'ಮೊನ್ನೆ ತಾನೇ ನಾನು ಅವರು ವಿಡಿಯೋ ಕಾನ್ಫರೆನ್ಸ್​ನಲ್ಲಿ ಭಾಗಿಯಾಗಿದ್ವಿ..': ಶಿವರಾಂ ಅಂತಿಮ ದರ್ಶನ ಪಡೆದ ಸಿಎಂ ಮತ್ತೇನೆಂದರು?

Untitled-2
Published on

ಬೆಂಗಳೂರು: ಅಗಲಿದ ಹಿರಿಯ ನಟ ಶಿವರಾಂ ಅವರ ಅಂತಿಮ ದರ್ಶನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಡೆದಿದ್ದು, ಮೊನ್ನೆಯಷ್ಟೇ ಅವರೊಂದಿಗೆ ಕಳೆದ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.

ಶಿವರಾಂ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ತಮ್ಮದೇ ಆದಂತಹ ಉನ್ನತ ಸ್ಥಾನದಲ್ಲಿದ್ದ ನಟ ಶಿವರಾಂ ಅವರ ಅಗಲಿಕೆ ಇಡೀ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಅವರ ಅಭಿನಯ, ಪಾತ್ರದಲ್ಲಿ ನೈಜತೆ, ಶ್ರೇಷ್ಠತೆ ಇತ್ತು. ಅವರು ಪಾತ್ರಕ್ಕೆ ಜೀವ ತುಂಬುವ ಕೆಲಸ ಮಾಡುತ್ತಿದ್ದರು ಎಂದು ಹೇಳಿದರು.

ರಾಷ್ಟ್ರಪ್ರಶಸ್ತಿ ಪಡೆದಿದ್ದ ಶಿವರಾಂ ನಿರ್ಮಾಪಕ ಕೂಡ ಆಗಿದ್ದರು. ಅವರು ಎಲ್ಲರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ಅವರ ಬದುಕು ಕೇವಲ ಚಿತ್ರರಂಗಕ್ಕೆ ಸೀಮಿತವಾಗಿರಲಿಲ್ಲ ಎಂದ ಸಿಎಂ, ಮೊನ್ನೆ ತಾನೇ ನಾನು, ಅವರು ವಿಡಿಯೋ ಕಾನ್ಫರೆನ್ಸ್​​ನಲ್ಲಿ ಭಾಗಿಯಾಗಿದ್ವಿ ಎಂದು ಅಂದಿನ ಕ್ಷಣಗಳನ್ನು ನೆನಪಿಸಿಕೊಂಡರು.

ಸರ್ಕಾರ ಅವರಿಗೆ ಪೊಲೀಸ್ ಗೌರವದೊಂದಿಗೆ ಅಂತಿಮ ನಮನ ಸಲ್ಲಿಸಲಿದೆ. ಅವರ ಕುಟುಂಬಕ್ಕೆ ದೇವರು ದುಃಖ ಸಹಿಸಿಕೊಳ್ಳುವ ಶಕ್ತಿ ಕೊಡಲಿ ಎಂದು ಕೋರಿದ ಸಿಎಂ, ಸರ್ಕಾರದಿಂದ ಯಾವೆಲ್ಲ ವ್ಯವಸ್ಥೆ ಮಾಡಿಕೊಡಬೇಕೋ ಅವೆಲ್ಲವನ್ನೂ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net