ರಮುಖ ಘಟ್ಟವಾಗಿದೆ. ಆ ಅವಧಿಯಲ್ಲಿ ಸರ್ಕಾರ ಹೇಗೆ ಕಾರ್ಯ ನಿರ್ವಹಿಸಲಿದೆ ಎಂಬುದು ಅತ್ಯಂತ ಮುಖ್ಯ ಹಾಗೂ ಕುತೂಹಲಕರವಾಗಿದೆ.

ವೃತ್ತಿ ತೆರಿಗೆ ಸಂಗ್ರಹ ಎಷ್ಟಿದೆ

ರಾಜ್ಯದಲ್ಲಿ 16 ಲಕ್ಷ ಸಂಬಳದಾರರಿಂದ ಹಾಗೂ ಉದ್ಯಮಿಗಳಿಂದ ಒಟ್ಟು 1500 ಕೋಟಿ ರೂ. ವೃತ್ತಿ ತೆರಿಗೆ ಸಂಗ್ರಹವಾಗುತ್ತಿದೆ. ಪೆಟ್ರೋಲ್, ಡೀಸೆಲ್​ನಿಂದ ಮಾರಾಟ ತೆರಿಗೆ 11-12 ಸಾವಿರ ಕೋಟಿ ರೂ. ಸಂಗ್ರಹವಾಗುತ್ತಿದೆ.

ಈಗ ಉತ್ಪಾದನೆ ಸಂಪೂರ್ಣ ನಿಂತಿದೆ. ಅದನ್ನು ಸರಿದೂಗಿಸಲು ವಿದ್ಯುತ್, ನೀರಿನ ಬಿಲ್​ಗಳನ್ನು ಮುಂದಕ್ಕೆ ಹಾಕುವುದು, ಜಿಎಸ್​ಟಿ ರಿಫಂಡ್ ಶೀಘ್ರದಲ್ಲಿ ಪಾವತಿ ಮಾಡುವುದು, ಬಂಡವಾಳ ದೊರಕುವಂತೆ ಮಾಡುವುದು, ಅಧಿಕಾರಿವರ್ಗ ತೊಂದರೆ ಕೊಡದಂತೆ ಕಾಪಾಡಬೇಕಾಗಿದೆ. | ಬಿ.ಟಿ. ಮನೋಹರ್ ತೆರಿಗೆ ಸಲಹೆಗಾರರು

ತಜ್ಞರ ಸಲಹೆಗಳೇನು

  • ಅನುತ್ಪಾದಕ ವೆಚ್ಚ ಕಡಿಮೆ ಮಾಡಲೇಬೇಕು
  • ಅಧಿಕಾರಿಗಳ ವಿದೇಶ ಪ್ರಯಾಣ, ಅದ್ದೂರಿ ಸಭೆ, ಸಮಾರಂಭಕ್ಕೆ ತಡೆ
  • ಅಧಿಕಾರಿಗಳ ಎರಡು ಅಥವಾ ಮೂರು ವಾಹನ ಬಳಕೆಗೆ ಕಡಿವಾಣ ಬೀಳಬೇಕು
  • ಇ-ಆಫೀಸ್ ವ್ಯವಸ್ಥೆಯ ಮೂಲಕ ಕಚೇರಿಗಳ ವೆಚ್ಚ ಕಡಿಮೆಯಾಗಲಿ
  • ಸಿಬ್ಬಂದಿ ಇಲ್ಲದೆ ಇದ್ದಾಗ ವಿದ್ಯುತ್ ಬಳಕೆಗೆ ನಿಯಂತ್ರಣ
  • ಟ್ಯಾಕ್ಸ್ ಬೇಸ್ ಹೆಚ್ಚಳ ಮಾಡುವುದು
  • 15 ವರ್ಷದಿಂದ ಹೆಚ್ಚಳವಾಗದ ವೃತ್ತಿ ತೆರಿಗೆ ಹೆಚ್ಚಿಸುವುದು
  • ಆಸ್ತಿ ತೆರಿಗೆ ಶೇ. 40 ಮಾತ್ರ ಸಂಗ್ರಹ ವಾಗುತ್ತಿದ್ದು ಅದನ್ನು ಹೆಚ್ಚಿಸುವುದು
  • ಕನಿಷ್ಠ ಎರಡು ವರ್ಷಗಳ ಕಾಲ ನೇಮಕಾತಿಗಳಿಗೆ ಬ್ರೇಕ್ ಹಾಕುವುದು
  • ಜಿಎಸ್​ಟಿ ವ್ಯಾಪ್ತಿಗೆ ಒಳಪಡದ ಅಂಗಡಿ, ಮುಂಗಟ್ಟುಗಳಿಗೆ ಕನಿಷ್ಠ ಪ್ರಮಾಣದ ತೆರಿಗೆ ವಿಧಿಸುವುದು

