ಮುಚ್ಚುವ ಸ್ಥಿತಿಗೆ ಕೈಮಗ್ಗ ನಿಗಮ

10 KOTTUR 02
ಉಜ್ಜಿನಿಯಲ್ಲಿ ಇರುವ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಕಚೇರಿ.
Published on

ಕೊಟ್ಟೂರು: ಹಲವರ ಬದುಕಿಗೆ ಆಸರೆಯಾಗಿದ್ದ ಉಜ್ಜಿನಿಯ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಉಪಕೇಂದ್ರ ನೇಕಾರರ ಕೊರತೆಯಿಂದ ಮುಚ್ಚುವ ಸ್ಥಿತಿಗೆ ತಲುಪಿದೆ.

ಎಪ್ಪತ್ತು-ಎಂಬತ್ತರ ದಶಕದಲ್ಲಿ ಉಜ್ಜಿನಿ ಮತ್ತು ಬೆನಕನಹಳ್ಳಿಯ ನೂರಾರು ನೇಕಾರರ ಕುಟುಂಬಗಳು ಖಾಸಗಿ ಒಡೆತನದ ಮಗ್ಗಗಳಲ್ಲಿ ಸೀರೆ ನೇಯ್ದು, ಸಂಪೂರ್ಣವಾಗಿ ಕುಲವೃತ್ತಿ ಅವಲಂಬಿಸಿ ಬದುಕು ಕಟ್ಟಿಕೊಂಡಿದ್ದರು. ಇದನ್ನು ಮನಗಂಡ ಸರ್ಕಾರ ಉಜ್ಜಿನಿಯಲ್ಲಿ 1980ರಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಮಗ, ತೀವ್ರ ಕೈಮಗ್ಗ ಅಭಿವೃದ್ಧಿ ಯೋಜನೆಯಡಿ ಉಪಕೇಂದ್ರ ಆರಂಭಿಸಿದಾಗ, ನೇಕಾರರ ಸಂತೋಷಕ್ಕೆ ಪಾರವೇ ಇರಲಿಲ್ಲ. ಖಾಸಗಿ ಒಡೆತನದಲ್ಲಿ ನೇಕಾರಿಕೆ ಬಿಟ್ಟು ನಿಗಮದಿಂದ ಕಚ್ಚಾ ಸಾಮಗ್ರಿ ಪಡೆದು ಪಂಚೆ ನೇಯ್ದು ಕೂಲಿ ಪಡೆಯುತ್ತಿದ್ದರು.

ನೇಕಾರರು ವರ್ಷಕ್ಕೊಮ್ಮೆ ಇನ್ಸೆಂಟಿವ್ ಪಡೆಯುತ್ತಿದ್ದರು. ಮಳೆ ಬರಲಿ ಬಿಡಲಿ, ನೇಕಾರಿಕೆ ಕೈಹಿಡಿದಿತ್ತು. ನಿಗಮ ಆರಂಭವಾಗಿ 44 ವರ್ಷಗಳಾಗಿವೆ. ನೀಡುವ ಕೂಲಿ ಸಾಲುತ್ತಿಲ್ಲವೆಂಬುದು ನೇಕಾರರ ಕೊರಗು. ಮೇಲಾಗಿ ಯುವ ಪೀಳಿಗೆ ನೇಕಾರಿಕೆ ಮಾಡುತ್ತಿಲ್ಲ. ನಿಗಮದಲ್ಲಿ ನೂರಾರು ಸಂಖ್ಯೆಯಲ್ಲಿದ್ದ ನೇಕಾರರು ಈಗ ಬೆರಳೆಣಿಕೆ ಸಂಖ್ಯೆಗೆ ಇಳಿದಿದ್ದಾರೆ.


ಸದಾ ನೇಕಾರರಿಂದ ತುಂಬಿರುತ್ತಿದ್ದ ನಿಗಮ ತಿಂಗಳಿಗೆ ಎರಡು ಸಾರಿ ಬಾಗಿಲು ತೆರೆಯುತ್ತದೆ. ಇದರ ಸಂಪೂರ್ಣ ಉಸ್ತುವಾರಿಯನ್ನು ರಾಣೆಬೆನ್ನೂರು ಕೈಮಗ್ಗ ನಿಗಮವಹಿಸಿಕೊಂಡಿದ್ದು, 15 ದಿನಕ್ಕೊಮ್ಮೆ ಅಲ್ಲಿನ ಸಿಬ್ಬಂದಿ ಉಜ್ಜಿನಿಗೆ ಆಗಮಿಸಿ ನೇಕಾರರು ನೇಯ್ದ ಬಟ್ಟೆ ತೆಗೆದುಕೊಂಡು ಬಟವಾಡೆ ಮಾಡಿ ತೆರಳುತ್ತಾರೆ. ಬಳ್ಳಾರಿ,ವಿಜಯನಗರ ಜಿಲ್ಲೆಯಲ್ಲಿ ಉಜ್ಜಿನಿಯಲ್ಲಿ ಮಾತ್ರ ಕೈಮಗ್ಗ ನಿಗಮವಿದೆ.

