

ತುಮಕೂರು: ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾದರೆ ಯಾರಿಗೇನು ತೊಂದರೆ ಆಗಲಿದೆ. ಅದನ್ನು ಹೈಕಮಾಂಡ್ ನಿಭಾಯಿಸಿ ತೀರ್ಮಾನ ಕೈಗೊಳ್ಳಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ನಾಯಕತ್ವ ಬದಲಾವಣೆ ಕುರಿತು ಸ್ಪಷ್ಟನೆ ನೀಡಿದರು.
ನಗರದಲ್ಲಿ ಸೋಮವಾರ ಪತ್ರಕರ್ತರ ಪ್ರಶ್ನೆಗೆ ತೀಕ್ಷಣವಾಗಿ ಪ್ರತಿಕ್ರಿಯಿಸಿದ ಅವರು, ಸಿಎಂ ಆಕಾಂಕ್ಷಿಗಳು ಹೆಚ್ಚಾದರೆ ನಿಮಗೇನು ತೊಂದರೆ. ಅದು ಹೈಕಮಾಂಡ್ಗೆ ಬಿಟ್ಟ ವಿಚಾರ. ಇನ್ನಷ್ಟು ಆಕಾಂಕ್ಷಿಗಳು ಹೆಚ್ಚಾದರು ಹೈಕಮಾಂಡ್ನವರೇ ನಿಭಾಯಿಸಲಿದ್ದಾರೆ. ಸಿಎಂ ಆಗುವವರು ಒಬ್ಬರೇ ಅಲ್ಲವಾ. ಈಗ ಆ ಪರಿಸ್ಥಿತಿ ಇಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಲ್ಲಿದ್ದು ಅವರೇ ಮುಂದುವರೆಯುತ್ತಾರೆ ಎಂದರು.
ಸಿಎಂ ಆಗ್ತೀನಿ ಅನ್ನುವ ಇಂಗಿತ ವ್ಯಕ್ತಪಡಿಸಿರುವ ದೇಶಪಾಂಡೆ ಹೇಳಿಕೆ ಕುರಿತಂತೆ "ಮುಖ್ಯಮಂತ್ರಿಗಳಿಗೆ ಸಂಬಂಧಪಟ್ಟಂತೆ ಯಾವುದಕ್ಕು ಕೂಡ ಉತ್ತರ ಕೊಡಲಿಕ್ಕೆ ಇಷ್ಟುಪಡುವುದಿಲ್ಲ. ಈಗ ಮುಖ್ಯಮಂತ್ರಿಗಳಿದ್ದಾರೆ, ಇರುತ್ತಾರೆ ಎಂದಷ್ಟೇ ಜಾರಿಕೊಂಡರು.
ಇದೊಳ್ಳೆ ಕತೆಯಾಯಿತಲ್ಲ, ಊಟಕ್ಕೂ ಸೇರಬಾರದಾ?
ಸಚಿವ ಸತೀಶ್ ಜಾರಕಿಹೊಳಿ ಮನೆಗೆ ಭೇಟಿ ಕುರಿತು ಈಗಾಗಲೇ ಸ್ಪಷ್ಟೀಕರಣಕೊಟ್ಟಿದ್ದೀನಿ. ಇದೊಳ್ಳೆ ಕತೆಯಾಯಿತಲ್ಲ. ಊಟಕ್ಕೂ ಸೇರಬಾರದಾ ಎಂದು ಸಚಿವ ಪರಮೇಶ್ವರ ಪತ್ರಕರ್ತರನ್ನೇ ಮರುಪ್ರಶ್ನಿಸಿದರು.
ವಿಧಾನಸೌಧದ ನನ್ನ ಕಚೇರಿಯಲ್ಲಿದ್ದ ವೇಳೆ ವರ್ಗಾವಣೆಗೆ ಸಂಬಂಧಿಸಿದಂತೆ ಮಾತನಾಡಲು ಸತೀಶ್ ದೂರವಾಣಿ ಕರೆ ಮಾಡಿದ್ದರು. ಊಟಕ್ಕೆ ಹೋಗುತ್ತಿದ್ದೀನಿ ಮಧ್ಯಾಹ್ನದ ನಂತರ ಸಿಗುವುದಾಗಿ ಹೇಳಿದೆ. ಹಾಗಾದರೆ, ನಮ್ಮ ಮನೆಗೆ ಊಟಕ್ಕೆ ಬನ್ನಿ ಎಂದು ಆಹ್ವಾನಿಸಿದರು. ರೊಟ್ಟಿ ತಿಂದು ಬಹಳ ದಿನವಾಗಿತ್ತು ಅದಕ್ಕೆ ಆಹ್ವಾನ ನಿರಾಕರಿಸದೇ ಅವರ ಮನೆಗೆ ಹೋಗಿದ್ದೆ ಎಂದರು.
ಇಬ್ಬರೂ ರಾಜಕಾರಣಿಗಳು ಸೇರಿದಾಗ ಎನು ಮಾತನಾಡಲು ಸಾಧ್ಯ. ರಾಜಕಾರಣನೇ ಮಾತನಾಡಬೇಕು. ಅದನ್ನೇ ಮಾತನಾಡಿದ್ವಿ. ಅದನ್ನೆಲ್ಲ ನಿಮ್ಮ ಹತ್ತಿರ ಹಂಚಿಕೊಳ್ಳಲಿಕ್ಕೆ ಆಗುತ್ತಾ ಎಂದು ಭೇಟಿ ವಿಚಾರಕ್ಕೆ ಇತಿಶ್ರೀ ಹಾಡಲು ಪ್ರಯತ್ನಿಸಿದರು.