ಸರ್ಕಾರ ವಿತ್ತೀಯ ಕೊರತೆ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವ ಅಗತ್ಯವಿದೆ. ಬ್ಯಾಂಕ್​ಗಳಲ್ಲಿ ಲಿಕ್ವಿಡಿಟಿ ಜಾಸ್ತಿ ಮಾಡಬೇಕಾಗಿದೆ. ಕೈಗಾರಿಕೆಗಳಿಗೆ ಬಂಡವಾಳದ ಅಗತ್ಯವಿದೆ. ಎರಡನೇ ಮಹಾಯುದ್ದದ ನಂತರ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಕೆಲಸ ಮಾಡಬೇಕಾಗಿದೆ. | ಡಾ. ಅಬ್ದುಲ್ ಅಜೀಜ್ ಹಿರಿಯ ಅರ್ಥಶಾಸ್ತ್ರಜ್ಞರು

ತಕ್ಷಣದ ಸವಾಲುಗಳೇನು?

  • ರಾಜ್ಯದಲ್ಲಿರುವ 6 ಲಕ್ಷ ಎಂಎಸ್​ಎಂಇಗಳಲ್ಲಿ 60 ಲಕ್ಷ ಜನ ಉದ್ಯೋಗಿಗಳಿದ್ದು,ಆರ್ಥಿಕ ಹಿಂಜರಿತದಿಂದ 30 ಲಕ್ಷ ಉದ್ಯೋಗ ನಷ್ಟವಾಗಿರುವ ಅಂದಾಜಿದೆ. ಕರೊನಾ ನಂತರ ಸಾಕಷ್ಟು ಕಾರ್ವಿುಕರು ಸ್ಥಳಾಂತರವಾಗಿದ್ದು, ಅವರಿಲ್ಲದೆ ಉದ್ಯಮ ನಡೆಯಲು ಸಾಧ್ಯವಿಲ್ಲ. ಆದ್ದರಿಂದ ಕೂಲಿ ಕಾರ್ವಿುಕರನ್ನು ವಾಪಸ್ ಕರೆತರುವುದು
  • ಸಂಘಟಿತ ವಲಯದಲ್ಲಿರುವ ಶೇ. 93 ಕಾರ್ವಿುಕರನ್ನು ಕರೆತರುವುದು ಕಷ್ಟದ ಕೆಲಸ
  • ರಾಜ್ಯದಲ್ಲಿ ಕೃಷಿ ಚಟುವಟಿಕೆ ಆರಂಭವಾಗಬೇಕಾಗಿದೆ. ರಸಗೊಬ್ಬರ, ಬಿತ್ತನೆ ಬೀಜ ದಾಸ್ತಾನು, ನೀರಾವರಿ ಯೋಜನೆ ಪೂರ್ಣಗೊಳಿಸಬೇಕಿದೆ
  • ಸೇವಾ ಕ್ಷೇತ್ರದಲ್ಲಿ ರಫ್ತು ಮೂರನೇ ಒಂದು ಭಾಗದಷ್ಟಿದ್ದು, ಮೂಲಸೌಕರ್ಯ ಒದಗಿಸಬೇಕು
  • ಸಂಪನ್ಮೂಲ ಕ್ರೋಡೀಕರಣ, ತೆರಿಗೆ ವ್ಯಾಪ್ತಿ ವೃದ್ಧಿ, ಸಾರ್ವಜನಿಕ ವೆಚ್ಚ ಹೆಚ್ಚಾಗಿಸಲು ಪ್ರಯತ್ನಿಸಬೇಕು
  • 15ನೇ ಹಣಕಾಸು ಆಯೋಗದಲ್ಲಿ -ಠಿ;11 ಸಾವಿರ ಕೋಟಿ ಕೊರತೆಯಾಗಿದೆ, ಕೇಂದ್ರ ದಿಂದ ಹೆಚ್ಚಿನ ಸಂಪನ್ಮೂಲ ತರಬೇಕಾಗಿದೆ
  • ಕೃಷಿ, ಕೈಗಾರಿಕೆ ಕಚ್ಚಾವಸ್ತು ಕೊರತೆಯಾಗದಂತೆ ಕ್ರಮ
  • ಆಮದು ರಫ್ತು ನೀತಿಯಲ್ಲಿ ಕೆಲ ಬದಲಾವಣೆಗೆ ಕೇಂದ್ರದ ಮೇಲೆ ಒತ್ತಡ ತರಬೇಕು
  • ಉದ್ಯಮಗಳ ಆರಂಭಕ್ಕೆ ಉಂಟಾಗಿರುವ ಬಂಡವಾಳದ ಕೊರತೆ ನೀಗಿಸಬೇಕು
  • ವಿತ್ತೀಯ ಕೊರತೆ ಜಿಎಸ್​ಡಿಪಿಯ ಶೇ. 3ಕ್ಕಿಂತ ಹೆಚ್ಚಾದರಷ್ಟೇ ಆರ್ಥಿಕ ಚಟುವಟಿಕೆಗಳಿಗೆ ಅನುಕೂಲ, ಆದ್ದರಿಂದ ವಿತ್ತೀಯ ಹೊಣೆಗಾರಿಕೆ ಕಾಯ್ದೆ ತಿದ್ದುಪಡಿಗೆ ಒತ್ತಡ ತರಬೇಕು
  • ಜಿಎಸ್​ಟಿ ರಿಫಂಡ್, ಪಾವತಿ ತಡವಾದರೆ ದಂಡ ಶುಲ್ಕದಿಂದ ವಿನಾಯಿತಿ, ನಿರ್ಬಂಧಗಳಿಗೆ 6 ತಿಂಗಳ ತಡೆ, ಅಧಿಕಾರಿಗಳ ಕಿರಿಕಿರಿ ಇಲ್ಲದಂತೆ ನೋಡಿಕೊಳ್ಳುವುದು
  • ಕೃಷಿ ಕೊಯ್ಲಿಗೆ ಉಪಕರಣಗಳನ್ನು ನೆರೆ ರಾಜ್ಯದಿಂದ ಆಮದು ಮಾಡಿಕೊಳ್ಳುವುದು, ರಸಗೊಬ್ಬರ, ಕೀಟನಾಶಕಕ್ಕೆ ವಿದೇಶದಿಂದ ಅಗತ್ಯ ಉತ್ಪನ್ನ ಆಮದು
  • ನರೇಗಾದಲ್ಲಿ ಹೆಚ್ಚಿನ ಹಣವನ್ನು ಕೇಂದ್ರದಿಂದ ಪಡೆದು ಗ್ರಾಮೀಣ ಭಾಗದಲ್ಲಿ ಕೂಲಿ ಒದಗಿಸಬೇಕು