ಹಗರಿಬೊಮ್ಮನಹಳ್ಳಿಯಲ್ಲಿದ್ದ ನಿಗಮ ನೇಕಾರರ ಕೊರತೆಯಿಂದ ಮುಚ್ಚಿ ಏಳು ವರ್ಷಗಳಾಗಿವೆ. ಈಗಲೂ ನೇಕಾರಿಕೆ ಬಿಡದ ಎರಡು ಕುಟುಂಬಗಳು ಬಟ್ಟೆ ನೇಯ್ದುಕೊಂಡು ಉಜ್ಜಿನಿಯ ನಿಗಮಕ್ಕೆ ತಂದು ಬಟವಾಡೆ ಮಾಡುತ್ತಿವೆ. ಇಷ್ಟೇ ಅಲ್ಲದೆ ಉಜ್ಜಿನಿಗೆ ನೂರಾರು ಕಿಮೀ ದೂರದ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಮಲ್ಲೂರುಹಳ್ಳಿ, ಕಲ್ಲಹಳ್ಳಿ ನೇಕಾರರು 15 ದಿನಕ್ಕೊಮ್ಮೆ ನೇಯ್ದ ಬಟ್ಟೆ ತಂದು ಬಟವಾಡೆ ಮಾಡಿಸಿಕೊಳ್ಳುತ್ತಾರೆ. ಈಗ ತಿಂಗಳಿಗೆ ಎರಡು ಸಾರಿ ಬಾಗಿಲು ತೆರೆಯುವ ನಿಗಮ ನೇಕಾರರ ಕೊರತೆಯಿಂದ ತಿಂಗಳಿಗೊಮ್ಮೆ ಬಾಗಿಲು ತೆರೆಯುತ್ತಿದ್ದು, ಮುಂದೊಂದು ದಿನ ಶಾಶ್ವತವಾಗಿ ಬಾಗಿಲು ಮುಚ್ಚುವ ಕಾಲ ದೂರವಿಲ್ಲ ಎನ್ನಬಹುದು.

ಇಲ್ಲಿನ ನೇಕಾರರು ವಿದ್ಯಾ ವಿಕಾಸ ಯೋಜನೆಯಡಿ ಶರ್ಟ್, ಸ್ಕರ್ಟ್ ನೇಯುತ್ತಾರೆ. ಬೇರೆ ಬೇರೆ ಬಟ್ಟೆ ನೇಯುವ ತರಬೇತಿ ನೀಡುವ ಚಿಂತನೆ ಇದೆ. ಮುಖ್ಯವಾಗಿ ಇಂದಿನ ಯುವ ಪೀಳಿಗೆಗೆ ನೇಕಾರಿಕೆ ಬಗ್ಗೆ ಆಸಕ್ತಿ ಇಲ್ಲ. ಬೇರೆ ಉದ್ಯೋಗಕ್ಕೆ ಹೋಗುತ್ತಿದ್ದಾರೆ. ಇದರಿಂದ ನೇಕಾರರ ಕೊರತೆ ಹೆಚ್ಚಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ನೇಕಾರರು ನಿಗಮದಲ್ಲಿದ್ದರೆ ಪ್ರತಿ ದಿನವೂ ಕಚ್ಚಾ ಸಾಮಗ್ರಿ, ಬೇಲ್ ಕೊಡುತ್ತಿದ್ದೆವು. ಅದೀಗ ಆಗುತ್ತಿಲ್ಲ. ನಿಗಮ ಪ್ರೋತ್ಸಾಹ ದನ ಕೊಡುತ್ತಿತ್ತು. ಈಗ ನಿಲ್ಲಿಸಿದೆ. ಪವರ್ ಲೂಮ್ಸ್ ಬಂದ ಮೇಲೆ ಕೈಮಗ್ಗಗಳಿಗೆ ಭಾರಿ ಹೊಡೆತ ಬಿದ್ದಿದೆ.ಬಿ.ಪಾಂಡುರಂಗಪ್ರಭಾರ ಯೋಜನಾಧಿಕಾರಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಉಜ್ಜಿನಿ

ಉದ್ಯೋಗ ಖಾತ್ರಿ ಕೆಲಸಕ್ಕೆ ಗಂಡ-ಹೆಂಡ್ತಿ ಹೋದರೆ, 700 ರೂ. ಕೂಲಿ ತರ‌್ತೀವಿ. ಇಬ್ಬರೂ ದಿನವೆಲ್ಲ ಬಟ್ಟೆ ನೇಯ್ದರೂ 300 ರೂ. ಬರುವುದಿಲ್ಲ. ನಿಗಮದಲ್ಲಿ ಶರ್ಟಿಂಗ್ ಒಂದು ಮೀಟರ್‌ಗೆ 34 ರೂ. ಸ್ಕರ್ಟಗೆ 23 ರೂ. ನೀಡುತ್ತಾರೆ. ಇದರಿಂದ ಕುಟುಂಬ ನಿರ್ವಹಣೆ ಆಗುವುದಿಲ್ಲ. ನೂರು ಜನ ನೇಕಾರರಲ್ಲಿ ಈಗ ಕೇವಲ 10 ಜನ ಇದ್ದಾರೆ. ನೇಕಾರಿಕೆ ವೃತ್ತಿ ಬಿಟ್ಟು ಬೇರೆ ಕೆಲಸ ನೋಡಿಕೊಳ್ಳುತ್ತಿದ್ದಾರೆ.ಮುಖಪ್ಪರ ಮಂಜುನಾಥನಿಗಮದ ನೇಕಾರ, ಉಜ್ಜಿನಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net