

ತುಮಕೂರು
ಸಿಎಂ ಬಸವರಾಜ ಬೊಮ್ಮಾಯಿ ಬದಲಾವಣೆ ಇಲ್ಲವೆಂದು ಬೊಮ್ಮಾಯಿ ಸಂಪುಟದ ಹಿರಿಯ ಸಚಿವರಿಬ್ಬರು ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಿದರು.
ಮಂಗಳವಾರ ಸಂಜೆ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್, ಕಾಂಗ್ರೆಸ್ ನವರಿಗೆ ಬೇರೆ ಕೆಲಸ ಇಲ್ಲ. ಅವರ ಪಕ್ಷ ಮನೆಯೊಂದು ಮೂರು ಬಾಗಿಲಾಗಿದೆ. ವಿನಾಕಾರಣವಾಗಿ ಸಿಎಂ ಬೊಮ್ಮಾಯಿ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಸಿಎಂ ಬದಲಾವಣೆ ನೂರಕ್ಕೆ ನೂರು ಸುಳ್ಳು. ಅವರು ಸಮರ್ಥವಾಗಿ ಆಡಳಿತ ನಡೆಸುತಿದ್ದಾರೆ ಎಂದು ಸಮರ್ಥಿಸಿಕೊಂಡರು.
2023 ರಲ್ಲು ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ನಡೆಯುತ್ತದೆ. ರಾಜ್ಯದ ಇತಿಹಾಸದಲ್ಲಿ ಯಡಿಯೂರಪ್ಪ ನಂತರ ರೈತರ ಹಾಗೂ ರೈತರ ಮಕ್ಕಳಿಗೆ ಸಹಾಯ ಮಾಡಿದವರು ಬೊಮ್ಮಾಯಿ.ಅವರ ಯೋಜನೆಯಿಂದ ಲಕ್ಷಾಂತರ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ನವರು ಒಳ್ಳೆ ಆಡಳಿತ ಸಹಿಸಲಾಗದೇ ಸಿಎಂ ಬೊಮ್ಮಾಯಿ ಬದಲಾವಣೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹರಿ ಬಿಟ್ಟು ಜನರನ್ನು ದಾರಿ ತಪ್ಪಸಿಸುತ್ತಿದ್ದಾರೆ. ಕಾಂಗ್ರೆಸ್ ಅಪಪ್ರಚಾರಕ್ಕೆ ಯಾರೂ ಕಿವಿಗೊಡಬಾರದು.ಸಿದ್ದರಾಮೋತ್ಸವ ಸಮಾವೇಶಕ್ಕೆ ನಮ್ಮ ಬಿಜೆಪಿ ಸರ್ಕಾರ ಹೆದರೋಲ್ಲ ಎಂದರು.
ಸ್ವಾತಂತ್ರೃ ಹೋರಾಟಗಾರರನ್ನು ಗೌರವಿಸಲು ನಗರಕ್ಕೆ ಆಗಮಿಸಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಸಹ, ಬಿಜೆಪಿ ಮೂರನೇ ಸಿಎಂ ಬರುತ್ತಾರೆ ಎಂಬುದು ಒಂದು ಕಲ್ಪನೆಯಷ್ಟೇ, ಅಮಿತ್‌ಶಾ ಭೇಟಿ ಸಂದರ್ಭದಲ್ಲಿ ಲೋಕಾಭಿರಾಮದಿಂದ ಮಾತನಾಡಿದ್ದೇವೆಯಷ್ಟೇ. ರಾಜಕೀಯ ಬಗ್ಗೆ ಚರ್ಚೆ ನಡೆದಿಲ್ಲ, ಸಿಎಂ ಬದಲಾವಣೆ ಅಥವಾ ಮಂತ್ರಿ ಮಂಡಲ ವಿಸ್ತರಣೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಪ್ರತಿಕ್ರಿಯಿಸಿದರು.