ಕರೊನಾ ನಿಯಂತ್ರಣಕ್ಕೆ ಬಂದ ನಂತರ ಸರ್ಕಾರದ ಮುಂದೆ ಒಂದಷ್ಟು ಸವಾಲುಗಳಿವೆ. ಅವುಗಳನ್ನು ಮೀರಿ ಅಭಿವೃದ್ಧಿ ಸಾಧಿಸಬೇಕಾದರೆ ಒಂದಷ್ಟು ಬಿಗಿ ಕ್ರಮ ಕೈಗೊಳ್ಳಬೇಕಾಗುತ್ತದೆ. | ಪ್ರೊ.ಎಸ್.ಆರ್. ಕೇಶವ್ ಪ್ರಾಧ್ಯಾಪಕರು, ಅರ್ಥಶಾಸ್ತ್ರ, ಬೆಂವಿವಿ ರಸಗೊಬ್ಬರ, ಕೀಟನಾಶಕ, ಬಿತ್ತನೆ ಬೀಜ ತೊಂದರೆಯಾಗದಂತೆ ನೋಡಿಕೊಳ್ಳ ಬೇಕಾಗಿದೆ. ರೈತರ ಸಾಲ ವಸೂಲಿ ನಿಲ್ಲಿಸಬೇಕಾಗಿದೆ. ಕೃಷಿ ಯಂತ್ರೋಪಕರಣಕ್ಕೆ ಆದ್ಯತೆ ನೀಡಬೇಕಾಗಿದೆ. | ಜೆ.ಸಿ. ಬಯ್ಯಾರೆಡ್ಡಿ ಅಧ್ಯಕ್ಷರು, ಪ್ರಾಂತ ರೈತ ಸಂಘ ದೇಶದ ಆರ್ಥಿಕ ಸ್ಥಿತಿ 30 ವರ್ಷ ಹಿಂದೆ ಸರಿದಿದೆ. ಜಿಡಿಪಿ ಶೇ.2ಕ್ಕೆ ಇಳಿದಿದೆ. ಇಂತಹ ಸಂದರ್ಭದಲ್ಲಿ ಕೈಗಾರಿಕಾ ರಂಗ ಚೇತರಿಸಿಕೊಳ್ಳಲು ಕೇಂದ್ರದಿಂದ ಹೆಚ್ಚಿನ ನೆರವು ಪಡೆಯಲು ಪ್ರಯತ್ನಿಸಬೇಕು. | ಸಿ.ಆರ್. ಜನಾರ್ದನ್ ಅಧ್ಯಕ್ಷರು, ಎಫ್​ಕೆಸಿಸಿಐ

| ರುದ್ರಣ್ಣ ಹರ್ತಿಕೋಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net