

ಬೆಂಗಳೂರು: ನಾವೇನು ಸಾಲ .ಮಾಡಿ ತುಪ್ಪ ತಿಂದಿಲ್ಲ. ಮೋಜಿಗಾಗಿ, ಔತಣಕ್ಕಾಗಿ ಸಾಲದ ಹಣ ಬಳಸಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದರು.
ವಿಧಾನಸೌಧದಲ್ಲಿ ಬಜೆಟ್ ಮೇಲೆ ಉತ್ತರ ನೀಡಿದ ಅವರು, ಕೋವಿಡ್ ಸಾಂಕ್ರಾಮಿಕದಿಂದ ಜನರ ಜೀವ ರಕ್ಷಣೆ ಮಾಡಲು ಮತ್ತು ಪ್ರಕೃತಿ ವಿಕೋಪ ತಂದಿತ್ತ ಸಂಕಷ್ಟ ನಿವಾರಣೆಗೆ ಸಾಲದ ಹಣ ಬಳಸಿದ್ದೇವೆ. ಅಭಿವೃದ್ಧಿ ಚಕ್ರವನ್ನು ಚಾಲನೆಯಲ್ಲಿಡಲು ಸಾಲ ಮಾಡಿದ್ಧೇವೆ ಎಂದು ಪ್ರತಿಪಕ್ಷಗಳಿಗೆ ಟಾಂಗ್ ಕೊಟ್ಟರು.
ಕೇಂದ್ರ ಸರ್ಕಾರ ೨೦೨೦-೨೧ ನೇ ಸಾಲಿಗೆ ರಾಜ್ಯಗಳಿಗೆ ಜಿಎಸ್ ಡಿಪಿಯ ಶೇ.೪ ರಷ್ಟು ಸಾಲ ಪಡೆಯಲು ಅನುಮತಿ ನೀಡಿದೆ ಎಂದು ಸಮರ್ಥಿಸಿಕೊಂಡರು. ಆರ್ಥಿಕತೆಯ ಸ್ಥಗಿತತೆಯಿಂದ ಜಿಡಿಪಿ ಬೆಳವಣಿಗೆ ಕುಂಠಿತವಾಗಿದೆ. ತೆರಿಗೆ ಸಂಗ್ರಹಣೆಯಲ್ಲಿ ಕೊರತೆಯಾಗಿದೆ. ಆದರೂ ಬದ್ಧ ವೆಚ್ಚಗಳ ನಿರ್ವಹಣೆ ಜತೆಗೆ ಅಭಿವೃದ್ಧಿ ಕಾರ್ಯಗಳ ಅನುಷ್ಠಾನ ಕೈಗೊಂಡಿದ್ದೇವೆ ಎಂದು ಹೇಳಿದರು.
ಅಶ್ಲೀಲ ಸಿಡಿ ವಿಚಾರದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಗಲಾಟೆ ನಡುವೆಯೇ ಸಿಎಂ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿದರು. ಇದೇ ವೇಳೆ ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು.