

ಚಿಕ್ಕನಾಯಕನಹಳ್ಳಿ: ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಜೆ.ಸಿ. ಮಾಧುಸ್ವಾಮಿ ನಮ್ಮ ಸರ್ಕಾರಕ್ಕೆ ದೊಡ್ಡ ಆಸ್ತಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಗುಣಗಾನ ಮಾಡಿದರು.
ಪಟ್ಟಣದಲ್ಲಿ ಗುರುವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿದ ಸಿಎಂ, ಒರಟು ಸ್ವಾಭಾವದ ಮಾಧುಸ್ವಾಮಿ ಅಧಿಕಾರದ ರಾಜಕಾರಣ ಮಾಡದೇ ಜನಪರ ರಾಜಕಾರಣ ಮಾಡುತ್ತಿರುವ ಚಿಕ್ಕನಾಯಕನಹಳ್ಳಿಯ ದೊಡ್ಡನಾಯಕ ಎಂದು ಬಣ್ಣಿಸಿದರು.
ಹೇಮಾವತಿ ತುಮಕೂರಿಗೆ ಹರಿಯೋದಕ್ಕೆ ಸಾಧ್ಯತೆಯೇ ಇರಲಿಲ್ಲ. ಆ ಸಂದರ್ಭದಲ್ಲಿ ಮಾಧುಸ್ವಾಮಿ ಹೋರಾಟ ಮಾಡಿದ ಫಲವಾಗಿ ಅಂದಿನ ಸಿಎಂ ರಾಮಕೃಷ್ಣ ಹೆಗಡೆ ದೊಡ್ಡ ಮನಸ್ಸು ಮಾಡಿ ಹೇಮಾವತಿ ಯೋಜನೆಗೆ ಹಸಿರು ನಿಶಾನೆ ತೋರಿದರು. ತುಮಕೂರಿನ ಮಣ್ಣು ಬಹಳ ಶ್ರೇಷ್ಠ. ಇದಕ್ಕೆ ಹೇಮಾವತಿ ನೀರನ್ನು ಸೇರಿಸಿದರೆ, ಭೂಮಿ ತಾಯಿ ಬಂಗಾರದ ಬೆಳೆ ಕೊಡ್ತಾಳೆ ಎಂದರು.
ಈ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೇ ಕೆಲವರು ಮೊಸರಲ್ಲಿ ಕಲ್ಲು ಹುಡುಕುತ್ತಾರೆ. ಸಣ್ಣ ವಿಚಾರ ಇಟ್ಕೊಂಡು ದೊಡ್ಡದು ಮಾಡ್ತಾರೆ. ಜಾತಿ, ಮತಗಳ ಆಧಾರದ ಮೇಲೆ ಜಾತಿಗಳ ಮಧ್ಯೆ ಸಂಘರ್ಷ ಹುಟ್ಟು ಹಾಕ್ತಿದ್ದಾರೆ. ಅಂತವರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯತಕೆ ಇಲ್ಲ. ಮಾಧುಸ್ವಾಮಿ ಅವರಿಗೆ ಸಂಪೂರ್ಣ ಆಶೀರ್ವಾದ ಮಾಡಬೇಕು ಎಂದು ಸಿಎಂ ಈ ವೇಳೆ ಮನವಿ ಮಾಡಿದರು.