ಪೊಲೀಸರಿಂದಲೇ ಕ್ಲಬ್​,ರಿಯಲ್​ ಎಸ್ಟೇಟ್​ ದಂಧೆ: ವಿಧಾನಪರಿಷತ್ತಿನಲ್ಲಿ ಎಚ್​.ವಿಶ್ವನಾಥ್​ ಕಳವಳ

Vishwanath
Published on

ಬೆಂಗಳೂರು: ಜನರ ಮತ್ತು ನ್ಯಾಯಪರವಾಗಿ ಕೆಲಸ ಮಾಡಬೇಕಿದ್ದ ಪೊಲೀಸರೇ, ಕ್ಲಬ್​, ರಿಯಲ್​ ಎಸ್ಟೇಟ್​ ದಂಧೆ ನಡೆಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವರು ಯಾರು? ಎಂದು ಬಿಜೆಪಿಯ ಎಚ್​.ವಿಶ್ವನಾಥ್​ ಗೃಹಸಚಿವರಿಗೆ ಖಾರವಾಗಿ ಪ್ರಶ್ನಿಸಿದರು.

ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ, ಜಾಗ ಒತ್ತುವರಿ ಮಾಡಿಕೊಂಡು ಮೈಸೂರಿನಲ್ಲಿರುವ ಪೊಲೀಸ್​ ಭವನ ನಿರ್ಮಾಣ ಕುರಿತು ಮಾತು ಆರಂಭಿಸಿದ ವಿಶ್ವನಾಥ್​, ಪೊಲೀಸರು ಕ್ಲಬ್​, ಕಲ್ಯಾಣ ಮಂಟಪ, ಸ್ಕೂಲ್​, ರಿಯಲ್​ ಎಸ್ಟೇಟ್​ ಚಟುವಟಿಕೆಗಳಲ್ಲಿ ಕಾನೂನುಬಾಹಿರ ಕೃತ್ಯದಲ್ಲಿ ತೊಡಗಿದ್ದಾರೆ. ಇವರೇ ಈ ರೀತಿ ಮಾಡಿದರೆ, ಇವರನ್ನು ಪ್ರಶ್ನೆ ಮಾಡುವುದು ಯಾರು? ಮೈಸೂರಿನಲ್ಲಿ ಭೂ ಕಬಳಿಕೆ ಮಾಡಿಕೊಂಡು ಕಲ್ಯಾಣ ಮಂಟಪ ನಿರ್ಮಾಣ ಮಾಡಿದ್ದಾರೆ. ಇದಕ್ಕೆ ತೆರಿಗೆ ಪಾವತಿಸುತ್ತಿಲ್ಲ. ತೆರಿಗೆ ವಿನಾಯಿತಿ ತೆಗೆದುಕೊಂಡು ಸರ್ಕಾರಕ್ಕೆ ಬರಬೇಕಾದ ಆದಾಯ ನಷ್ಟ ಮಾಡಿದ್ದಾರೆ. ಈ ಎಲ್ಲ ಕೃತ್ಯಗಳಲ್ಲಿ ಭಾಗಿಯಾಗಿರುವ ಅಧಿಕಾರಿಗಳ ಮೇಲೆ ಏಕೆ? ಕ್ರಮವಾಗುತ್ತಿಲ್ಲ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಗೃಹ ಸಚಿವ ಜಿ.ಪರಮೇಶ್ವರ, ಮೈಸೂರಿನ ವೆಲ್ಫೇರ್​ ಟ್ರಸ್ಟ್​ನಿಂದ ನಡೆದಿರುವ ಹಣದ ಅವ್ಯವಹಾರ, ಭೂ ಒತ್ತುವರಿ ಪ್ರಕರಣ ಕುರಿತು ತನಿಖೆ ನಡೆಸಲು ಪ್ರತ್ಯೇಕ ಸಮಿತಿ ರಚಿಸಲಾಗುವುದು. ಸಮಿತಿಯ ವರದಿ ಆಧಾರದ ಮೇರೆಗೆ ಕ್ರಮಕೈಗೊಳ್ಳುತ್ತೇನೆ.2001ರಿಂದ 2017ರವರೆಗೆ 11 ಕೋಟಿ ರೂ.ಆದಾಯ ತೆರಿಗೆ ಕಟ್ಟಿಲ್ಲ. 2018ರಿಂದ ಟ್ರಸ್ಟ್​ನವರು ತೆರಿಗೆ ಸೇರಿ ಜಿಎಸ್​ಟಿ ಕಟ್ಟುತ್ತಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net